ಮಂಗಳಾ ಕುನ್ನೇಲ್ ಶ್ರೀಚಾಮುಂಡೇಶ್ವರಿ ಗುಳಿಗನ್ ದೇವಸ್ಥಾನ.
ವಿರಾಜಪೇಟೆ: ತಾಲೂಕಿನ ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಲಿಯೇರಿ(ಇಂಜಿಲೆಗೆರೆ) ಗ್ರಾಮದಲ್ಲಿರುವ ಮಂಗಳಾ ಕುನ್ನೇಲ್ ಶ್ರೀಚಾಮುಂಡೇಶ್ವರಿ ಗುಳಿಗನ್ ದೇವಸ್ಥಾನದ ಬ್ರಹ್ಮ ಕಲಶ ಪ್ರತಿಷ್ಠಾ ಮಹೋತ್ಸವ ಏ.21ರಿಂದ ಏ.23ರವರೆಗೆ ನೆರವೇರಲಿದೆ ಎಂದು ದೇವಾಲಯದ ಮುಖ್ಯಸ್ಥ ಎಂ.ಬಿ.ಶ್ರೀಜಿಶ್ ತಿಳಿಸಿದರು.
ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ದೇವಾಲಯದ ಕುರಿತು ಮಾಹಿತಿ ನೀಡಿದ ಶ್ರೀಜಿಶ್ ಅವರು, ಶ್ರೀಚಾಮುಂಡೇಶ್ವರಿ ಹಾಗೂ ಗುಳಿಗನ್ ದೇವರ ಸ್ಥಾನ ನಮ್ಮ ಸ್ಥಳದಲ್ಲಿದ್ದು ಸುಮಾರು 300 ವರ್ಷಗಳಿಗೂ ಅಧಿಕ ಕಾಲದಿಂದ ನಮ್ಮ ಕುಟುಂಬದ ಹಿರಿಯರು ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದರು. ದೇವಾಲಯ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡು ಹನ್ನೆರಡು ವರ್ಷಗಳು ಆಗುತ್ತಾ ಬಂದಿದ್ದು ಇದೀಗ ದಾನಿಗಳ, ಗ್ರಾಮಸ್ಥರ ನೆರವಿನಿಂದ ನಿರ್ಮಾಣ ಕಾರ್ಯ ಪೂರ್ಣಗೊಂಡು ಪ್ರತಿಷ್ಠಾ ಬ್ರಹ್ಮ ಕಲಶ ಮಹೋತ್ಸವಕ್ಕೆ ಎಲ್ಲ ಸಿದ್ಧಳು ನಡೆದಿವೆ. ಗ್ರಾಮಸ್ಥರು, ದಾನಿಗಳು ನೆರವು ನೀಡಿದ್ದಾರೆ ಎಂದರು.
ಅಂದಾಜು 25 ಲಕ್ಷ ರೂ. ವೆಚ್ಚದಲ್ಲಿ ದೇವಾಲಯ ನಿರ್ಮಿಸಲಾಗಿದೆ. ಏಪ್ರಿಲ್ 21ರಂದು ಮಂಗಳವಾರ ಸಂಜೆ 5 ಗಂಟೆಗೆ ಕಾಂಞಂಗಾಡ್ ಎಡಮನ ಇಲ್ಲತ್ತಿಲ್ ಬ್ರಹ್ಮಶ್ರೀ ಶ್ರೀಈಶ್ವರ ತಂತ್ರಿಗಳನ್ನು ತಾಲಪೋಲಿ ಚಂಡೆವಾದ್ಯ ಮೇಳದೊಂದಿಗೆ ಸ್ವಾಗತಿಸಲಾಗುತ್ತದೆ. 22ರಂದು ಬುಧವಾರ ಬೆಳಗ್ಗೆ 6 ಗಂಟೆಗೆ ಮಹಾಗಣಪತಿ ಹೋಮ, ಮಹಾ ಮೃತ್ಯುಂಜಯ ಹೋಮ ಪೂಜೆಗಳು ನಡೆಯಲಿವೆ. 23ರಂದು ಬೆಳಗ್ಗೆ 6 ಗಂಟೆಗೆ ಮಹಾಗಣಪತಿ ಹೋಮ, ಸಾಮೂಹಿಕ ನೀಲಾಂಜನ ಸಮರ್ಪಣೆ, ಭಕ್ತಾದಿಗಳು ತಮ್ಮ ತಮ್ಮ ಮನೆಗಳಿಂದ ತಾಲಂ ತಯಾರು ಮಾಡಿ ಬೆಳಗ್ಗೆ 6 ಗಂಟೆಗೆ ನಡೆಯುವ ಮಹಾಗಣಪತಿ ಹೋಮದ ಸಮಯದಲ್ಲಿ ಸಮರ್ಪಿಸುವುದು. ಬೆಳಗ್ಗೆ 7.34 ರಿಂದ 9.37ರ ಶುಭ ಮುಹೂರ್ತದಲ್ಲಿ ಮಂಗಳಾ ಕುನ್ನೇಲ್ ಶ್ರೀಚಾಮುಂಡೇಶ್ವರಿ ಗುಳಿಗನ್ ಪ್ರತಿಷ್ಠಾಪನೆ ನಡೆಯುತ್ತದೆ. ನಂತರ ದೇವಿಗೆ ಬ್ರಹ್ಮಕಲಶಾಭಿಷೇಕ, ಅಲಂಕಾರ ಪೂಜೆ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯುತ್ತದೆ ಎಂದು ತಿಳಿಸಿದರು.
ಸ್ಥಳೀಯರು ಹಾಗೂ ಅಮ್ಮತ್ತಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಿಧೀಶ್ ಮಾತನಾಡಿ, ಗ್ರಾಮಸ್ಥರ ಸಹಕಾರದಿಂದ ನೂತನ ದೇವಾಲಯ ನಿರ್ಮಾಣಗೊಂಡಿದೆ. ಮೂರು ದಿನಗಳ ಕಾಲ ನಡೆಯುವ ಬ್ರಹ್ಮ ಕಲಶೋತ್ಸವ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಹಾಗೂ ಸರ್ವ ಭಕ್ತಾಧಿಗಳು ಪಾಲ್ಗೊಂಡು ಪೂಜಾ ಕಾರ್ಯಗಳನ್ನು ಯಶಸ್ವಿಗೊಳಿಸಿಕೊಡಬೇಕೆಂದು ಕೋರಿದರು.
ಸ್ಥಳೀಯರಾದ ರೀಶಾ, ಅಮ್ಮತ್ತಿಯ ಹರೀಶ್ ಮಾತನಾಡಿದರು.