ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಗ್ರಾಮದ ಆಶ್ರಮ ಕಡವ್ ಸಮೀಪದ ಮುಖ್ಯ ರಸ್ತೆಗೆ ನಿರ್ಮಿಸಿರುವ ತಡೆಗೋಡೆ ಬಳಿಯಲ್ಲಿ ತ್ಯಾಜ್ಯದ ರಾಶಿ 
ಕೊಡಗು

ಜೀವನದಿ ಕಾವೇರಿ ಒಡಲಿಗೆ ತ್ಯಾಜ್ಯ!

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳ ಅಸಡ್ಡೆ, ಸಾರ್ವಜನಿಕರ ಬೇಜವಾಬ್ದಾರಿ
  • ಸೂಕ್ತ ಕ್ರಮಕ್ಕೆ ಪರಿಸರ ಪ್ರೇಮಿಗಳ ಒತ್ತಾಯ
ಸಿದ್ದಾಪುರ: ಕೊಡಗು ಜಿಲ್ಲೆಯಲ್ಲಿ ತಿಂಗಳ ವಿರಾಮದ ಬಳಿಕ ಮಳೆ ಚುರುಕುಗೊಂಡಿದೆ. ಪರಿಣಾಮ ಜಿಲ್ಲೆಯ ಜೀವನಾಡಿಯಾದ ಕಾವೇರಿ ನದಿಯಲ್ಲಿ ನೀರಿನ ಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಮಧ್ಯೆ ನದಿಗೆ ತ್ಯಾಜ್ಯ ಸೇರುವ ಆತಂಕ ಎದುರಾಗಿದೆ.
ಹೌದು. ಕಾವೇರಿ ನದಿ ದಡದಲ್ಲಿ ಸಾರ್ವಜನಿಕರು ಎಸೆಯುವ ಪ್ಲಾಸ್ಟಿಕ್, ಮದ್ಯದ ಬಾಟಲಿಗಳು, ಆಹಾರದ ಖಾಲಿ ಪೊಟ್ಟಣ, ಇತರ ತ್ಯಾಜ್ಯ ಮಳೆ ನೀರಿನೊಂದಿಗೆ ನದಿ ಒಡಲು ಸೇರುತ್ತಿದೆ.
ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ಗ್ರಾಮದ ಆಶ್ರಮ ಕಡವ್ ಸಮೀಪದ ಮುಖ್ಯರಸ್ತೆಗೆ ನಿರ್ಮಿಸಿರುವ ತಡೆಗೋಡೆ ಬಳಿಯಲ್ಲಿ ತ್ಯಾಜ್ಯದ ರಾಶಿ ಇದಕ್ಕೆ ಸಾಕ್ಷಿ.
ಪ್ರವಾಸಿಗರು ಹಾಗೂ ಸ್ಥಳೀಯರು ಇಲ್ಲಿ ವಾಹನಗಳನ್ನು ನಿಲ್ಲಿಸಿ ಕಾವೇರಿ ನದಿಯ ಸೌಂದರ್ಯ ವೀಕ್ಷಿಸುವುದು ಸಾಮಾನ್ಯ. ಆದರೆ, ಕೆಲವರು ತಿಂಡಿ-ತಿನಿಸು ಸೇವಿಸಿದ ಬಳಿಕ ಉಳಿದ ಪ್ಲಾಸ್ಟಿಕ್ ಕವರ್‌ಗಳು, ನೀರಿನ ಬಾಟಲಿಗಳು, ಮದ್ಯದ ಬಾಟಲಿಗಳು ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಅಲ್ಲಿಯೇ ಎಸೆಯುತ್ತಿದ್ದಾರೆ. ಇದರಿಂದ ತಡೆಗೋಡೆ ಪಕ್ಕ ರಾಶಿ ರಾಶಿ ಕಸ ಸಂಗ್ರಹವಾಗಿದೆ.
ಈ ತ್ಯಾಜ್ಯ ಮಳೆ ನೀರಿನೊಂದಿಗೆ ನೇರವಾಗಿ ಕಾವೇರಿ ನದಿಗೆ ಸೇರುವ ಸಾಧ್ಯತೆ ಹೆಚ್ಚಿದೆ. ಪ್ಲಾಸ್ಟಿಕ್ ಸೇರಿದಂತೆ ಕೊಳೆಯದ ತ್ಯಾಜ್ಯಗಳು ನದಿಗೆ ಸೇರಿದರೆ ಜಲಚರ ಜೀವಿಗಳಿಗೆ ಹಾನಿಯಾಗುವುದರ ಜತೆಗೆ ನೀರಿನ ಗುಣಮಟ್ಟಕ್ಕೂ ಧಕ್ಕೆಯಾಗಲಿದೆ.
ಎಚ್ಚರಿಕೆ ಫಲಕ ಅವಶ್ಯ: ಆಶ್ರಮ ಕಡವ್ ಪ್ರದೇಶದಲ್ಲಿ ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಆದರೆ, ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದು ಹಾಗೂ ನಿಯಮಿತವಾಗಿ ಸ್ವಚ್ಛತಾ ಕಾರ್ಯ ನಡೆಯದಿರುವುದು ಸಮಸ್ಯೆಯನ್ನು ಬಿಗಡಾಯಿಸಿದೆ. ಇನ್ನಾದರೂ ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಕ್ಷಣ ತ್ಯಾಜ್ಯ ತೆರವುಗೊಳಿಸುವ ಜತೆಗೆ ಕಸದ ಬುಟ್ಟಿಗಳನ್ನು ಅಳವಡಿಸಿ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಾರ್ವಜನಿಕರ ಜವಾಬ್ದಾರಿಯೂ ಮುಖ್ಯ: ಕಾವೇರಿ ನದಿ ಕೋಟ್ಯಂತರ ಜನರ ಬದುಕಿನ ಆಧಾರವಾಗಿದೆ. ನದಿಯ ದಡದಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು, ಸಿಸಿ ಕ್ಯಾಮರಾ ಅಳವಡಿಸುವುದು, ನಿಯಮಿತ ಸ್ವಚ್ಛತಾ ಕಾರ್ಯ ನಡೆಸುವುದು ಹಾಗೂ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಅಧಿಕಾರಿಗಳ ನಿರ್ಲಕ್ಷೃ ಮತ್ತು ಸಾರ್ವಜನಿಕರ ಬೇಜವಾಬ್ದಾರಿ ಇದೇ ರೀತಿ ಮುಂದುವರಿದರೆ, ಮಳೆ ನೀರಿನೊಂದಿಗೆ ಈ ತ್ಯಾಜ್ಯವೆಲ್ಲ ಕಾವೇರಿಯ ಒಡಲು ಸೇರಿ ನದಿಯ ಸ್ವಚ್ಛತೆಗೆ ದೊಡ್ಡ ಅಪಾಯವಾಗಿ ಪರಿಣಮಿಸುವುದರಲ್ಲಿ ಅನುಮಾನವಿಲ್ಲ. ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಸಾರ್ವಜನಿಕರ ಜವಾಬ್ದಾರಿಯೂ ಅಷ್ಟೇ ಮುಖ್ಯ. ಪ್ರವಾಸ ಅಥವಾ ವಿಹಾರಕ್ಕೆ ತೆರಳುವವರು ತಮ್ಮಿಂದಲೇ ಉಂಟಾಗುವ ತ್ಯಾಜ್ಯವನ್ನು ಅಲ್ಲಿಯೇ ಎಸೆಯದೇ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು.