ಕೊಡವ ತಕ್ಕ್ ಎಳ್ತ್ಕಾರಡ ಕೂಟದ 199ನೇ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು. ತಾತಂಡ ಜ್ಯೋತಿ ಪ್ರಕಾಶ್, ಚೆಟ್ಟಂಗಡ ರವಿ ಸುಬ್ಬಯ್ಯ, ಕಿಕ್ಕೇರಿಯಂಡ ಲೀಲಾ ಅಯ್ಯಪ್ಪ, ನಾಯಕಂಡ ಮಧು ಬೋಪಯ್ಯ ಇದ್ದರು. 
ಕೊಡಗು

ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಉಳಿಸಲು ಪಣ ತೊಡಬೇಕು

ಪೊನ್ನಂಪೇಟೆ:
ಕೊಡವ ಭಾಷೆಯೇ ಚಂದದ ಭಾಷೆ. ಇದನ್ನ ಬೆಳೆಸಲು ನಮ್ಮಿಂದಾಗುವ ಪ್ರಯತ್ನ ಮಾಡುವುದರೊಂದಿಗೆ ಕೊಡವ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿಯ ಉಳಿಸಲು ಪಣ ತೊಡೋಣ ಎಂದು ವೀರಾಜಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ತಾತಂಡ ಜ್ಯೋತಿ ಪ್ರಕಾಶ್ ಹೇಳಿದರು.
ಕೊಡವ ತಕ್ಕ್ ಎಳ್ತ್ಕಾರಡ ಕೂಟ ಮತ್ತು ವೀರಾಜಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಜಂಟಿ ಆಶ್ರಯದಲ್ಲಿ ವೀರಾಜಪೇಟೆ ಕೊಡವ ಸಮಾಜದಲ್ಲಿ ಶುಕ್ರವಾರ ನಡೆದ ಕೂಟದ 199ನೇ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ದೇವರ ವರದಿಂದ ಪ್ರಪಂಚ ಖ್ಯಾತಿಯ ಸುಸಂಸ್ಕೃತ ಕೊಡವ ಜನಾಂಗದಲ್ಲಿ ಹುಟ್ಟಿರುವ ನಾವೇ ಧನ್ಯರು. ಈ ಜನ್ಮದ ಋಣ ತೀರಿಸಲು ಕೊಡವ ಭಾಷೆಯಲ್ಲೇ ಮಾತನಾಡೋಣ. ನಮಗೆ ದಾರಿದೀಪವಾಗಿರುವ ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಸಹಕಾರ ಪಡೆದುಕೊಂಡು ತಮ್ಮಲ್ಲಿರುವ ಪ್ರತಿಭೆಯನ್ನು ಬಳಸಿಕೊಂಡು ಕೊಡವ ಸಾಹಿತ್ಯ ಸೃಷಿಸಲು ಪ್ರಯತ್ನಪಡೋಣ. ಕನಿಷ್ಠಪಕ್ಷ ಕೊಡವ ಪುಸ್ತಕ, ಪತ್ರಿಕೆಗಳನ್ನು ಓದಿ ಅದರಲ್ಲಿರುವ ಒಳ್ಳೆಯದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೊಣ. ಕೊಡವ ಪುಸ್ತಕ ಓದುವ ಮೂಲಕ ಭಾಷೆ, ಸಾಹಿತ್ಯ,ಸಂಸ್ಕೃತಿಯ ಬೆಳವಣಿಗೆಗೆ ಪ್ರಯತ್ನ ಪಡೋಣ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಒಬ್ಬ ವ್ಯಕ್ತಿ ತನ್ನ ಹುಟ್ಟು, ಸಾವಿನ ಮದ್ಯದ ಬದುಕಿನ ಅವಧಿಯಲ್ಲಿ ಸಮಾಜಮುಖಿ ಕೆಲಸ ಮಾಡಿ ಗುರುತಿಸಿಕೊಂಡರೆ ಮಾತ್ರ ಅವನ ಅಸ್ಥಿತ್ವಕ್ಕೆ ಬೆಲೆ ಸಿಗುತ್ತದೆ. ಅದರಲ್ಲೂ ಸಾಹಿತಿಗಳಿಗೆ ಹಾಗೂ ಅವರು ಸೃಷ್ಟಿಸಿದ ಸಾಹಿತ್ಯಕ್ಕೆ ಸಾವೇ ಇಲ್ಲ. ಹಿಂಜರಿಕೆ ಬಿಟ್ಟು ತಮ್ಮಲ್ಲಿರುವ ಪ್ರತಿಭೆಗೆ ಸಾಧ್ಯವಿರುವಷ್ಟರ ಮಟ್ಟಿಗೆ ಅಕ್ಷರ ರೂಪ ನೀಡಿದರೆ ಅದನ್ನು ತಿದ್ದಿ ತೀಡಿ ಪುಸ್ತಕ ರೂಪ ತರುವ ಜವಾಬ್ದಾರಿಯನ್ನು ಕೊಡವ ತಕ್ಕ್ ಎಳ್ತ್ಕಾರಡ ಕೂಟ ವಹಿಸಿಕೊಳ್ಳುತ್ತದೆ. ಕೂಟ ಇದುವರೆಗೆ 60ಕ್ಕೂ ಹೆಚ್ಚು ಯುವ ಪ್ರತಿಭೆಗಳನ್ನು ಉತ್ತಮ ಲೇಖಕರಾಗಿಸುವಲ್ಲಿ ಯಶಸ್ವಿಯಾಗಿದೆ. ಯುವಪ್ರತಿಭೆಗಳನ್ನು ಪ್ರೋತ್ಸಾಹಿಸುವುದನ್ನೇ ಗುರಿಯಾಗಿಟ್ಟುಕೊಂಡು ಕೂಟ ಮುನ್ನಡೆಯುತ್ತಿದೆ. ಸದ್ಯದಲ್ಲೇ 200 ಲೇಖಕರ ಲೇಖನವನ್ನೊಳಗೊಂಡ ಕೂಟದ ಜನಪ್ರಿಯ ಕೊಡವ ಸಾಹಿತ್ಯ ಮಾಲೆ ಯೋಜನೆಯ 200ನೇ ಪುಸ್ತಕ ಬಿಡುಗಡೆ ಮಾಡಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಬಿಡುಗಡೆಯಾದ ಕೂಟದ 199ನೇ ಪುಸ್ತಕ ನಂಬಿಕೆ ದ್ರೋಹ ದ ಲೇಖಕಿ ಕಿಕ್ಕೇರಿಯಂಡ ಲೀಲಾ ಅಯ್ಯಪ್ಪ ಮಾತನಾಡಿ ನಾನು ಹಲವು ವರ್ಷಗಳಿಂದ ವಿವಿಧ ಪ್ರಕಾರದ ಸಾಹಿತ್ಯ ಬರೆಯುತ್ತಿದ್ದರೂ ಇದುವರೆಗೆ ನನ್ನ ಯಾವ ಲೇಖನವೂ ಪುಸ್ತಕ ರೂಪದಲ್ಲಿ ಪ್ರಕಟವಾಗಿರಲಿಲ್ಲ. ಇಂದು ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಸಹಕಾರದಿಂದ ಚೊಚ್ಚಲ ಪುಸ್ತಕ ಲೋಕಾರ್ಪಣೆಯಾಗಿದೆ. ಇದೀಗ ಇನ್ನಷ್ಟು ಬರೆದು ಪ್ರಕಟಿಸುವ ಉತ್ಸಾಹ ಮೂಡಿದೆ ಎಂದರು.
199ನೇ ಪುಸ್ತಕದ ದಾನಿ ನಾಯಕಂಡ ಮಧು ಬೋಪಯ್ಯ ಮಾತನಾಡಿ ಭಾಷೆ, ಸಾಹಿತ್ಯ ಬೆಳೆಸಲು ನಮ್ಮಿಂದ ಬರೆಯಲಾಗದಿದ್ದರೆ ಬರೆದವರ ಪುಸ್ತಕ ಪ್ರಕಟಿಸಲು ಆರ್ಥಿಕ ನೆರವು ನೀಡುವುದರೊಂದಿಗೆ ಸಾಹಿತ್ಯ ಬೆಳೆಸುವಲ್ಲಿ ಕೈಜೋಡಿಸಿದ ತೃಪ್ತಿ ಪಡೆಯಬಹುದು. ಸ್ವತಃ ಸಾಹಿತಿಯಾಗಿದ್ದು ಸ್ವರ್ಗವಾಸಿಯಾಗಿರುವ ನನ್ನ ತಾಯಿಯ ಸ್ಮರಣಾರ್ಥ ಈ ಪುಸ್ತಕ ಪ್ರಕಟಣೆಗೆ ಭಾಗಶಃ ಆರ್ಥಿಕ ನೆರವು ನೀಡಿದ ತೃಪ್ತಿ ಇದೆ ಎಂದರು.
ವೀರಾಜಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಉಪಾಧ್ಯಕ್ಷೆ ಮುರುವಂಡ ಉಷಾ ಮೊಣ್ಣಪ್ಪ ಮಾತನಾಡಿದರು.
ಈ ಸಂದರ್ಭ ಕೊಡವ ಹಾಡು, ಹಾಸ್ಯ ಹಾಗೂ ಕೊಡವ ಪುಸ್ತಕ ಓದುವ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು.
ಪೊಮ್ಮಕ್ಕಡ ಕೂಟದ ಸಹ ಕಾರ್ಯದರ್ಶಿ ಮೂಕೋಂಡ ಪ್ರೀತ್, ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಖಜಾಂಚಿ ಬೋಡಂಗಡ ಜಗದೀಶ್ ತಿಮ್ಮಯ್ಯ, ಕೂಟದ ನಿರ್ದೇಶಕ ಕಾಳಿಮಾಡ ಮೋಟಯ್ಯ, ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ಇದ್ದರು.
ಇತ್ತೀಚೆಗೆ ನಿಧನರಾದ ಸಾಹಿತಿ ನಾಯಕಂಡ ಬೇಬಿ ಚಿಣ್ಣಪ್ಪರವರ ಆತ್ಮಕ್ಕೆ ಚಿರಶಾಂತಿ ಕೋರಿ ಕಾರ್ಯಕ್ರಮದ ಆರಂಭದಲ್ಲಿ ನುಡಿನಮನ ಅರ್ಪಿಸಲಾಯಿತು.