ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪಾಲಕರು, ಬೋಧಕರ ಸಭೆಯಲ್ಲಿ ಹಾಜರಿದ್ದ ಪಾಲಕರು. 
ಕೊಡಗು

ಶೈಕ್ಷಣಿಕ ಪ್ರಗತಿ ಕುರಿತು ಸದಾ ಗಮನಹರಿಸಿ

ವಿರಾಜಪೇಟೆ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಪಾಲಕರು ಸದಾ ಗಮನಹರಿಸುತ್ತಿರಬೇಕು ಎಂದು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಕೋರನ ಸರಸ್ವತಿ ಸಲಹೆ ನೀಡಿದರು.
ಇತ್ತಿಚೆಗೆ ಕಾಲೇಜಿನಲ್ಲಿ ಆಯೋಜಿಸಿದ್ದ ಪಾಲಕರ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಕಾಲೇಜಿನಲ್ಲಿ 385 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಬಿಎ, ಬಿಕಾಂ ಹಾಗೂ ಬಿಬಿಎ ಕೋರ್ಸ್‌ಗಳು ಲಭ್ಯವಿದೆ. ನುರಿತ ಪ್ರಾಧ್ಯಾಪಕ ವರ್ಗದಿಂದ ಉತ್ತಮ ಬೋಧನೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಂಸ್ಥೆ, ಬೋಧಕರು ಹಾಗೂ ಪಾಲಕರು ಪ್ರಮುಖ ಪಾತ್ರ ವಹಿಸುತ್ತಾರೆ. ಪಾಲಕರು ಆಗಿಂದಾಗ್ಗೆ ಕಾಲೇಜಿನೊಂದಿಗೆ ಸಂಪರ್ಕವಿಟ್ಟುಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಬಗ್ಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಘಟಕದ ಸಂಚಾಲಕ ಡಾ.ಕೆ.ಸಿ.ದಯಾನಂದ, ಪಾಲಕ ಶಿಕ್ಷಕರ ಸಂಘದ ಸಮಿತಿ ಸಂಚಾಲಕಿ ದಮಯಂತಿ, ಐಕ್ಯುಎಸಿ ಸಂಚಾಲಕ ಪ್ರೊ.ಬಸವರಾಜು, ಸದಸ್ಯ ಜೋಸೆಫ್, ಉಪನ್ಯಾಸಕರು, ಪಾಲಕರು ಉಪಸ್ಥಿತರಿದ್ದರು. ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳಿಂದ ಏಡ್ಸ್ ಜಾಗೃತಿ ಕುರಿತು ಕಿರು ಪ್ರಹಸನ ನಡೆಸಿಕೊಟ್ಟರು.