ನಾಲ್ಕೇರಿ ಕಾಕೋಟುಪರಂಬು ಗ್ರಾಮದ ರೈತರು ಸಿದ್ಧಪಡಿಸಿದ್ದ ಭತ್ತದ ಸಸಿ ಮಡಿಯನ್ನು ಕಾಡಾನೆಗಳು ನಾಶ ಮಾಡಿರುವುದು. 
ಕೊಡಗು

ಕಾಡಾನೆ ದಾಳಿಗೆ ಭತ್ತದ ಸಸಿಮಡಿ ನಾಶ

ವಿರಾಜಪೇಟೆ:

ಪಟ್ಟಣ ಹೊರ ವಲಯದ ನಾಲ್ಕೇರಿ ಗ್ರಾಮದ ಕಾಕೋಟು ಪರಂಬು ಪ್ರದೇಶದಲ್ಲಿ ಇತ್ತೀಚೆಗೆ ಕಾಡಾನೆ ದಾಳಿ ನಡೆಸಿ ಸಸಿ ಮಡಿ ಹಾಗೂ ಇನ್ನಿತರ ಬೆಳೆಗಳು ನಾಶಪಡಿಸಿವೆ.

ಕಾಡಾನೆಗಳು ಭತ್ತದ ಗದ್ದೆಗೆ ನುಗ್ಗಿ ಸಸಿ ಮಡಿಗಳನ್ನು ತುಳಿದು ನಾಶಪಡಿಸಿರುವುದಲ್ಲದೆ, ಗದ್ದೆ ಸಮೀಪದಲ್ಲಿದ್ದ ಕಾಫಿ, ಬಾಳೆ ಹಾಗೂ ಅಡಿಕೆ ತೋಟಗಳಿಗೂ ಹಾನಿ ಉಂಟುಮಾಡಿವೆ. ಇದರಿಂದ ರೈತರು ಅಪಾರ ಪ್ರಮಾಣದ ನಷ್ಟ ಅನುಭವಿಸಿದ್ದಾರೆ. ಮಳೆ ಕೊರತೆಯಿಂದ ಈಗಾಗಲೇ ಸಂಕಷ್ಟದಲ್ಲಿದ್ದ ರೈತರಿಗೆ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆ ಆರಂಭಿಸುವ ನಿರೀಕ್ಷೆಯಲ್ಲಿದ್ದ ವೇಳೆ ಕಾಡಾನೆ ದಾಳಿ ಸಂಭವಿಸಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಸಂಬಂಧಪಟ್ಟ ಅರಣ್ಯ ಇಲಾಖೆ ಹಾಗೂ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿ, ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.