ಸಂತ ಅನ್ನಮ್ಮ ಶಾಲೆಯಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಅಭಿಯಾನ ಮತ್ತು ಜಾಗೃತಿ ಜಾಥಾಕ್ಕೆ ನ್ಯಾ.ನಟರಾಜ್ ಚಾಲನೆ ನೀಡಿದರು. ನ್ಯಾ. ಮಂಜುನಾಥ್, ನ್ಯಾ.ಪ್ರದೀಪ್ ಪೊತೇದಾರ್, ಆನಂದ್, ಟೀನಾ ಇದ್ದರು.
ವಿರಾಜಪೇಟೆ : ವಿರಾಜಪೇಟೆಯ ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆಯ ವಕೀಲರ ಸಂಘ, ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಸಂತ ಅನ್ನಮ್ಮ ಶಾಲೆಯಲ್ಲಿ ರಸ್ತೆ ಸುರಕ್ಷತಾ ಅಭಿಯಾನ ಮತ್ತು ಜಾಗೃತಿ ಜಾಥಾ ಆಯೋಜಿಸಲಾಗಿತ್ತು.
ವಿರಾಜಪೇಟೆಯ ಎರಡನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ನಟರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಸ್ತೆಗಳು ನಮ್ಮ ಬದುಕಿನ ಭಾಗ. ನಾವು ಪ್ರತಿದಿನ ಮಾಡುವಂತಹ ಕೆಲಸ ಕಾರ್ಯಗಳನ್ನು ರಸ್ತೆಯಿಲ್ಲದೆ ಮಾಡಲು ಸಾಧ್ಯವಿಲ್ಲ. ನಮ್ಮ ಜೀವನದ ಭಾಗವಾಗಿರುವ ರಸ್ತೆಗಳನ್ನು ಹೇಗೆ ಉಪಯೋಗ ಮಾಡಬೇಕು, ಎಷ್ಟು ಮುಖ್ಯವಾಗಿ ನಾವು ನಮ್ಮ ಜೀವವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸುವುದೇ ಈ ಕಾರ್ಯಕ್ರಮದ ಮುಖ್ಯ ಧ್ಯೇಯ ಎಂದು ಹೇಳಿದರು.
ನನ್ನ ವೃತ್ತಿ ಬದುಕಿನಲ್ಲಿ ಹಲವಾರು ಅಪಘಾತ ಪ್ರಕರಣಗಳನ್ನು ನೋಡಿದ್ದೇನೆ. ಆದರೆ ಭಾರತ ದೇಶದಲ್ಲಿ ಅತ್ಯಂತ ಕಳವಳಕಾರಿ ವಿಷಯವೇನೆಂದರೆ ಯುವಕರು ಮತ್ತು ವಿದ್ಯಾರ್ಥಿಗಳು ವಾಹನ ಅಪಘಾತದಲ್ಲಿ ಬಲಿಯಾಗುತ್ತಿರುವುದು ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದರು.
ವಿರಾಜಪೇಟೆಯ ನಗರ ಪೊಲೀಸ್ ಠಾಣಾಧಿಕಾರಿ ಪ್ರಮೋದ್ ಮಾತನಾಡಿ, ರಸ್ತೆ ಅಪಘಾತ ನಡೆಯದಂತೆ ಮತ್ತು ಕಾನೂನು ಪರಿಪಾಲನೆ ಮಾಡಲು ನಾವು ಮತ್ತು ನಮ್ಮ ಮನೆಯವರು ಕಲಿಯಬೇಕು, ಇತರರಿಗೂ ಕಲಿಸಬೇಕು. ಕಾನೂನಿನ ವಿರುದ್ಧವಾಗಿ ವಾಹನ ಚಾಲನೆ ಮಾಡಿದಲ್ಲಿ ದಂಡದ ಜತೆಗೆ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು. ಅಪ್ರಾಪ್ತ ವಯಸ್ಸಿನಲ್ಲಿ ವಾಹನ ಚಾಲನೆ ಮಾಡುವುದು ಕಾನೂನುಬಾಹಿರವಾಗಿದ್ದು, ಈ ಬಗ್ಗೆ ಪಾಲಕರು ಸಹ ಎಚ್ಚರ ವಹಿಸಬೇಕು. ದ್ವಿಚಕ್ರ ವಾಹನ ಚಾಲನೆ ಮಾಡುವವರು ತಪ್ಪದೇ ಹೆಲ್ಮೆಟ್ ಧರಿಸಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಮುಖ್ಯಶಿಕ್ಷಕಿ ಟೀನಾ ಫರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಸಿವಿಲ್ ನ್ಯಾಯಾಧೀಶರು, ಜೆಎಂಎಫ್‌ಸಿ ಹಾಗೂ ವಿರಾಜಪೇಟೆ ಕಾನೂನು ಸೇವಾ ಸಮಿತಿ ಸದಸ್ಯರಾದ ನ್ಯಾ.ಆರ್.ಮಂಜುನಾಥ್, ಪ್ರಧಾನ ಸಿವಿಲ್ ನ್ಯಾಯಾಧೀಶ ನ್ಯಾ.ಪ್ರದೀಪ್ ಪೊತೇದಾರ್, ವಿರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆನಂದ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸಿ.ಎಂ.ಸೋಮಯ್ಯ, ವಕೀಲರ ಸಂಘದ ಅಧ್ಯಕ್ಷ ಸಿ.ಕೆ.ಪೂವಣ್ಣ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಗೌ.ನ್ಯಾಯಮೂರ್ತಿಗಳು ರಸ್ತೆ ಸುರಕ್ಷತಾ ಜಾಗೃತಿ ಜಾಥಕ್ಕೆ ಚಾಲನೆ ನೀಡಿದರು.
ಜಾಥಾದಲ್ಲಿ ರೋಟರಿ ಶಾಲೆ, ಸಂತ ಅನ್ನಮ್ಮ ಶಾಲೆ, ಪ್ರಗತಿ ಶಾಲೆ, ತ್ರಿವೇಣಿ ಶಾಲೆ, ಕೂರ್ಗ್ ವ್ಯಾಲಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿರಾಜಪೇಟೆಯ ಮುಖ್ಯರಸ್ತೆಯಲ್ಲಿ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡು ಅರಿವು ಮೂಡಿಸಿದರು.