ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಕೊಡಗು ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ.ಅಶೋಕ ಸಂಗಪ್ಪ ಆಲೂರ ಉದ್ಘಾಟಿಸಿದರು. ಕುಲಚಂಡ ಪಿ ಬೋಪಣ್ಣ, ಡಾ.ಕೆ.ಜಿ.ವೀಣಾ , ಅರ್ಜುನ್ ಮೌರ್ಯ ಉಪಸ್ಥಿತರಿದ್ದರು.
ವಿರಾಜಪೇಟೆ: ಅನ್ಯಭಾಷೆಯನ್ನು ಮಾತೃಭಾಷೆಯಾಗಿ ಹೊಂದಿರುವ ಮಕ್ಕಳಿಗೆ ಬೋಧಕರು ನೈಜ ಭಾಷೆಯ ಮನೋಭಾವ ಬರುವಂತೆ ನೋಡಿಕೊಂಡು ಬೋಧಿಸಬೇಕಿದೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಸಂಗಪ್ಪ ಆಲೂರ ಸಲಹೆ ನೀಡಿದರು.
ವಿರಾಜಪೇಟೆ ಕಾವೇರಿ ಕಾಲೇಜು ಹಾಗೂ ದಲಿತ ಸಾಹಿತ್ಯ ಪರಿಷತ್ ನುಡಿ ಉತ್ಸವ ಮತ್ತು ಕೊಡಗು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಗಡಿ ಪ್ರದೇಶಗಳ ಪಠ್ಯಕ್ರಮದಲ್ಲಿ ಕನ್ನಡ ಭಾಷಾ ನೀತಿ ಹಾಗೂ ಬಹುಭಾಷ ವಾಸ್ತವಿಕತೆಗಳ ಮರುಚಿಂತನೆ’ ಎನ್ನುವ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆ ಸಾವಿರಾರು ವರ್ಷಗಲ ಐತಿಹ್ಯ ಇರುವ ಭಾಷೆ. ಅದಕ್ಕೆ 2008ರಲ್ಲಿ ಶಾಸ್ತ್ರೀಯ ಸ್ಥಾನ ಬಂದಿರುವುದು ಹೆಮ್ಮೆ, ಗೌರವ ಎಂದು ಹೇಳಿಕೊಂಡರೆ ಸಾಲದು. ಈ ಪುರಾತನ ಭಾಷೆಯಲ್ಲಿ ಸಾಹಿತ್ಯ, ಪರಂಪರೆ, ಸಂಸ್ಕೃತಿ, ಆಚಾರ-ವಿಚಾರ ಆಳವಾಗಿದ್ದು, ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕೆಲಸವಾಗಬೇಕು ಎಂದರು.
ಕನ್ನಡದಲ್ಲಿ ವೈವಿಧ್ಯಮಯ ಭಾಷೆಗಳಿದ್ದು ಅದನ್ನು ಅರಿತು ಬೋಧಕರು ಬೋಧಿಸಬೇಕು. ಕನ್ನಡ ಭಾಷೆಯನ್ನು ಬಲಪಡಿಸುವುದೆಂದರೆ ಅದು ಬೇರೆ ಭಾಷೆಯನ್ನು ವಿರೋಧಿಸುವುದಲ್ಲ. ಅನ್ಯಭಾಷೆಗಳನ್ನು ಗಡಿನಾಡಿನ ಪಠ್ಯದಲ್ಲಿ ಸೇರಿಸಬೇಕು, ಬದಲಾವಣೆ ಆಗಬೇಕು ಎಂಬ ವಿಚಾರ ಸಂಕಿರಣದಲ್ಲಿ ಮೂಡಿಬರುವ ಚಿತಂನೆಯನ್ನು ಕಾರ್ಯರೂಪಕ್ಕೆ ತರಬೇಕು ಎಂದರು.
ಕಸಾಪ ನುಡಿ ಉತ್ಸವ ಸಮಿತಿ ಅಧ್ಯಕ್ಷ ಅರ್ಜುನ್ ಮೌರ್ಯ ಮಾತನಾಡಿ, ಕಳೆದ ನವೆಂಬರ್‌ನಿಂದ ಈ ಸಾಲಿನ ನವೆಂಬರ್‌ವರೆಗೆ 19 ಕಾರ್ಯಕ್ರಮ ನಡೆಸುವ ಉದೇಶ ಇದ್ದು, 4 ಸಾರ್ವಜನಿಕ ಮತ್ತು ಉಳಿದವು ಕಾಲೇಜು ಮಟ್ಟದಾಗಿದೆ. ಇಲ್ಲಿ ಗಡಿನಾಡಿನಲ್ಲಿ ಪಠ್ಯ ಕ್ರಮದಲ್ಲಿ ಕನ್ನಡ ಉಪನ್ಯಾಸಕರು, ಬೋಧಕರು, ಅನ್ಯಭಾಷಿಕರಿಗೆ ಬೋಧನೆಯಲ್ಲಿ ಬದಲಾವಣೆ ಅಗತ್ಯ. ಆ ನಿಟ್ಟಿನಲ್ಲಿನ ಸವಾಲು ಬದಲಾವಣೆಯ ಅಗತ್ಯ ಏಕೆ ಈ ಬಗ್ಗೆ ಚರ್ಚಿಸಲು ಇಂದಿನ ಈ ಸಂಕಿರಣ ಆಯೋಜಿಸಲಾಗಿದೆ. ಈ ಚರ್ಚೆ ಮೂಲಕ ಪಠ್ಯದಲ್ಲಿನ ಬದಲಾವಣೆ ಬಗ್ಗೆ ಸರ್ಕಾರದ ಮಟ್ಟಕ್ಕೂ ತಲುಪಿಸುವ ಉದೇಶವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾವೇರಿ ಎಜುಕೇಷನ್ ಸೊಸೈಟಿಯ ಗೋಣಿಕೊಪ್ಪಲು ಕಾರ್ಯದರ್ಶಿ ಕೆ.ಪಿ.ಬೋಪಣ್ಣ ಮಾತನಾಡಿದರು. ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಜಿ.ವೀಣಾ ಉಪಸ್ಥಿತರಿದ್ದರು.
ಗೋಷ್ಠಿಗಳಲ್ಲಿ ಭಾಷೆ ಕುರಿತು ಚರ್ಚೆ:: ಉದ್ಘಾಟನಾ ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿ ಡಾ.ಕೆ.ಎಚ್.ಮುಸ್ತಾಫ ಗಡಿ ಪ್ರದೇಶಗಳ ಪಠ್ಯಕ್ರಮದಲ್ಲಿ ಕನ್ನಡ ಭಾಷಾ ಶಿಕ್ಷಣ ಸ್ವರೂಪ ಭಾಷಾ ನೀತಿ ಹಾಗೂ ಬಹುಭಾಷಾ ವಾಸ್ತವಿಕತೆಗಳ ಮರು ಚಿಂತನೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಪ್ರೊ.ಬಿ.ಶಿವರಾಮಶೆಟ್ಟಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕಾವೇರಿ ಪ.ಪೂ.ಕಾಲೇಜಿನ ಪ್ರಾಂಶುಪಾಲೆ ಎಂ.ಕೆ.ಪದ್ಮಾ ಗೋಷ್ಠಿಯನ್ನು ನಿರ್ವಹಿಸಿದರು.
ಸಂಪನ್ಮೂಲ ವ್ಯಕ್ತಿ ಡಾ.ರತ್ನಾಕರ ಮಲ್ಲಮೂಲೆ ಗಡಿ ಪ್ರದೇಶಗಳಲ್ಲಿ ಕನ್ನಡ ಭಾಷಾ ಪಠ್ಯಕ್ರಮ ಬದಲಾವಣೆ ಅನಿವಾರ್ಯವೇ ಮತ್ತು ಬೋಧನಾ ಕಲಿಕ ಸವಾಲುಗಳು ಒಂದು ಚಿಂತನೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಪ್ರೊ.ಎಚ್.ಹುಚ್ಚೇಗೌಡ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕಾವೇರಿ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಬಿ.ಬಿ.ಸುನಿಲ್‌ಕುಮಾರ್ ಗೋಷ್ಠಿ ನಿರ್ವಹಿಸಿದರು. ವಿಚಾರ ಸಂಕಿರಣದಲ್ಲಿ ವಿವಿಧ ಶಾಲಾ- ಕಾಲೇಜುಗಳಿಂದ ಆಗಮಿಸಿದ್ದ ಶಿಕ್ಷಕರು, ಉಪನ್ಯಾಸಕರು, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.