ಕೊಡಗು ವಿಶ್ವವಿದ್ಯಾಲಯ ಮೂರನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಎಂದು ಬೆಂಗಳೂರು ದಕ್ಷಿಣದ ಆಡಳಿತಾತ್ಮಕ ನ್ಯಾಯಾಧೀಶ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಇ. ಎಸ್. ಇಂದಿರೇಶ್ ಉದ್ಘಾಟಿಸಿದರು. ಪ್ರೊ. ಸುರೇಶ್ ಎಚ್. ಜಂಗಮಶೆಟ್ಟಿ, ಪ್ರೊ. ಅಶೋಕ ಸಂಗಪ್ಪ ಆಲೂರ, ಡಾ. ಎಂ. ಸುರೇಶ್, ಡಾ. ಜಮೀರ್ ಅಹಮದ್, ಪ್ರೊ. ಎಂ. ಎನ್. ರವಿಶಂಕರ್ ಮತ್ತಿತರರು ಇದ್ದರು. 
ಕೊಡಗು

ಪೂರ್ವಜರ ಜ್ಞಾನದಿಂದ ನಾವು ತುಂಬ ದೂರ ಉಳಿದಿದ್ದೇವೆ

ಮಡಿಕೇರಿ:
ಡಿಜಿಟಲ್ ಯುಗದಲ್ಲಿ ನಾವು ಎಷ್ಟೇ ಮುಂದುವರೆದಿದ್ದರೂ ನಮ್ಮ ಪೂರ್ವಜರ ಜ್ಞಾನದಿಂದ ನಾವು ತುಂಬ ದೂರ ಉಳಿದಿದ್ದೇವೆ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದು ಬೆಂಗಳೂರು ದಕ್ಷಿಣದ ಆಡಳಿತಾತ್ಮಕ ನ್ಯಾಯಾಧೀಶ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಇ. ಎಸ್. ಇಂದಿರೇಶ್ ಹೇಳಿದರು. ಕೊಡಗು ವಿಶ್ವವಿದ್ಯಾಲಯ ಚಿಕ್ಕ ಅಳುವಾರದ ಜ್ಞಾನ ಕಾವೇರಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೊಡಗು ವಿವಿ ಮೂರನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತ ವಿಶ್ವದ ಅತ್ಯುನ್ನತ ನಾಗರಿಕತೆಗಳನ್ನು ಹೊಂದಿದೆ. ಪ್ರಾಚೀನ ಕಾಲದಲ್ಲಿ ಗುರುಕುಲ ಮತ್ತು ಆಶ್ರಮಗಳು ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿದ್ದವು. ತದನಂತರ ನಳಂದ ಮತ್ತು ತಕ್ಷಶಿಲಾದಂತಹ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಭಾರತೀಯ ಸಮಾಜದ ಮೌಲ್ಯಗಳನ್ನು, ಬದುಕಿನ ಪಾಠಗಳನ್ನು, ಸಂಸ್ಕಾರಯುತ ವಿದ್ಯಾಭ್ಯಾಸವನ್ನು ಉನ್ನತ ಶಿಕ್ಷಣದ ಮೂಲಕ ಬೋಧಿಸುತ್ತಿದ್ದವು. ಭಾರತದ ಇಂತಹ ಐತಿಹಾಸಿಕ ಶಿಕ್ಷಣ ಪದ್ಧತಿ ಇಂದಿನ ಮಕ್ಕಳಿಗೆ ಅತ್ಯಗತ್ಯ ಮತ್ತು ಅನಿವಾರ್ಯ.
ವಿಜ್ಞಾನ, ಕಲೆ, ಸಾಹಿತ್ಯ, ಸಂಗೀತ, ರಾಜಕೀಯ ಒಳಗೊಂಡAತೆ ಬಹುತೇಕ ಕ್ಷೇತ್ರಗಳಲ್ಲಿ ನಮ್ಮ ಪೂರ್ವಜರು ಆಳವಾದ ಜ್ಞಾನ ಹೊಂದಿದ್ದರು. ವೈದಿಕ ಶಿಕ್ಷಣವು ಕೇವಲ ಧರ್ಮಾಧಾರಿತ ಅಲ್ಲ, ಅಲ್ಲಿ ಕೌಶಲ್ಯದ ಬೆಳವಣಿಗೆ, ತತ್ವಾದರ್ಶಗಳನ್ನು, ವೈಚಾರಿಕತೆಯ ವಿಸ್ತಾರಕ್ಕೆ ಅನುವು ಮಾಡಿಕೊಟ್ಟಿದೆ.
ನಮ್ಮ ಋಷಿಮುನಿಗಳು ಮಕ್ಕಳಲ್ಲಿ ಆಲೋಚನಪರತೆ, ಪ್ರತಿಫಲಿತ ಚಿಂತನೆ ರೂಢಿಸಬೇಕೆಂದು ಬಯಸಿದ್ದರು. ಇಂದಿನ ವಿದ್ಯಾರ್ಥಿಗಳಲ್ಲಿ ಈ ಆಲೋಚನಾ ಶಕ್ತಿ ಅವರವರು ಬೆಳೆದು ಬಂದ ಪರಿಸರದಿಂದ ಪ್ರಭಾವಿತವಾಗಿರುತ್ತದೆ. ಈ ಕಾಲದ ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿ ಆಲೋಚನಾ ಶಕ್ತಿ ಕುಂಠಿತವಾಗುತ್ತಿದೆ. ದೇಶದ ಇತಿಹಾಸ ಮತ್ತು ಭೌಗೋಳಿಕ ಜ್ಞಾನ ಅವರಲ್ಲಿ ಇಲ್ಲ. ಇದನ್ನು ಪಾಲಕರು, ಪೋಷಕರು ಮತ್ತು ಶಿಕ್ಷಕರು ಗಮನಿಸಬೇಕು. ಬುನಾದಿ ಗಟ್ಟಿ ಇದ್ದರೆ ಮಾತ್ರ ಕಟ್ಟಡ ಬಹುಕಾಲ ಬಾಳಿಕೆ ಬರುತ್ತದೆ. ಅದೇ ರೀತಿ ಮನೆಯಲ್ಲಿ ಶಿಕ್ಷಣ, ಸಂಸ್ಕಾರ ನೀಡಿದರೆ ಮಾತ್ರ ಮಕ್ಕಳ ಭವಿಷ್ಯ ಭದ್ರವಾಗುತ್ತದೆ. ಎಲ್ಲಿ ಸಂಸ್ಕಾರ ಇರುತ್ತೋ ಅಲ್ಲಿ ಸರಸ್ವತಿ ನೆಲೆಸಿರುತ್ತಾಳೆ. ಸಂಸ್ಕಾರ ಇಲ್ಲದ ಶಿಕ್ಷಣ ಅರ್ಥಹೀನ. ಈ ಸಂಸ್ಕಾರ ಕಲಿಸಲು ನಮ್ಮ ಭಾರತದ ಪ್ರಾಚೀನ ಶಿಕ್ಷಣ ಪದ್ಧತಿಯು ತಳಹದಿ ಎಂಬುದನ್ನು ಮರೆಯಬಾರದು.
ಉತ್ತಮ ಬದುಕಿನ ವಿಚಾರಗಳನ್ನು ನೇರವಾಗಿ ಖಾರವಾಗಿ ತಿಳಿಸಿಕೊಟ್ಟ ಚಾಣಕ್ಯ, 1848ರಲ್ಲಿ ಹೆಣ್ಣುಮಕ್ಕಳಿಗಾಗಿ ಶಾಲೆ ಪ್ರಾರಂಭಿಸಿದ ಮತ್ತು ಭಾರತದ ಹೆಣ್ಣು ಮಕ್ಕಳ ಶಿಕ್ಷಣದ ಪ್ರವರ್ತಕರಾದ ಸಾವಿತ್ರಿಬಾಯಿಪುಲೆ, ಮೌಲ್ಯಾಧಾರಿತ ಶಿಕ್ಷಣದ ಮಹತ್ವಕ್ಕೆ ಒತ್ತು ನೀಡಿದ ಸ್ವಾಮಿ ವಿವೇಕಾನಂದರು, ದೇಶದ ಮೌಲ್ಯಗಳನ್ನು ಶಿಕ್ಷಣದ ಮೂಲಕ ಮಕ್ಕಳಿಗೆ ತಲುಪಿಸಲು ಬನಾರಸ್ ವಿಶ್ವವಿದ್ಯಾಲಯ ಪ್ರಾರಂಭಿಸಿದ ಮದನ ಮೋಹನ ಮಾಳವೀಯ, ರವೀಂದ್ರನಾಥ ಟ್ಯಾಗೋರ್ ಇವರೆಲ್ಲರೂ ಉನ್ನತ ಶಿಕ್ಷಣದ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸಿದವರು. ಇವರ ಹಾಕಿ ಕೊಟ್ಟ ಶಿಕ್ಷಣದ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ್ ಎಚ್. ಜಂಗಮಶೆಟ್ಟಿ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಉನ್ನತ ಶಿಕ್ಷಣ ಸಿಗಬೇಕೆಂಬ ಬೃಹತ್ ಆಶಯದೊಂದಿಗೆ ಜಿಲ್ಲೆಗೊಂದು ವಿಶ್ವವಿದ್ಯಾಲಯ ಆರಂಭವಾಗಿದ್ದು, ಈ ಹಾದಿಯಲ್ಲಿ ಕೊಡಗು ವಿಶ್ವವಿದ್ಯಾಲಯ ಮೂರು ವರ್ಷದಲ್ಲಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದೆ. ಅಲ್ಲದೇ ಇಂದು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಡಗು ವಿಶ್ವವಿದ್ಯಾಲಯ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ.
ಡಿಜಿಟಲ್ ಯುಗದಲ್ಲಿ ವರ್ತಮಾನಕ್ಕೆ ತಕ್ಕಂತೆ ಶಿಕ್ಷಕರು ಪ್ರತಿಕ್ಷಣವೂ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಕೃತಕ ಬುದ್ಧಿಮತ್ತೆಯ ಕಾಲದಲ್ಲಿರುವ ಇಂದಿನ ವಿದ್ಯಾರ್ಥಿಗಳು ಎಷ್ಟೇ ಮಾಹಿತಿ ಹೊಂದಿದ್ದರೂ ಕೂಡ ಅವರಿಗೆ ಜ್ಞಾನದ ಕೊರತೆ ನೀಗಿಸಲು ಶಿಕ್ಷಕರು ಮತ್ತು ತರಗತಿಯ ಅವಶ್ಯಕತೆ ಇದೆ ಎಂಬುದನ್ನು ಶಿಕ್ಷಕರು ಮರೆಯಬಾರದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಉನ್ನತ ಶಿಕ್ಷಣ ಜನರ ಮನೆಬಾಗಿಲಿಗೆ ತಲುಪಲು, ಉನ್ನತ ಶಿಕ್ಷಣದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮತ್ತು ಕೊಡಗಿನ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದೆAಬ ಮಹತ್ತರ ಆಶಯದೊಂದಿಗೆ ಕೊಡಗು ವಿವಿ ಕಾರ್ಯನಿರತವಾಗಿದೆ. ಕೊಡಗು ಜಿಲ್ಲೆಯು ರಾಜ್ಯದ ಬೇರೆಯ ಜಿಲ್ಲೆಗಳಿಗಿಂತ ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ವಿಭಿನ್ನವಾಗಿದ್ದು, ದೂರದ ವಿಶ್ವವಿದ್ಯಾಲಯಗಳಿಗೆ ತೆರಳಲು ಸಾಧ್ಯವಾಗದೆ ಉನ್ನತ ಶಿಕ್ಷಣ ಸಿಗದೆ ಅವಕಾಶ ವಂಚಿತರಾದ ಇಲ್ಲಿನ ಆದಿವಾಸಿ, ಹಿಂದುಳಿದ, ಗಿರಿಜನ, ಬುಡಕಟ್ಟು ಮತ್ತು ಎಲ್ಲ ವರ್ಗಗಳ ಮಕ್ಕಳಿಗೆ ಉನ್ನತ ಶಿಕ್ಷಣ ತಲುಪಿಸಲು ಈ ಜಿಲ್ಲೆಗೆ ವಿಶ್ವವಿದ್ಯಾಲಯದ ಅವಶ್ಯಕತೆ ತುರ್ತಾಗಿದೆ ಎಂದು ಹೇಳಿದರು.
ಕೊಡಗು ವಿಶ್ವವಿದ್ಯಾಲಯದ ಕುಲಸಚಿವ ಮೌಲ್ಯಮಾಪನ ಡಾ. ಎಂ. ಸುರೇಶ್, ಕಾರ್ಯಕ್ರಮ ಅಧಿಕಾರಿ ಮತ್ತು ಕನ್ನಡ ವಿಭಾಗದ ಉಪನ್ಯಾಸಕ ಡಾ. ಜಮೀರ್ ಅಹಮದ್, ಮೌಲ್ಯಮಾಪನ ವಿಭಾಗದ ವಿಶೇಷ ಅಧಿಕಾರಿ ಪ್ರೊ. ಎಂ. ಎನ್. ರವಿಶಂಕರ್, ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಬಿ.ಎಸ್. ಗುಣಶ್ರೀ, ಕೊಡಗು ವಿಶ್ವವಿದ್ಯಾಲಯದ ಘಟಕ, ಸರ್ಕಾರಿ, ವಿವಿಧ ಸಂಯೋಜಿತ ಮಹಾವಿದ್ಯಾಲಯಗಳ ಪ್ರಾಂಶುಪಾಲರು, ಅಧ್ಯಾಪಕರು, ವಿವಿಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಎನ್ ಸಿಸಿ ಸಂಯೋಜಕರು ಮತ್ತು ಅಭ್ಯರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ವಿದ್ಯಾರ್ಥಿನಿ ಕೆ.ಆರ್. ಮನ ಅವರ ದಿ ಟೋನ್ ಆಫ್ ಸೈಲೆನ್ಸ್ ಎಂಬ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಕೊಡಗು ವಿಶ್ವವಿದ್ಯಾಲಯದ ಘಟಕ, ಸರ್ಕಾರಿ, ವಿವಿಧ ಸಂಯೋಜಿತ ಮಹಾವಿದ್ಯಾಲಯಗಳ ಪ್ರಾಂಶುಪಾಲರಿಗೆ ಗೌರವ ಸನ್ಮಾನ ಮಾಡಲಾಯಿತು.