ಕ್ರೀಡಾ ಮಿಲನದ ಪೋಸ್ಟರ್ ಅನ್ನು ವೇದಿಕೆಯ ಅಧ್ಯಕ್ಷ ಮಧುಸೂದನ್ ಬಿಡುಗಡೆ ಮಾಡಿದರು. ಅಜಿತ್, ಲವ, ಡಾಲು, ಕಿರಣ್ ಇತರರಿದ್ದರು. 
ಕೊಡಗು

ಒಕ್ಕಲಿಗರ ಕ್ರೀಡಾ ಮಿಲನ ನಾಳೆಯಿಂದ

ಪೊನ್ನಂಪೇಟೆ: ದಕ್ಷಿಣ ಕೊಡಗು ಒಕ್ಕಲಿಗರ ವೇದಿಕೆಯಿಂದ ಮೇ 14ರಿಂದ 16ರವರೆಗೆ ಹಾತೂರಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮೈದಾನದಲ್ಲಿ ಒಕ್ಕಲಿಗರ ಕ್ರೀಡಾ ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಮಧುಸೂದನ್ ತಿಳಿಸಿದರು.
ಮೂರು ದಿನಗಳ ಕಾಲ ನಡೆಯಲಿರುವ ಕ್ರೀಡಾ ಮಿಲನದಲ್ಲಿ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ಒಕ್ಕಲಿಗ ಸಮುದಾಯದ ಸದಸ್ಯರು ಭಾಗವಹಿಸಲಿದ್ದಾರೆ. ಪುರುಷರ ವಿಭಾಗದಲ್ಲಿ ಲೀಗ್ ಮಾದರಿಯ ಕ್ರಿಕೆಟ್, ಹಗ್ಗಜಗ್ಗಾಟ, ಬಾಂಬ್ ಇನ್‌ದ ಸಿಟಿ ಹಾಗೂ ಭಾರದ ಗುಂಡು ಎಸೆತ ಸ್ಪರ್ಧೆಗಳು ನಡೆಯಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹಿಳೆಯರಿಗಾಗಿ ಹಗ್ಗಜಗ್ಗಾಟ, ಥ್ರೋಬಾಲ್, ಬೆಂಕಿ ರಹಿತ ಅಡುಗೆ ಹಾಗೂ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. ಜತೆಗೆ ಕಪಲ್ ಡಾನ್ಸ್, ಮೂರು ಕಾಲಿನ ಓಟ ಹಾಗೂ ವೆಜಿಟೇಬಲ್ ಕಾರ್ವಿಂಗ್ ಸ್ಪರ್ಧೆಗಳು ವಿಶೇಷ ಆಕರ್ಷಣೆಯಾಗಿವೆ. ಮಕ್ಕಳಿಗಾಗಿ ವಿವಿಧ ವಯೋಮಾನದ ಸ್ಪರ್ಧೆಗಳು ನಡೆಯಲಿದ್ದು, 16 ವರ್ಷ ಒಳಗಿನ ಮಕ್ಕಳಿಗೆ ಕ್ರಿಕೆಟ್ ಹಾಗೂ ಓಟದ ಸ್ಪರ್ಧೆ, 9 ರಿಂದ 11 ವರ್ಷದೊಳಗಿನ ಮಕ್ಕಳಿಗೆ ಗೋಣಿಚೀಲ ಜಿಗಿತ, 6 ರಿಂದ 8 ವರ್ಷದ ಮಕ್ಕಳಿಗೆ ಬಕೆಟ್‌ಗೆ ಬಾಲ್ ಹಾಕುವ ಸ್ಪರ್ಧೆ ಹಾಗೂ 2 ರಿಂದ 4 ವರ್ಷದ ಪುಟಾಣಿಗಳಿಗೆ ಗೋಲಿ ಹೆಕ್ಕುವ ಹಾಗೂ ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಕ್ರೀಡಾ ಮಿಲನದ ಪೋಸ್ಟರ್ ಅನ್ನು ವೇದಿಕೆಯ ಅಧ್ಯಕ್ಷ ಮಧುಸೂದನ್ ಬಿಡುಗಡೆ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಅಜಿತ್, ಕಾರ್ಯದರ್ಶಿ ಲವ, ಗೌರವಾಧ್ಯಕ್ಷ ಡಾಲು, ಖಜಾಂಚಿ ಕಿರಣ್, ಕ್ರೀಡಾ ಸಂಚಾಲಕರಾದ ನಿಖಿಲ್ ಹಾಗೂ ಜಗದೀಶ್, ಸಹ ಕಾರ್ಯದರ್ಶಿ ಮನು ಮತ್ತು ನಿರ್ದೇಶಕ ಶ್ರೇಯಸ್ ಇದ್ದರು.