ಮಲಯಾಳಿಗರು ವಿಶು ಸೌರಮಾನ ಯುಗಾದಿಯನ್ನು ಆಚರಿಸುತ್ತಿರುವುದು. 
ಕೊಡಗು

ಮಲಯಾಳಿಗರಿಂದ ವಿಶು ಸೌರಮಾನ ಯುಗಾದಿ

ಸುಂಟಿಕೊಪ್ಪ: ಕೊಡಗಿನಲ್ಲಿ ನೆಲೆ ನಿಂತಿರುವ ಮಲಯಾಳಿ ಸಮಾಜದವರು ವಿಶು ಸೌರಮಾನ ಯುಗಾದಿಯನ್ನು ಸಾಂಪ್ರದಾಯಿಕವಾಗಿ ಸಡಗರ ಸಂಭ್ರಮದಿಂದ ಆಚರಿಸಿದರು.
ಕೇರಳದಲ್ಲಿ ವಿಶು ಹಬ್ಬವನ್ನು ಮಲಯಾಳಿಗರು ಹೊಸ ವರ್ಷದ ಸೌರಮಾನ ಯುಗಾದಿಯನ್ನು ಬರಮಾಡಿಕೊಳ್ಳುವುದರಲ್ಲಿ ವಿಶೇಷ ಉತ್ಸಾಹಕತೆ ಆಸಕ್ತಿಯನ್ನು ಮನೆ ಮಾಡಿಕೊಳ್ಳುತ್ತಾರೆ. ಪ್ರತಿವರ್ಷ ಏ.14 ಮಧ್ಯರಾತ್ರಿ ಕಳೆದು ಏ.15 ರ ಸೌರಮಾನ ಯುಗಾದಿಯಲ್ಲಿ ಮಲಯಾಳಿಗರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುವುದು ವಾಡಿಕೆಯಾಗಿದೆ. 15 ರಂದು ಸಾಂಪ್ರದಾಯಿಕ ವಿಶು ಹಬ್ಬ ಆಚರಿಸುತ್ತಾರೆ.
ಮಲಯಾಳಿ ಸಮಾಜದ ಪ್ರತಿ ಮನೆಗಳಲ್ಲೂ ಬುಧವಾರ ಮನೆಯ ಯಾಜಮಾನಿ ಹಾಗೂ ಮಹಿಳೆಯರು ಎದ್ದು ಮನೆ ಶುಭ್ರಗೊಳಿಸಿ, ಸ್ನಾನ ಮಾಡಿದ ನಂತರ ದೇವರ ಕೋಣೆಯಲ್ಲಿ ವಿಶೇಷ ಪೂಜಾ ಕೈಂಕರ್ಯವನ್ನು ಶ್ರದ್ಧಾ-ಭಕ್ತಿಯಂದ ದೇವರಲ್ಲಿ ಪ್ರಾರ್ಥಿಸುತ್ತಾರೆ. ಆನಂತರ ವಿಶು ಹಬ್ಬದ (ಕೊನ್ನಪೂ) ಹೊನ್ನೆಹೂ, ವಿಶು ಕಣಿಗಳಾದ (ಅಡ) ತಿಂಡಿ ವಿವಿಧ ಬಗೆಯ ಹಣ್ಣು, ತರಕಾರಿ ದವ-ದ್ಯಾನ್ಯ ಬಾಳೆಹಣ್ಣು, ಹಲಸಿನಗುಜೆ, ಚಿನ್ನದಸರ ಹಾಗೂ ನಗದನ್ನು ದೇವರ ಕೋಣೆಯಲ್ಲಿ ಇರಿಸಿ ಹೊಸ ವರ್ಷದಿಂದ ಕುಟುಂಬ ವರ್ಗಕ್ಕೆ ಐಶ್ವರ್ಯ, ಆರೋಗ್ಯ, ನೆಮ್ಮದಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ಆನಂತರ ಮನೆಯವರೆಲ್ಲ ಸೇರಿ ದೇವರಲ್ಲಿ ಪ್ರಾರ್ಥಿಸುವುದು ವಾಡಿಕೆಯಾಗಿದೆ.
ಮಧ್ಯಾಹ್ನ ವಿವಿಧ ಬಗೆಯ ಸಸ್ಯಾಹಾರಿ ಭೋಜನವನ್ನು ತಯಾರಿಸುವ ಮೂಲಕ ಕುಟುಂಬದವರು ಹಾಗೂ ಬಂಧು-ಮಿತ್ರರು ಸೇರಿ ಸೇವಿಸುತ್ತಾರೆ. ಅಲ್ಲದೆ ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡುವುದು ವಿಶು ಹಬ್ಬದ ಪದ್ಧತಿಯಾಗಿದೆ.