ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಗ್ರಂಥಾಲಯ ದಿನ ಆಚರಿಸಲಾಯಿತು. ಪ್ರಾಂಶುಪಾಲೆ ಡಾ.ಕೆ.ಜಿ.ವೀಣಾ, ಮುತ್ತಮ್ಮ, ಸೋಮನಾಥ್, ಅಕ್ಷಿತಾ, ಗಾಯತ್ರಿ, ಸೋಮಣ್ಣ, ರಾಘವೇಂದ್ರ ಇದ್ದರು.
ಗ್ರಂಥಾಲಯ ಜ್ಞಾನ ವೃದ್ಧಿಸುವುದಷ್ಟೇ ಅಲ್ಲ, ಓದುವ ಹವ್ಯಾಸ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಜಿ.ವೀಣಾ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಭಾರತದ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಅವರ 134ನೇ ಜನ್ಮ ದಿನಾಚರಣೆ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಪ್ರತಿವರ್ಷ ಆಗಸ್ಟ್ 12ರಂದು ಗ್ರಂಥಪಾಲಕರ ದಿನವನ್ನು ಆಚರಿಸುತ್ತ ಬಂದಿದ್ದೇವೆ. ಇಂದಿನ ಡಿಜಿಟಲ್ ಯುಗದಲ್ಲಿಯೂ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್.ಆರ್.ರಂಗನಾಥನ್ ಅವರನ್ನು ನಾವು ಸ್ಮರಿಸಲೇಬೇಕು. ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಗ್ರಂಥಾಲಯ ಮತ್ತು ಅಂತರ್ಜಾಲದ ಮೂಲಕ ಜ್ಞಾನ ಗಳಿಸಿಕೊಳ್ಳುತ್ತಿದ್ದೇವೆ ಎಂದರೆ ಅದು ಗ್ರಂಥಾಲಯದ ಸೇವೆಯಿಂದ. ಮನುಷ್ಯನ ಸರ್ವತೋಮುಖ ಬೆಳವಣಿಗೆ ಆಗಬೇಕು ಎಂದರೆ ಪುಸ್ತಕಗಳಿಂದ ಮಾತ್ರ ಸಾಧ್ಯ. ಪುಸ್ತಕಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುವುದರೊಂದಿಗೆ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಸಹಾಯಕವಾಗುತ್ತದೆ. ಆದ್ದರಿಂದ ಯುವ ಸಮೂಹ ಪುಸ್ತಕಗಳನ್ನು ಓದುವುದು ಹಾಗೂ ಗ್ರಂಥಾಲಯದ ಸದ್ಬಳಕೆ ಮಾಡಿ ಉತ್ತಮ ಜ್ಞಾನ ಪಡೆಯಬೇಕಿದೆ. ಪ್ರತಿಯೊಬ್ಬರೂ ದಿನದಲ್ಲಿ ಒಂದಷ್ಟು ಸಮಯವನ್ನು ವೃತ್ತ ಪತ್ರಿಕೆ ಹಾಗೂ ಪುಸ್ತಕವನ್ನು ಓದಲು ಮೀಸಲಿಡಬೇಕು ಎಂದರು.
ಕಾಲೇಜಿನ ಗ್ರಂಥಪಾಲಕಿ ಡಾ.ಮುತ್ತಮ್ಮ ಮಾತನಾಡಿ, ಗ್ರಂಥಾಲಯ ವಿಜ್ಞಾನವನ್ನು ಭಾರತದಾದ್ಯಂತ ಬೆಳೆಸುವಲ್ಲಿ, ಪ್ರಚಾರ ಮಾಡುವಲ್ಲಿ ಮೊದಲಿಗರು ಡಾ.ಎಸ್.ಆರ್.ರಂಗನಾಥನ್. ಅವರಷ್ಟು ಗ್ರಂಥಾಲಯದಲ್ಲಿ ಕೃಷಿ ಮಾಡಿದವರು ಮತ್ತೊಬ್ಬರಿಲ್ಲ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದ ಹೆಚ್ಚು ಸಮಯವನ್ನು ಗ್ರಂಥಾಲಯದಲ್ಲಿ ಪುಸ್ತಕಗಳೊಂದಿಗೆ ಕಳೆದರೆ ಮುಂದಿನ ಅವರ ಜೀವನ ಹೆಚ್ಚು ಜ್ಞಾನ ಗಳಿಸಲು ಸಾಧ್ಯ ಎಂದರು.
ಅಂತಿಯ ಬಿ.ಕಾಂ.ವಿದ್ಯಾರ್ಥಿನಿ ಐ.ಪಿ.ಬಿಂದ್ಯಾ, ಡಾ.ಎಸ್.ಆರ್ ರಂಗನಾಥನ್ ಅವರ ಜೀವನ ಮತ್ತು ಸಾಧನೆಯ ಕುರಿತು ವಿಚಾರ ಮಂಡಿಸಿದರು.
ಕಾಲೇಜಿನ ಐಕ್ಯೂಎಸಿ ಸಂಯೋಜಕ ಎಲ್.ಆರ್.ರಾಘವೇಂದ್ರ, ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಮುಖ್ಯಸ್ಥ ಸೋಮಣ್ಣ, ಉಪನ್ಯಾಸಕರಾದ ಅಕ್ಷಿತಾ ನಾಯ್ಕ, ಭೋಜಮ್ಮ, ವನಿತಾ, ಮಾಣಿಕ್ಯ, ಸುನಿಲ್, ಪವಿತ್ರಾ, ಭೂಮಿಕಾ, ಲೋಚನಾ, ಅನುಪಮಾ, ಗಾಯತ್ರಿ, ಬಾಬು, ಅಕ್ಷರ, ಆಡಳಿತಾತ್ಮಕ ಸಿಬ್ಬಂದಿ ಸೋಮನಾಥ್, ಹರೀಶ್, ರೇಷ್ಮಾ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.