ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕ ಮತ್ತು ಅಮ್ಮತ್ತಿ ಹೋಬಳಿ ಘಟಕ ಜಂಟಿಯಾಗಿ ರೈತ ಸಮಸ್ಯೆಗಳ ಸಾರ್ವಜನಿಕ ಸಭೆ ನಡೆಯಿತು. ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪ್ಪಯ್ಯ, ಜಿಲ್ಲಾ ಸಂಚಾಲಕ ಸುಭಾಷ್ ಸುಬ್ಬಯ್ಯ, ಖಜಾಂಚಿ ಸಭೀತ ಭೀಮಯ್ಯ, ಕಾನೂನು ಸಲಹೆಗಾರ ಕೆ.ಬಿ.ಹೇಮಚಂದ್ರ ಅಮ್ಮತ್ತಿ ಹೋಬಳಿ ಅಧ್ಯಕ್ಷ ಚನಂಡ ಅಜೀತ್ ಪೂಣಚ್ಚ, ಉಪಾಧ್ಯಕ್ಷ ನಡಿಕೇರಿಯಂಡ ವಿಕ್ರಂ ಇದ್ದರು. 
ಕೊಡಗು

ಕಾಡಾನೆ-ಮಾನವ ಸಂಘರ್ಷ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಿ

ವಿರಾಜಪೇಟೆ : ಜಿಲ್ಲೆಯಲ್ಲಿ ದಶಕಗಳಿಂದ ಕಾಡಾನೆ-ಮಾನವ ಸಂಘರ್ಷ, ವನ್ಯ ಮೃಗಗಳ ಉಪಟಳಗಳನ್ನು ರೈತರು ಮತ್ತು ಕಾರ್ಮಿಕರು ಎದುರಿಸುತಿದ್ದು, ಶಾಶ್ವತ ಪರಿಹಾರಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗದಿರುವುದರಿಂದ ರೈತರ ಸಮಸ್ಯೆಗಳು ಮತ್ತು ಪರಿಹಾರಕ್ಕೆ ಬೃಹತ್ ಹೋರಾಟಕ್ಕೆ ಸಜ್ಜುಗೊಳ್ಳುವಂತೆ ರೈತ ಸಂಘದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕ ಮತ್ತು ಅಮ್ಮತ್ತಿ ಹೋಬಳಿ ಘಟಕ ಜಂಟಿಯಾಗಿ ರೈತ ಸಮಸ್ಯೆಗಳ ಸಾರ್ವಜನಿಕ ಸಭೆ ಗುಹ್ಯ ಅಗಸ್ತೇಶ್ವರ ಸಹಕಾರ ಭವನದಲ್ಲಿ ಮಂಗಳವಾರ ಆಯೋಜಿಸಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಭಾಷಣ ಮಾಡಿದ ಕ.ರಾ.ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಕೆಲವೇ ದಿನಗಳ ಅಂತರದಲ್ಲಿ ಕಾಡಾನೆ ದಾಳಿಯಿಂದ ಐವರು ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆ ಶಾಶ್ವತ ಪರಿಹಾರಕ್ಕೆ ಯೋಜನೆ ರೂಪಿಸದೆ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಿ ತೆರಳುತ್ತಿದೆ ಎಂದು ಆರೋಪಿಸಿದರು.
ಕಾಡಾನೆಗಳ ಉಪಟಳ ಒಂದೆಡೆಯಾದರೆ, ವನ್ಯಮೃಗಳ ಉಪಟಳ ಮತ್ತೊಂದೆಡೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಕಾಡಾನೆ- ಮಾನವ ಸಂಘರ್ಷಕ್ಕೆ ಇತಿಶ್ರೀ ಹಾಡಲು ಮುಂದಾಗದಿರುವುದು ವಿಷಾದನೀಯ. ರೈತರು ಸಂಘಟಿತರಾಗಬೇಕು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬೆಳೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. ರಾಜ್ಯದಲ್ಲಿ ವಿವಿಧ ಭಾಗಗಳಲ್ಲಿ ಬೆಳೆ ಪರಿಹಾರ ನೀಡುತ್ತಿದ್ದರೂ ಕೊಡಗು ಜಿಲ್ಲೆಯಲ್ಲಿ ಪರಿಹಾರ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಸಮಸ್ಯೆಗಳ ವಿರುದ್ಧ ಸಂಘಟಿತ ಹೋರಾಟಕ್ಕೆ ಸಜ್ಜುಗೊಳ್ಳಬೇಕು. ರೈತರು ಎದುರಿಸುತ್ತಿರುವ ಸಮಸ್ಯೆಗಳಾದ ಬ್ಯಾಂಕ್ ಸಾಲ, ಆಸ್ತಿ ಮುಟ್ಟುಗೋಲು, ವಿದ್ಯುತ್ ಸಮಸ್ಯೆ, ಬೆಳೆ ಪರಿಹಾರ, ವನ್ಯಮೃಗಗಳ ಉಪಟಳದಂತಹ ಗಂಭೀರ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಹೋರಾಟ ಒಂದೇ ಮಾರ್ಗ ಆದುದ್ದರಿಂದ ಏಪ್ರಿಲ್‌ನಲ್ಲಿ ಜಿಲ್ಲಾ ಅರಣ್ಯ ಭವನದ ಮುಂದೆ ಕಾರ್ಮಿಕ ಸಂಘಟನೆಗಳೊಂದಿಗೆ ರೈತ ಸಂಘವು ಬೃಹತ್ ಪ್ರತಿಭಟನೆಗೆ ಮುಂದಾಗಿದ್ದು, ಕಾರ್ಮಿಕ ಸಂಘಟನೆಗಳೊಂದಿಗೆ ಸಭೆ ನಡೆಸಿ ದಿನ ನಿಗದಿಪಡಿಸಲಾಗುದು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸುವಂತೆ ಕೋರಿದರು.
ಕಾರ್ಮಿಕ ಸಂಘಟನೆಯ ಮುಖಂಡ ಪಿ.ಆರ್.ಭರತ್ ಮಾತನಾಡಿ, ಅರಣ್ಯ ಇಲಾಖೆಯು ಕಾಡಾನೆ ಹಿಡಿಯುವ ನೆಪದಲ್ಲಿ ಅಖಂಡ ಭ್ರಷ್ಟಾಚಾರ ಮಾಡುತ್ತಿದೆ. ಸಾವು-ನೋವುಗಳು ಸಂಭವಿಸಿದರೂ ಕಾರ್ಮಿಕರು, ರೈತರು ಎದುರಿಸುತ್ತಿರುವ ಸಮಸ್ಯೆಗಳು ಶಾಶ್ವತ ಪರಿಹಾರಕ್ಕೆ ಮುಂದಾಗಲಿಲ್ಲ ಎಂದು ಆರೋಪಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಪಕ್ಷ, ಶಾಸಕರು, ಸಂಸದರು ಬದಲಾವಣೆಯಾದರೂ ಕಾಡಾನೆ-ಮಾನವ ಸಂಘರ್ಷ ಎಂದಿನಂತೆ ನಡೆಯುತ್ತಿದೆ. ಕಾಡಾನೆಗಳ ದಾಳಿಯಿಂದ ಬೆಳೆ ನಾಶ ಸಾವು-ನೋವುಗಳು ಸಂಭವಿಸಿದರೂ ರೈತರ ಮತ್ತು ಕಾರ್ಮಿಕ ಬದುಕು ಹಸನಾಗಲು ಸರ್ಕಾರಗಳಿಗೆ ಇಚ್ಛಾಶಕ್ತಿಯ ಕೊರತೆ ಇದೆ. ಆದ್ದರಿಂದ ಕಾರ್ಮಿಕ ಸಂಘಟನೆಗಳೊಂದಿಗೆ ಮತ್ತೊಮ್ಮೆ ಸಭೆ ನಡೆಸಿ ರೈತಾಪಿ ಸಂಘಟನೆಯೊಂದಿಗೆ ಹೋರಾಟಕ್ಕೆ ಸಜ್ಜಾಗಬೇಕು ಎಂದು ಹೇಳಿದರು.
ಸಭೆಯಲ್ಲಿ ಸಿದ್ದಾಪುರ ಮತ್ತು ಅಮ್ಮತ್ತಿ ಹೋಬಳಿಯ ವಿವಿಧ ಸ್ಥಳಗಳಿಂದ ಆಗಮಿಸಿದ್ದ ರೈತ ಸಂಘದ ಸದಸ್ಯರು ಮತ್ತು ಸಾರ್ವಜನಿಕರು ತಮ್ಮ ಅಭಿಪ್ರಾಯ, ಅಹವಾಲುಗಳನ್ನು ಮಂಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪ್ಪಯ್ಯ, ಜಿಲ್ಲಾ ಸಂಚಾಲಕ ಸುಭಾಷ್ ಸುಬ್ಬಯ್ಯ, ಖಜಾಂಚಿ ಸಭೀತ ಭೀಮಯ್ಯ, ಕಾನೂನು ಸಲಹೆಗಾರರಾದ ಕೆ.ಬಿ.ಹೇಮಚಂದ್ರ ಅಮ್ಮತ್ತಿ ಹೋಬಳಿ ಅದ್ಯಕ್ಷ ಚನಂಡ ಅಜೀತ್ ಪೂಣಚ್ಚ, ಉಪಾಧ್ಯಕ್ಷ ನಡಿಕೇರಿಯಂಡ ವಿಕ್ರಂ, ಖಜಾಂಚಿ ಸಜೀವ, ಸಿದ್ದಾಪುರ ರೈತ ಸಂಘದ ಅಧ್ಯಕ್ಷ ದೇವಣಿರ ಬೋಪಣ್ಣ ಉಪಸ್ಥಿತಿತರಿದ್ದರು.
ಸಭೆಯಲ್ಲಿ ಅಮ್ಮತ್ತಿ ಹೋಬಳಿ ಮತ್ತು ಸಿದ್ದಾಪುರ ವಿಭಾಗದ ವಿವಿಧ ಸ್ಥಳಗಳಿಂದ ರೈತ ಸಂಘದ ಸದಸ್ಯರು, ಸಾರ್ವಜನಿಕರು ಹಾಜರಿದ್ದರು.