ನಾಪೋಕ್ಲು ಇಂದಿರಾನಗರದ ವಿವೇಕಾನಂದ ಸಂಘದ ಗಣೇಶ ಉತ್ಸವ ಸೇವಾ ಸಮಿತಿ ವತಿಯಿಂದ ಆಯೋಜಿಸಲಾಗಿರುವ 21ನೇ ವರ್ಷದ ಅದ್ದೂರಿ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ಇಂದಿರಾ ನಗರದಲ್ಲಿ ಸಾಧಕರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕುಲ್ಲೇಟಿರ ಅರುಣ್ ಬೇಬ, ಟಿ.ಕೆ.ಶಿವ, ಅನಿಲ್, ಪ್ರಸಾದ್, ವನಜಾಕ್ಷಿ ರೇಣುಕೇಶ್, ಮೂವೇರ ಧರಣಿ ಗಣಪತಿ, ಕವಿತಾ ದಿನೇಶ್, ಆನಂದ ಇದ್ದರು.
ನಾಪೋಕ್ಲು ಪಂಚಾಯಿತಿ ಮಾಜಿ ಸದಸ್ಯ ಕುಲ್ಲೇಟಿರ ಅರುಣ್ ಬೇಬ
ನಾಪೋಕ್ಲು: ಇಲ್ಲಿನ ಇಂದಿರಾನಗರದ ವಿವೇಕಾನಂದ ಸಂಘದ ಗಣೇಶ ಉತ್ಸವ ಸೇವಾ ಸಮಿತಿ ವತಿಯಿಂದ 21ನೇ ವರ್ಷದ ಅದ್ದೂರಿ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ಭಾನುವಾರ ಸಂಜೆ ಇಂದಿರಾನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಘದ ಧ್ವಜಾರೋಹಣ, ಲೋಗೋ ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಕಾಫಿ ಬೆಳೆಗಾರ ಬಿದ್ದಾಟಂಡ ದಿನೇಶ್ ಉದ್ಘಾಟಿಸಿದರು.
ಅತಿಥಿಯಾಗಿ ಭಾಗವಹಿಸಿದ್ದ ನಾಪೋಕ್ಲು ಪಂಚಾಯಿತಿ ಮಾಜಿ ಸದಸ್ಯ ಕುಲ್ಲೇಟಿರ ಅರುಣ್ ಬೇಬ ಮಾತನಾಡಿ, ಯಾವುದೇ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲು ವಿಘ್ನನ ನಾಶಕ ವಿನಾಯಕನಿಗೆ ಪೂಜೆ ಸಲ್ಲಿಸುತ್ತೇವೆ. ಇದು ಎಲ್ಲ ಸನಾತನಿಗಳು ಆಚರಿಸುವ ಹಬ್ಬ. ಇಲ್ಲಿ ಹೆಣ್ಣು-ಗಂಡು ಎರಡೇ ಜಾತಿ. ಎಲ್ಲರ ರಕ್ತವೂ ಕೆಂಪು. ವಿನಾಯಕ ಚತುರ್ಥಿ ಸರ್ವರನ್ನು ಒಂದುಗೂಡಿಸುವ ಹಬ್ಬ ಎಂದು ಹೇಳಿ ಶುಭ ಹಾರೈಸಿದರು.
ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಅಂಬಿ ಕಾರ್ಯಪ್ಪ ಮಾತನಾಡಿ, ಇದು ಸರ್ವರನ್ನು ಒಂದುಗೂಡಿಸುವ ಸಾಮರಸ್ಯದ ಹಬ್ಬ. ದೇಶದ ಮೂಲೆ ಮೂಲೆಯಲ್ಲೂ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಭಾರತೀಯರೆಲ್ಲರನ್ನು ಒಂದುಗೂಡಿಸಲು ಈ ಹಬ್ಬ ಸಹಕಾರಿ ಎಂದ ಅವರು, ಗಣೇಶೋತ್ಸವದ ಅದ್ದೂರಿ ಕಾರ್ಯಕ್ರಮಗಳೊಂದಿಗೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ 2025-26 ಸಾಲಿನಲ್ಲಿ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ 80ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು . ಸೈಕ್ಲಿಂಗ್ ಕೋಚ್ ಚೆರಿ ಚರ್ಮಣ , ರಾಜ್ಯಮಟ್ಟದ ಕಬಡ್ಡಿ ಆಟಗಾರ್ತಿ ಮೇಘನಾ, ಹಾಕಿ ಆಟಗಾರ್ತಿ ತನುಶ್ರೀ, ವಿದ್ಯಾರ್ಥಿಗಳಾದ ಅದ್ವಿಕ್ ಗಣಪತಿ, ದೀಕ್ಷಿತಾ ದೇಚಕ್ಕ , ಸರ್ವಿಕಾ ಮಂಜುನಾಥ್ ಹರ್ಷಿತಾ ಕುಶಾಲಪ್ಪ, ಸಹನಾ ಪಿ.ಎಸ್., ಹಂಸಿನಿ, ಕರಣ್ಯಾ ಅವರನ್ನು ಗಣ್ಯರು ಸನ್ಮಾನಿಸಿ, ಗೌರವಿಸಿದರು.
ಸಂಘದ ಅಧ್ಯಕ್ಷ ಟಿ.ಕೆ.ಶಿವ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನಾಪೋಕ್ಲು, ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಅನಿಲ್, ಸೆಸ್ಕ್ ಉಪ ಇಂಜಿನಿಯರ್ ಪ್ರಸಾದ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ದಾನಿ ಮೂವೇರ ಧರಣಿ ಗಣಪತಿ, ಕವಿತಾ ದಿನೇಶ್, ಸಂಘದ ಉಪಾಧ್ಯಕ್ಷ ಆನಂದ, ಉಸ್ತುವಾರಿ ಜಲೇಂದ್ರ, ಮಾಜಿ ಅಧ್ಯಕ್ಷ ಶಶಿ, ಸದಸ್ಯ ಕಪ್ಪಸ್ವಾಮಿ , ವಿನಾಯಕ, ಶರವಣ ಸೇರದಂತೆ ಇತರ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಹೂವಿನ ಅಲಂಕೃತ ಭವ್ಯ ಮಂಟಪದಲ್ಲಿ ಸೌಂಡ್ಸ್ ಮತ್ತು ದೀಪದ ಮನರಂಜನಾ ಕಾರ್ಯಕ್ರಮಗಳೊಂದಿಗೆ ನಾಪೋಕ್ಲು ಪಟ್ಟಣದಲ್ಲಿ ಮಂಗಳವಾರ ಅದ್ದೂರಿ ಮೆರವಣಿಗೆ ನಡೆದು ಪವಿತ್ರ ಕಾವೇರಿ ನದಿಯಲ್ಲಿ ರಾತ್ರಿ ಉತ್ಸವ ಮೂರ್ತಿಯನ್ನು ವಿಸರ್ಜಿಸಲಾಯಿತು.