ಸುಂಟಿಕೊಪ್ಪದ ಕೆದಕಲ್ ಶ್ರೀ ಭದ್ರಕಾಳೇಶ್ವರಿ ದೇವಾಲಯದ ವತಿಯಿಂದ ನಡೆದ ಶ್ರೀ ವಿಷ್ಣುಮೂರ್ತಿ ದೇವರ ಕಟ್ಟಿತೆರೆ ಹಾಗೂ ಕೋಲ. 
ಕೊಡಗು

ಕೆದಕಲ್‌ನಲ್ಲಿ ವಿಷ್ಣುಮೂರ್ತಿ ದೇವರ ಕಟ್ಟಿತೆರೆ, ಕೋಲ

ಎಂ.ರವಿ
ಸುಂಟಿಕೊಪ್ಪ: ಕೆದಕಲ್ ಭದ್ರಕಾಳೇಶ್ವರಿ ದೇವಾಲಯದ ವತಿಯಿಂದ ವಿಷ್ಣುಮೂರ್ತಿ ದೇವರ ಕಟ್ಟಿತೆರೆ ಹಾಗೂ ಕೋಲಗಳು ಶ್ರದ್ಧಾಭಕ್ತಿಯಿಂದ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ತೆರೆಯ ಅಂಗವಾಗಿ ಬುಧವಾರ ಮದ್ಯಾಹ್ನ 3 ಗಂಟೆಯಿಂದ ಭದ್ರಕಾಳೇಶ್ಚರಿ, ಈಶ್ವರ, ವಿಷ್ಣುಮೂರ್ತಿ ಹಾಗೂ ಅಜ್ಜಪ್ಪ ದೇವರ ಕೋಲ ಮತ್ತು ದರ್ಶನಗಳು ನಡೆದವು.
ಇದೇ ವೇಳೆ ವಿಷ್ಣುಮೂರ್ತಿಯ ಕಟ್ಟಿತೆರೆ ನಡೆದಿದ್ದು, ಈ ತೆರೆಯಲ್ಲಿ ಪರಿವಾರ ದೇವರುಗಳು ತಮ್ಮ ತಮ್ಮ ಶಕ್ತಿಯ ನಂಬಿಕೆಯನ್ನು ತೋರಿಸಿ ಭಕ್ತರಲ್ಲಿ ಶ್ರದ್ಧೆ, ಭಯಭಕ್ತಿಯನ್ನು ಉಂಟು ಮಾಡಿದವು.
ದೇವರ ದರ್ಶನದ ವೇಳೆ ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಭಕ್ತ ಸಮೂಹ ತಮ್ಮ ಕಷ್ಟ-ಕಾರ್ಪಣ್ಯವನ್ನು ಪರಿಹರಿಸುವಂತೆ ತಮ್ಮ ಇಷ್ಟಾರ್ಥ ದೈವಗಳಲ್ಲಿ ಬೇಡಿಕೆಯನ್ನು ಮುಂದಿಟ್ಟರು. ಹಾಗೆಯೇ ಹರಕೆಯ ಬೇಡಿಕೆಗಳನ್ನು ಕೂಡ ನೀಡುವುದರ ಮೂಲಕ ಸಂತೃಪ್ತಿಗೊಂಡರು. ವಿಷ್ಣುಮೂರ್ತಿ ದೇವರಿಗೆ ತೆರೆ ಕಟ್ಟುವ ಮೊದಲು ತೆರೆಯನ್ನು ಕೆದಕಲ್ ಮುಖ್ಯರಸ್ತೆಯಲ್ಲಿ ಕೇರಳದ ಚಂಡೆ ವಾದ್ಯ ದೊಂದಿಗೆ ಮೆರವಣಿಗೆ ನಡೆಸಲಾಯಿತು.
ರಾತ್ರಿ ಮಹಾಮಂಗಳಾರತಿ, ಭಂಡಾರ ಹಾಕುವುದು, ದೇವರ ಹರಕೆ ಸೇರಿದಂತೆ ವಿವಿಧ ಪೂಜಾ ಕೈಂಕಾರ್ಯಗಳು ನೆರವೇರಿದವು. ಕೆದಕಲ್, ಬಾಳೆಕಾಡು, ಸುಂಟಿಕೊಪ್ಪ, ಹಾಲೇರಿ, ಬೋಯಿಕೇರಿ, ಮಡಿಕೇರಿ, ಕಾಂಡನಕೊಲ್ಲಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಭಕ್ತರು ಭಾಗವಹಿಸಿದ್ದರು.