ಸೋಮವಾರಪೇಟೆ ತಾಲೂಕಿನ ಹಿತ್ಲುಮಕ್ಕಿ ಗ್ರಾಮಸ್ಥರು ಕಲ್ಲು ಕ್ವಾರೆ ಆರಂಭಕ್ಕೆ ಅವಕಾಶ ನೀಡಬಾರದು ಎಂ ಒತ್ತಾಯಿಸಿ ತಹಸೀಲ್ದಾರ್ ಕೃಷ್ಣಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ರಾಮಚಂದ್ರ, ಶಿವಣ್ಣ, ಮಹಮ್ಮದ್, ಅಪ್ಪಯ್ಯ ಇದ್ದರು.
ಸೋಮವಾರಪೇಟೆ: ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿತ್ಲುಮಕ್ಕಿ ಗ್ರಾಮದಲ್ಲಿ 9 ವರ್ಷಗಳಿಂದ ಮುಚ್ಚಿರುವ ಕಲ್ಲು ಕ್ವಾರೆ ಮರು ಆರಂಭಿಸಲು ಮುಂದಾಗುತ್ತಿರುವುದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಅವಕಾಶ ನೀಡದಂತೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.
ಕೋರೆಯ ಅಕ್ಕಪಕ್ಕದಲ್ಲೇ ಅನೇಕ ಮನೆಗಳಿದ್ದು ಮಕ್ಕಳು ಪ್ರತಿದಿನ ಅದೇ ರಸ್ತೆಯ ಮೂಲಕ ಶಾಲೆಗೆ ತೆರಳುತ್ತಾರೆ. ಕೆಲ ಮನೆಗಳಲ್ಲಿ ಕೇವಲ ವೃದ್ಧರು ವಾಸವಾಗಿದ್ದಾರೆ. ಮತ್ತೆ ಕಲ್ಲು ಕ್ವಾರೆ ಆರಂಭವಾದರೆ ಸುರಕ್ಷತೆ ಇರುವುದಿಲ್ಲ ಎಂಬ ಆತಂಕ ವ್ಯಕ್ತವಾಗಿದೆ. ಗ್ರಾಮದ ಸಮೀಪದಲ್ಲೇ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿವೆ. ಈ ಹಿಂದೆ ಕ್ವಾರೆಯಲ್ಲಿ ನಡೆಯುತ್ತಿದ್ದ ಬ್ಲಾಸ್ಟ್‌ನಿಂದ ಶಾಲೆ ಕಟ್ಟಡಗಳು ಬಿರುಕು ಬಿಟ್ಟಿವೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಕ್ವಾರೆ ಪ್ರಾರಂಭವಾದರೆ ಭಾರಿ ವಾಹನಗಳ ಸಂಚಾರದಿಂದ ರಸ್ತೆ ಹದಗೆಡಲಿದೆ. ಧೂಳು ಹಾಗೂ ಮಾಲಿನ್ಯ ಹೆಚ್ಚಾಗಿ ಮಕ್ಕಳು, ವೃದ್ಧರ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಜನರ ಅಭಿಪ್ರಾಯ ಪಡೆದು ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಗ್ರಾಮಸ್ಥರಾದ ರಾಮಚಂದ್ರ, ಶಿವಣ್ಣ, ಮಹಮ್ಮದ್, ಅಪ್ಪಯ್ಯ, ಪದ್ಮಾವತಿ, ಮಮತಾ, ಶಾರದಾ, ಶಾಹೀನ, ಸ್ವಾತಿ, ಶೃತಿ, ರಶ್ಮಿತಾ, ನಿಶಾ, ಲಲಿತಾ ಸೇರಿದಂತೆ ಹಲವರು ತಹಸೀಲ್ದಾರ್ ಕೃಷ್ಣಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಪರವಾನಗಿ ನೀಡಿದ್ದಲ್ಲಿ ಗ್ರಾಮಸ್ಥರು ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.