ಶ್ರೀಮುತ್ತಪ್ಪ ದೇವಸ್ಥಾನದ ಆಡಳಿತ ಮಂಡಳಿಗೆ ನೂತನ ಅನ್ನ ಶೇಖರಿಸುವ ಬೃಹತ್ ಪಾತ್ರೆಯನ್ನು ಹಿಂದೂ ಮಲೆಯಾಳಿ ಸಂಘದ ಪದಾಧಿಕಾರಿಗಳು ಕೊಡುಗೆಯಾಗಿ ನೀಡಿದರು.
ವಿರಾಜಪೇಟೆ: ಇಲ್ಲಿನ ಶ್ರೀಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನಕ್ಕೆ ಶ್ರೀಮುತ್ತಪ್ಪ ಮಲಯಾಳಿ ಸಮಾಜದ ವತಿಯಿಂದ ಅನ್ನ ಶೇಖರಿಸುವ ಬೃಹತ್ ಸ್ಟೀಲ್ ಪಾತ್ರೆಯನ್ನು ಮಂಗಳವಾರ ಕೊಡುಗೆಯಾಗಿ ನೀಡಲಾಯಿತು.
ಪ್ರತಿವರ್ಷ ಜರುಗುವ ಶ್ರೀಮುತ್ತಪ್ಪ ತೆರೆ ಮಹೋತ್ಸವದಲ್ಳಿ ದಾಸೋಹದ ಸೇವೆಗೆ ಉಪಯೋಗವಾಗುವ ನಿಟ್ಟಿನಲ್ಲಿ ಈ ಕೊಡುಗೆಯನ್ನು ದೇವಸ್ಥಾನಕ್ಕೆ ನೀಡಲಾಯಿತು.
ಶ್ರೀಮುತ್ತಪ್ಪ ಮಲೆಯಾಳಿ ಸಮಾಜದ ಅಧ್ಯಕ್ಷ ಪಿ.ಜಿ.ಸುಮೇಶ್ ಅವರು ಪಾತ್ರೆಯನ್ನು ಶ್ರೀಮುತ್ತಪ್ಪ ದೇವಸ್ಥಾನದ ಅಧ್ಯಕ್ಷ ಟಿ.ಕೆ.ರಾಜನ್ ಅವರಿಗೆ ಹಸ್ತಾಂತರಿಸಿ ಮಾತನಾಡಿ, 82ನೇ ವರ್ಷದ ಶ್ರೀಮುತ್ತಪ್ಪ ತೆರೆ ಮಹೋತ್ಸವವನ್ನು ಈ ಭಾರಿ ಆಚರಿಸುತ್ತಿದ್ದು, ಪೂಜಾ ಕಾರ್ಯಕ್ರಮದ ಬಳಿಕ ಎಂಟರಿಂದ ಹತ್ತು ಕ್ವಿಂಟಾಲ್ ಅಕ್ಕಿಯಲ್ಲಿ ತಯಾರಿಸಿದ ಅನ್ನ ಸಂತರ್ಪಣ ಸೇವೆ ನಡೆಯಲಿದ್ದು, ಅದಕ್ಕೆ ಸಹಕಾರಿಯಾಗಲೆಂದು ನಮ್ಮ ಸಂಘದ ಸರ್ವ ಸದಸ್ಯರ ಸಹಕಾರದಿಂದ ಹಾಗೂ ಚಿರಿಯಪಂಡ ಸುರೇಶ್ ನಂಜಪ್ಪ, ಮಾಲೆಟಿರ ಚುಕ್ಕು ದೇವಯ್ಯ, ಬಲ್ಲಚಂಡ ಸೃಜನ್ ಮತ್ತು ಮುಕ್ಕಾಟೀರ ಬೋಪಣ್ಣ ಅವರ ಸಹಕಾರದಿಂದ ಈ ಕೊಡುಗೆಯನ್ನು ನೀಡಲಾಗಿದೆ ಎಂದರು.
ಶ್ರೀಮುತ್ತಪ್ಪ ಮಲಯಾಳಿ ಸಮಾಜದ ಸರ್ವ ಪದಾಧಿಕಾರಿಗಳು ಮತ್ತು ಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಭಕ್ತರು ಹಾಜರಿದ್ದರು.