ಕೂಡಿಗೆ ಡಯಟ್ ಸಂಸ್ಥೆಯಲ್ಲಿ ವೃತ್ತಿ ಮಾರ್ಗದರ್ಶನ ಮೇಳದ ಕುರಿತು ಡಯಟ್ ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್ ವೃತ್ತಿಮೇಳದ ಕರಪತ್ರ ಬಿಡುಗಡೆ ಮಾಡಿದರು. ಎಚ್.ಎಚ್.ಸತೀಶ್, ಸೌಮ್ಯ ಪೊನ್ನಪ್ಪ, ಟಿ.ಜಿ. ಪ್ರೇಮಕುಮಾರ್, ಎಸ್.ಶರ್ಮಿಳ, ಮಂಜುನಾಥ್, ಇಂದ್ರೇಶ್ ಇತರರು ಇದ್ದರು.
ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಅವರ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಮುಂದಿನ ವೃತ್ತಿ ಜೀವನದ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಲು ಮಾ. 27 ರಂದು ವೃತ್ತಿ ಶಿಕ್ಷಣ ಪ್ರದರ್ಶನ ಹಾಗೂ ವೃತ್ತಿ ಮಾರ್ಗದರ್ಶನ (ಕೆರಿಯರ್)ಮೇಳ ಏರ್ಪಡಿಸಲಾಗಿದೆ ಎಂದು ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಪ್ರಾಂಶುಪಾಲರೂ ಆದ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಪದನಿಮಿತ್ತ ಉಪನಿರ್ದೇಶಕ(ಅಭಿವೃದ್ದಿ) ರಾಮಚಂದ್ರ ರಾಜೇ ಅರಸ್ ತಿಳಿಸಿದ್ದಾರೆ. ಸೋಮವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಈ ಸಂಬAಧ ಪ್ರಚಾರ ಸಾಮಾಗ್ರಿ ಹಾಗೂ ಮಾಹಿತಿ ಪತ್ರ ಬಿಡುಗಡೆ ಮಾಡಿ ಮಾತನಾಡಿದರು.
ಕೂಡಿಗೆ ಡಯಟ್ ಸಂಸ್ಥೆಯಲ್ಲೂ ಜಿಲ್ಲಾ ವೃತ್ತಿಪರ ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನ ಘಟಕವನ್ನು ಆರಂಭಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣ ಹಾಗೂ ವೃತ್ತಿ ಆಯ್ಕೆ ಕುರಿತು ಸಮಗ್ರ ಮಾಹಿತಿ ಒದಗಿಸುವ ಉದ್ದೇಶದಿಂದ ಕೂಡಿಗೆ ಡಯಟ್, ಜಿಲ್ಲಾ ಮಟ್ಟದ ವೃತ್ತಿ ದಿಕ್ಸೂಚಿ, ವೃತ್ತಿ ಶಿಕ್ಷಣ ಪ್ರದರ್ಶನ ಮತ್ತು ವೃತ್ತಿ ಮಾರ್ಗದರ್ಶನ ಕೆರಿಯರ್ ಮೇಳ 2026 ಮಾ.27ಕ್ಕೆ ಬೆಳಗ್ಗೆ 10 ಗಂಟೆಯಿAದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.
ಈ ವೃತ್ತಿ ಮಾರ್ಗದರ್ಶನ ಮೇಳದಲ್ಲಿ 10ನೇ ತರಗತಿ ಮತ್ತು 12ನೇ ತರಗತಿ ನಂತರದ ಶಿಕ್ಷಣ ಮಾರ್ಗಗಳು, ಸಿ.ಇ.ಟಿ, ನೀಟ್, ಜೆ.ಇ.ಇ. ಪರೀಕ್ಷೆ ಮುಂತಾದ ಕೋರ್ಸ್ಗಳ ಪ್ರವೇಶ ಪರೀಕ್ಷೆಗಳ ಕುರಿತು ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಾಗುತ್ತದೆ. ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳು, ಬ್ಯಾಂಕ್‌ಗಳು ಮತ್ತು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮಳಿಗೆಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಉನ್ನತ ಶಿಕ್ಷಣ ಮತ್ತು ವೃತ್ತಿ ಸಂಬAಧಿಸಿದ ಮಾಹಿತಿ ಒದಗಿಸಲಾಗುತ್ತದೆ. ತಜ್ಞರಿಂದ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯದ ಬಗ್ಗೆ ಸೂಕ್ತ ತಿಳುವಳಿಕೆ ಮತ್ತು ವಿವಿಧ ಇಲಾಖೆಗಳ ವಿದ್ಯಾರ್ಥಿವೇತನ, ಬ್ಯಾಂಕ್‌ಗಳಿAದ ಲಭ್ಯವಾಗುವ ಶಿಕ್ಷಣ ಸಾಲ ಸೌಲಭ್ಯಗಳು ಇತ್ಯಾದಿ ಮಾಹಿತಿ ಬಗ್ಗೆ ಸಂಪೂರ್ಣ ವಿವರ ಲಭ್ಯವಾಗುದರ ಜತೆಗೆ ವಿದ್ಯಾರ್ಥಿಗಳಿಗೆ ಈ ಕುರಿತ ತರಬೇತಿಗಳು ಲಭ್ಯವಾಗಲಿವೆ.
9 ರಿಂದ 12 ನೇ ತರಗತಿ ವರೆಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಸೇರಿದಂತೆ ವೃತ್ತಿಪರ ಕೋರ್ಸ್ಗಳ ವಿದ್ಯಾರ್ಥಿಗಳು, ಅವರ ಪೋಷಕರು, ಮಹಿಳೆಯರು ಹಾಗೂ ಸಾರ್ವಜನಿಕರು ಈ ವೃತ್ತಿ ಮೇಳಕ್ಕೆ ಆಗಮಿಸಿ ಇದರ ಪ್ರಯೋಜನ ಪಡೆಯಬಹುದಾಗಿದೆ. ಈ ವೃತ್ತಿ ಮೇಳದಲ್ಲಿ ಭಾಗವಹಿಸುವವರಿಗೆ ಮಧ್ಯಾಹ್ನದ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ.
ಜಿಲ್ಲಾ ನೋಡಲ್ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಆರ್.ಕೆ. ಬಾಲಚಂದ್ರ, ಡಾ ಎನ್.ಎಸ್. ಸತೀಶ್, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ರೇಖಾ ಗಣಪತಿ, ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್ ಪ್ಲೇಸ್‌ಮೆಂಟ್ ಅಧಿಕಾರಿ ಪ್ರಸನ್ನ, ಜಿಲ್ಲಾ ಉದ್ಯೋಗಾಧಿಕಾರಿ ಸಿ.ಬಿ. ಮಂಜುನಾಥ್, ಮಡಿಕೇರಿ ಐಟಿಐ ಕಾಲೇಜಿನ ತರಬೇತಿ ಅಧಿಕಾರಿ ಸಿ.ಕೆ. ಇಂದ್ರೇಶ್, ಕೂಡಿಗೆ ಸೈನಿಕ ಶಾಲೆಯ ಅಧಿಕಾರಿಗಳು ಸೇರಿದಂತೆ ಇತರ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಾಗುವುದು.
ಕರ್ನಾಟಕ ಸರ್ಕಾರದ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ನಿರ್ದೇಶನಾಲಯದ ನಿರ್ದೇಶನದಂತೆ ರಾಜ್ಯದ 34 ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)ಗಳಲ್ಲಿ ಜಿಲ್ಲಾ ವೃತ್ತಿಪರ ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನ (ಕೆರಿಯರ್) ಘಟಕ ಸ್ಥಾಪಿಸಲಾಗುತ್ತಿದೆ. ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರ ಕಛೇರಿಯಿಂದ ನೀಡಿರುವ ಸುತ್ತೋಲೆ ಅನ್ವಯ ಕೂಡಿಗೆ ಡಯಟ್ ಸಂಸ್ಥೆಯಲ್ಲಿ ವೃತ್ತಿಪರ ಮತ್ತು ವೃತ್ತಿ ಮಾರ್ಗದರ್ಶನ ಘಟಕ ಸ್ಥಾಪಿಸಲಾಗುತ್ತಿದ್ದು ಈ ಘಟಕದ ಮೂಲಕ ವಿದ್ಯಾರ್ಥಿಗಳಿಗೆ ನಿರಂತರವಾಗಿ ವೃತ್ತಿ ಮಾರ್ಗದರ್ಶನ ನೀಡಲಾಗುವುದು ಎಂದು ಕೂಡ ರಾಮಚಂದ್ರ ರಾಜೇ ಅರಸ್ ತಿಳಿಸಿದರು.
ಸಮಿತಿಯ ಕಾರ್ಯದರ್ಶಿ ಎಚ್.ಎಚ್. ಸತೀಶ್, ಡಿಡಿಪಿಐ ಕಚೇರಿಯ ಉಪ ಯೋಜನಾ ಸಮನ್ವಯಾಧಿಕಾರಿ ಸೌಮ್ಯ ಪೊನ್ನಪ್ಪ, ಜಿಲ್ಲಾ ಉದ್ಯೋಗಾಧಿಕಾರಿ ಸಿ.ಬಿ. ಮಂಜುನಾಥ್, ಮಡಿಕೇರಿ ಬಿ.ಆರ್.ಸಿ. ಎಸ್. ಶರ್ಮಿಳಾ, ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕಿ ಬಿ.ಎನ್. ಪುಷ್ಪ, ಉಪನ್ಯಾಸಕರಾದ ವಿ. ವಿಜಯ್, ಕೆ.ಎಸ್. ನಳಿನಾಕ್ಷಿ, ಪಿ.ಪಿ. ಗಾಯತ್ರಿ, ಕೂಡ್ಲೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್ ಮತ್ತಿತರರು ಇದ್ದರು.