ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ಲಾ ವಿರಾಜಪೇಟೆಯಲ್ಲಿ ವಿಶ್ವ ಭೂ ದಿನ ಆಚರಿಸಲಾಯಿತು. ನ್ಯಾ.ಎಸ್.ನಟರಾಜ, ನ್ಯಾ.ಪ್ರದೀಪ್ ಪೊತೇದಾರ್, ಎಂ.ಎಚ್.ಜಗನ್ನಾಥ್, ತಾಸಿನಾ ಬಾನು, ಶಿವರಾಂ, ಸಿ.ಕೆ.ಪೂವಣ್ಣ, ಟಿ.ಕೆ.ವಿನಿತಾ, ಜಿ.ಎಸ್.ನಾಗೇಂದ್ರ ಇದ್ದರು. 
ಕೊಡಗು

ಭೂಮಿ ರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸೋಣ

ವಿರಾಜಪೇಟೆ: ಭೂಮಿಯನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿ ಭೂಮಿಯ ಮೇಲಿರುವ ಎಲ್ಲರ ಮೇಲೂ ಇದೆ ಎಂದು ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ನಟರಾಜ ಸಲಹೆ ನೀಡಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆ ವಕೀಲರ ಸಂಘ, ಅರಣ್ಯ ಇಲಾಖೆ, ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ಲಾ ವಿರಾಜಪೇಟೆ ಸಂಯುಕ್ತ ಆಶಯದಲ್ಲಿ ಬುಧವಾರ ವಿಶ್ವ ಭೂ ದಿನವನ್ನು ಆಚರಿಸಲಾಯಿತು.
ಗಿಡಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನ್ಯಾ.ಎಸ್.ನಟರಾಜ, ವಿಶ್ವ ಭೂ ದಿನಾಚರಣೆ ಹಿನ್ನೆಲೆಯಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಆಚರಿಸುವುದು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಭೂಮಿಯ ಮೇಲಿರುವ ಪರಿಸರ, ಅರಣ್ಯ ಸಂಪತ್ತು, ವನ್ಯಜೀವಿ ಹಾಗೂ ಇನ್ನಿತರ ಜೀವ ಸಂಕುಲಗಳನ್ನು ತಾಯಿಯಂತೆ ಪೋಷಿಸುತ್ತಿರುವವಳು ಭೂಮಿ. ಆದ್ದರಿಂದ ಭೂಮಿಯ ರಕ್ಷಣೆಯನ್ನು ಮಾಡುವುದು ಮುಖ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅರಣ್ಯ ನಾಶ, ನದಿಗಳನ್ನು ಕಲುಷಿತ ಮಾಡುವುದು, ಅತಿಯಾದ ಪ್ಲಾಸ್ಟಿಕ್ ಬಳಕೆ, ರಾಸಾಯನಿಕಗಳ ಬಳಕೆಯಿಂದ ಮಣ್ಣನ್ನು ನಾಶ ಮಾಡುತ್ತಿದ್ದಾನೆ. ಇದರಿಂದಾಗಿ ಮುಂದಿನ ಪೀಳಿಗೆಗೆ ಸಂಪೂರ್ಣವಾಗಿ ಅಳಿವಿನಂಚಿನ ಪ್ರಕೃತಿ, ಭೂಮಿಯನ್ನು ನೀಡಿದಂತಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಪರಿಸರಕ್ಕೆ ಅನುಕೂಲವಾಗುವಂತಹ ಕಾರ್ಯದಲ್ಲಿ ಸ್ವಯಂಪ್ರೇರಿತರಾಗಿ ತೊಡಗಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡುವುದರೊಂದಿಗೆ ಅರಣ್ಯ ಸಂರಕ್ಷಿಸುವ ಕೆಲಸ ಮಾಡಿಬೇಕು ಎಂದು ತಿಳಿಸಿದರು.
ವಿರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಚ್.ಜಗನ್ನಾಥ್ ಮಾತನಾಡಿ, ಭೂಮಿಯಲ್ಲಿ ಸಮತೋಲನವನ್ನು ಕಾಪಾಡಲು ಪ್ರತಿಯೊಂದು ಜೀವಿಯೂ ಅವಶ್ಯಕ. ಆದ್ದರಿಂದ ಪರಿಸರವನ್ನು ಎಲ್ಲರೂ ಗೌರವವಿರಬೇಕು, ಪರಿಸರವನ್ನು ನಾಶ ಮಾಡುವ ಕೆಲಸ ನಡೆದಂತಹ ಸಂದರ್ಭ ಅದನ್ನು ವಿರೋಧಿಸುವಂತಹ ಕಾರ್ಯ, ಗಿಡ, ಮರ, ಜೀವಿಗಳು, ಪರಿಸರ ಮಣ್ಣನ್ನು ಉಳಿಸುವ ಪರವಾಗಿ ಹೋರಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಜೀವವೈವಿಧ್ಯ ಇದ್ದರೆ ಮಾತ್ರ ವಿಕಸನ ಸಾಧ್ಯ. ಭೂಮಿಯ ಮೇಲೆ ಸಣ್ಣ ಬೀಜ, ಎರೆಹುಳು, ಪಕ್ಷಿ, ಪ್ರಾಣಿ, ಸಸ್ಯ ಪ್ರತಿಯೊಂದೂ ತನ್ನದೇ ಆದ ಮಹತ್ವವನ್ನು ಹೊಂದಿದ್ದು, ಪ್ರಕೃತಿಗೆ ತನ್ನದೇಯಾದ ಕೊಡುಗೆಯನ್ನು ನೀಡುತ್ತವೆ. ಆದ್ದರಿಂದ ಮನುಷ್ಯ ಈ ಭೂಮಿಯಲ್ಲಿ ಹುಟ್ಟಿದ ತನ್ನ ಋಣವನ್ನು ತೀರಿಸುವ ಉದ್ದೇಶದಿಂದಾದರೂ ಪರಿಸರವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ನೀಡಬೇಕು ಎಂದರು.
ವಿರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಸಿ.ಕೆ. ಪೂವಣ್ಣ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಾಸಿನಾಬಾನು ಮಾತನಾಡಿದರು. ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ಲಾ ವಿರಾಜಪೇಟೆ ಮುಖ್ಯಸ್ಥ ಜಿ.ಎಸ್.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್‌ಸಿ ನ್ಯಾ.ಪ್ರದೀಪ್ ಪೋತೆದಾರ್, ವಿರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್, ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ಲಾ ಪ್ರಾಂಶುಪಾಲೆ ಟಿ.ಕೆ.ವಿನಿತಾ ಉಪಸ್ಥಿತರಿದ್ದರು. ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ಲಾ ಉಪನ್ಯಾಸಕರು, ವಿದ್ಯಾರ್ಥಿಗಳು, ಕಾವೇರಿ ಪದವಿ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.