ಸುಂಟಿಕೊಪ್ಪ ಬಳಿಯ ಏಳನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಜಲ ಸಂರಕ್ಷಣೆ ಕುರಿತು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಟಿ.ಜಿ.ಪ್ರೇಮಕುಮಾರ್ ಉಪನ್ಯಾಸ ನೀಡಿದರು. ಎಸ್‌ಐಎನ್‌ಪಿ ನವೀನ್, ಮುಖ್ಯ ಶಿಕ್ಷಕ ಸೋಮಯ್ಯ, ಅಬ್ದುಲ್ ರಜಾಕ್, ಚಿನ್ನಪ್ಪ, ಕೆ.ಎಂ.ರಮೇಶ್, ರಾಧಾಕೃಷ್ಣ ಇದ್ದರು. 
ಕೊಡಗು

ಉತ್ತಮ ಭವಿಷ್ಯಕ್ಕಾಗಿ ನೀರು ಸಂರಕ್ಷಣೆ ಅವಶ್ಯ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಟಿ.ಜಿ.ಪ್ರೇಮಕುಮಾರ್ ಕರೆ
  • ಸಂವಾದ ಕಾರ್ಯಕ್ರಮ
ಸುಂಟಿಕೊಪ್ಪ : ಮಾನವ ಸೇರಿದಂತೆ ಎಲ್ಲ ಜೀವಿಗಳ ಅಗತ್ಯಗಳನ್ನು ಪೂರೈಸಲು ಮತ್ತು ಮುಂದಿನ ಭವಿಷ್ಯದ ಬಳಕೆಗಾಗಿ ನೀರನ್ನು ಉಳಿಸಿದರೆ ಮಾತ್ರ ಜಲ ಸಂರಕ್ಷಣೆ ಸಾಧ್ಯ. ನಾವು ವೈಜ್ಞಾನಿಕ ಕ್ರಮದಲ್ಲಿ ನೀರಿನ ಸಂರಕ್ಷಣೆಗೆ ವಿಶೇಷ ಗಮನಹರಿಸಬೇಕು ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಜಿ.ಪ್ರೇಮಕುಮಾರ್ ಹೇಳಿದರು.
ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ವತಿಯಿಂದ ಸುಂಟಿಕೊಪ್ಪ ಹೋಬಳಿಯ ಏಳನೇ ಹೊಸಕೋಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಹಸಿರು ಪಡೆ ಮತ್ತು ಪಾವನಿ ಇಕೋ ಕ್ಲಬ್ ಆಶ್ರಯದಲ್ಲಿ ರಾಷ್ಟ್ರೀಯ ಆವಿಷ್ಕಾರ ಸಪ್ತಾಹ ಅಂಗವಾಗಿ ನೀರಿನ ಸಂರಕ್ಷಣೆ ಕುರಿತು ಆಯೋಜಿಸಿದ್ದ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಮೂಲ್ಯವಾಗಿರುವ ನೀರನ್ನು ಉಳಿಸಿ ಬಳಸುವುದು ಅತಿ ಮುಖ್ಯ. ನೀರಿನ ಮಿತ ಬಳಕೆಯಿಂದ ಮಾನವನ ಉಳಿವು ಸಾಧ್ಯ. ನೀರಿನ ಮಿತಬಳಕೆ ಮತ್ತು ಮರು ಬಳಕೆಯಲ್ಲಿ ಎಲ್ಲರೂ ಪಾಲ್ಗೊಂಡು ನಾಳೆಯ ಉತ್ತಮ ಭವಿಷ್ಯಕ್ಕಾಗಿ ನೀರನ್ನು ಸಂರಕ್ಷಿಸಲು ಸಂಕಲ್ಪ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ರಾಷ್ಟ್ರೀಯ ಆವಿಷ್ಕಾರ್ ಅಭಿಯಾನದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಶಾಲಾ ವಿದ್ಯಾರ್ಥಿಗಳಲ್ಲಿ ವಿಜ್ಞಾನ, ಗಣಿತ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿ ಬೆಳೆಸುವ ಗುರಿ ಹೊಂದಿದ್ದು, ಅವರಲ್ಲಿ ಸೃಜನಶೀಲತೆ ಹಾಗೂ ಕ್ರಿಯಾಶೀಲ ವ್ಯಕ್ತಿತ್ವದೊಂದಿಗೆ ಅವರಲ್ಲಿ ಸಂಶೋಧನಾ ಪ್ರವೃತ್ತಿ ಮತ್ತು ಪ್ರೋತ್ಸಾಹ ಬೆಳೆಸಲು ಉತ್ತೇಜಿಸಲಾಗುತ್ತಿದೆ ಎಂದು ಟಿ.ಜಿ.ಪ್ರೇಮಕುಮಾರ್ ಹೇಳಿದರು.
ಶಾಲಾ ಮುಖ್ಯ ಶಿಕ್ಷಕ ಸೋಮಯ್ಯ ಮಾತನಾಡಿ, ನೀರನ್ನು ಸಂರಕ್ಷಣೆ ಮಾಡುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಎಲ್ಲರೂ ಇದರಲ್ಲಿ ಭಾಗಿಯಾಗುವ ಮೂಲಕ ನೀರನ್ನು ಉಳಿಸಲು ಪಣ ತೊಡಬೇಕು ಎಂದರು.
ಮಡಿಕೇರಿಯ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಎನ್.ಪಿ.ನವೀನ್, ಶಾಲೆಯ ಹಿರಿಯ ವಿದ್ಯಾರ್ಥಿಗಳ ಬಳಗದ ಅಧ್ಯಕ್ಷ ಅಬ್ದುಲ್ ರಜಾಕ್, ಪ್ರಧಾನ ಕಾರ್ಯದರ್ಶಿ ಕೆ.ಎಂ.ರಮೇಶ್, ಎಸ್‌ಡಿಎಂಸಿ ಅಧ್ಯಕ್ಷ ಎಚ್.ಪಿ.ಸೈದಾಲವಿ, ಶಿಕ್ಷಕಿ ಡಿ.ಯು.ಬಿಂದುಕುಮಾರಿ, ಕೆ.ಬಿ.ರಾಧಾಕೃಷ್ಣ, ಪಿ.ಎಚ್.ರಜಿಯಾ, ಆರ್.ಯಶೋರಾಣಿ, ಕೆ.ಎಚ್.ಗಾಯತ್ರಿ, ದೇಲಂಪಾಡಿ ಎಂ.ಚಿನ್ನಪ್ಪ, ಪಿ.ಆರ್.ವಿಮಲಾ, ಎನ್.ಪಿ.ವಾಣಿಶ್ರೀ ಇದ್ದರು.