ಕುಶಾಲನಗರ ಸಮೀಪದ ತೊರೆನೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದ ಗ್ರಾಮ ದೇವತೆ ಹಬ್ಬ, ಜಾತ್ರೋತ್ಸವದಲ್ಲಿ ವಿದ್ಯುದ್ದೀಪ ಅಲಂಕೃತ ಉತ್ಸವ ಮಂಟಪಗಳು ಗಮನ ಸೆಳೆದವು. 
ಕೊಡಗು

ತೊರೆನೂರಿನಲ್ಲಿ ಗ್ರಾಮದೇವತೆ ಹಬ್ಬದ ಸಂಭ್ರಮ

ಕುಶಾಲನಗರ:
ಉತ್ತರ ಕೊಡಗಿನ ಕುಶಾಲನಗರ ತಾಲೂಕು ತೊರೆನೂರು ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ದೊಡ್ಡಮ್ಮ ಮತ್ತು ಶ್ರೀ ಚಿಕ್ಕಮ್ಮ ದೇವಿಯ ವಾರ್ಷಿಕ ಹಬ್ಬ ಹಾಗೂ ಜಾತ್ರೋತ್ಸವ ಶುಕ್ರವಾರ ರಾತ್ರಿ ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಿAದ ನೆರವೇರಿತು. ಶ್ರೀ ಬಸವೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ನಡೆದ ಗ್ರಾಮ ದೇವತೆ ಹಬ್ಬ ಹಾಗೂ ಜಾತ್ರಾ ಮಹೋತ್ಸವದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿ ದೇವರ ದರ್ಶನ ಪಡೆದರು.
ತೊರೆನೂರು ಗ್ರಾಮದ ದೇವಸ್ಥಾನದ ಬಳಿಯಿಂದ ಶುಕ್ರವಾರ ರಾತ್ರಿ ಆರಂಭಗೊAಡ ದೇವರ ಉತ್ಸವ ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಚರಿಸಿ ವಿರಕ್ತ ಮಠದ ಆವರಣದಲ್ಲಿರುವ ಗ್ರಾಮ ದೇವತೆಗಳ ಆವರಣಕ್ಕೆ ಶನಿವಾರ ಮುಂಜಾನೆ ತಲುಪಿದವು. ಮೆರವಣಿಗೆಯಲ್ಲಿ ಹರಕೆ ಹೊತ್ತ ಭಕ್ತರು ಕುಕ್ಕೆಯೊಂದಿಗೆ ಅಗ್ನಿಕುಂಡ ಹಾಯ್ದು ಭಕ್ತಿಭಾವ ಮೆರೆದರು. ದೇವರಿಗೆ ಹಣ್ಣು ತುಪ್ಪ ಸಮರ್ಪಿಸಿದರು. ರಾತ್ರಿ ಅಮ್ಮನವರ ದೇವಸ್ಥಾನದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕೈಗೊಳ್ಳಲಾಗಿತ್ತು.
ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ದೇವಸ್ಥಾನ ಸಮಿತಿ ಸೇರಿದಂತೆ ಗ್ರಾಮದ ವಿವಿಧ ಭಾಗಗಳಿಂದ ಆಗಮಿಸಿದ್ದ ವಿದ್ಯುದ್ದೀಪಗಳಿಂದ ಅಲಂಕರಿಸಿದ್ದ ಉತ್ಸವ ಮಂಟಪಗಳ ಮೆರವಣಿಗೆಯು ಹಬ್ಬಕ್ಕೆ ಮೆರಗು ನೀಡಿತು. ಮೆರವಣಿಗೆಯಲ್ಲಿ ಉತ್ಸವ ಮಂಟಪಗಳು ನೋಡುಗರ ಕಣ್ಮನಗಳನ್ನು ಸೆಳೆದವು. ಮೆರವಣಿಗೆ ಸಂದರ್ಭ ಗ್ರಾಮದ ಬಸ್ ನಿಲ್ದಾಣದ ಬಳಿ ಸಿಡಿಸಿದ ಬಣ್ಣ ಬಣ್ಣದ ಆಕರ್ಷಕ ಮದ್ದುಗುಂಡುಗಳ ಪ್ರದರ್ಶನ ಹಾಗೂ ಬಾಣ ಬಿರುಸುಗಳ ಚಿತ್ತಾರ ನೋಡುಗರ ಕಣ್ಮನ ಸೆಳೆಯಿತು.
ಈ ಹಬ್ಬಕ್ಕೆ ವಿವಿಧ ಭಾಗಗಳಲ್ಲಿ ನೆಲಸಿರುವ ಗ್ರಾಮಸ್ಥರು, ಮೈಸೂರು, ಹಾಸನ ಜಿಲ್ಲೆಗಳ ಗಡಿಭಾಗದ ಜನರು ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.
ಹಬ್ಬದ ವಿವಿಧ ಧಾರ್ಮಿಕ ಕೈಕಂರ್ಯಗಳು ಹಾಗೂ ಉತ್ಸವ ದೇವಸ್ಥಾನ ಸಮಿತಿ ಅಧ್ಯಕ್ಷ ಟಿ.ಬಿ. ಜಗದೀಶ್, ಉಪಾಧ್ಯಕ್ಷ ಟಿ.ಬಿ. ಚಿದಾನಂದ, ಕಾರ್ಯದರ್ಶಿ ಟಿ.ಎಲ್. ಮಹೇಶ್, ಪ್ರಮುಖರಾದ ಟಿ.ಡಿ. ಈಶ್ವರ್, ಟಿ.ಜಿ. ಶಿವಣ್ಣ, ಎಚ್.ಬಿ. ಚಂದ್ರಪ್ಪ, ಟಿ.ಟಿ. ಗೋವಿಂದ, ಟಿ.ಸಿ. ಶಿವಕುಮಾರ್, ತ್ರಿಣೇಶ್, ಟಿ.ಡಿ. ಶಿವರಾಜ್, ಮಂಜುನಾಥ್, ಹಾಗೂ ಸಮಿತಿ ಪದಾಧಿಕಾರಿಗಳು, ಸದಸ್ಯರ ನೇತೃತ್ವದಲ್ಲಿ ನಡೆದವು.
ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ದೇವಾಲಯದ ಅರ್ಚಕರಾದ ಟಿ.ಎಲ್. ಸೋಮಶೇಖರ್ ಹಾಗೂ ಟಿ.ಎಚ್. ಸಂಜೀವಮೂರ್ತಿ
ನೇತೃತ್ವದಲ್ಲಿ ನಡೆದವು. ವಿರಕ್ತ ಮಠದ ಆವರಣದಲ್ಲಿ ದೇವಸ್ಥಾನದ ಬಳಿ ದಾನಿ ಟಿ.ಜಿ. ಶಿವಮೂರ್ತಿ ಕುಟುಂಬದ ವತಿಯಿಂದ ಪ್ರಸಾದ ವಿನಿಯೋಗ ಮಾಡಲಾಯಿತು.
ಗ್ರಾಮ ದೇವತೆ ಉತ್ಸವದ ಅಂಗವಾಗಿ ಕ್ರೀಡಾ ಸಮಿತಿಯ ವತಿಯಿಂದ ಶನಿವಾರ ಶಾಲಾ ಮೈದಾನದಲ್ಲಿ ಗುಡ್ಡಗಾಡು ಓಟ, ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ಕ್ರಿಕೆಟ್ ಟೂರ್ನಿ ಸೇರಿದಂತೆ ವಿವಿಧ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು.