ಕೂಡಿಗೆ ಗ್ರಾಮದ ಗ್ರಾಮ ದೇವತೆಯ ಹಬ್ಬ ಮತ್ತು ಜಾತ್ರೋತ್ಸವ ಸಂದರ್ಭ ಕೊಂಡೋತ್ಸವ ಏರ್ಪಡಿಸಲಾಗಿತ್ತು. 
ಕೊಡಗು

ಕೂಡಿಗೆ ಗ್ರಾಮದೇವತೆ ಪೂಜೋತ್ಸವ

ಕುಶಾಲನಗರ:
ಕೂಡಿಗೆ ಗ್ರಾಮದ ದಂಡಿನಮ್ಮ, ಶ್ರೀ ಬಸವೇಶ್ವರ, ಶ್ರೀ ಮುತ್ತತ್ ರಾಯ ದೇವಸ್ಥಾನ ಹಾಗೂ ಗ್ರಾಮದೇವಾ ಸಮಿತಿ ಕೂಡಿಗೆ-ಕೊಪ್ಪಲು, ಹೆಗ್ಗಡಳ್ಳಿ-ಕೋಟೆ ವತಿಯಿಂದ ಗ್ರಾಮ ದೇವತೆಯ ಹಬ್ಬ ಮತ್ತು ಜಾತ್ರೋತ್ಸವ ಶ್ರದ್ಧಾಭಕ್ತಿಯಿಂದ, ವಿವಿಧ ಹೋಮ ಹವನಗಳ ಮೂಲಕ ಶುಕ್ರವಾರ ನೆರವೇರಿತು.
ವಾರ್ಷಿಕ ಪೂಜೋತ್ಸವ ಅಂಗವಾಗಿ ಶ್ರೀ ದಂಡಿನಮ್ಮ ದೇವಿಗೆ ವಿಶೇಷ ಪೂಜೆ, ಮಧ್ಯಾಹ್ನ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು.
ರಾತ್ರಿ 8 ಗಂಟೆಗೆ ಆಗ್ನಿ ಸ್ಧಾಪನೆಯಾದ ನಂತರ ಶ್ರೀ ಬಸವೇಶ್ವರ ದೇವಸ್ಥಾನದಿಂದ ಮೂರು ಗ್ರಾಮಗಳ ನೂರಾರು ಗ್ರಾಮಸ್ಥರು ಮತ್ತು ಭಕ್ತಾದಿಗಳು ಕಾವೇರಿ ನದಿಗೆ ತೆರಳಿ ನದಿಯಲ್ಲಿ ಗಂಗಾ ಪೂಜೆ ನಡೆಸಿ, ಕಳಸ ಪೂಜೆ, ಹಣ್ಣಾಡಗೆ ಉತ್ಸವ ಮಂಗಳ ವಾದ್ಯ ಮತ್ತು ನಾಡ ವಾದ್ಯಗಳ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ದೇವಾಲಯ ಆವರಣವನ್ನು ತಲುಪಿತು.
ನಂತರ ಆವರಣದಲ್ಲಿ ಹಾಕಲಾಗಿದ್ದ ಬೆಂಕಿ ಹೊಂಡದಲ್ಲಿ ಹರಕೆ ಹೊತ್ತ ಯುವಕರು, ಮಹಿಳೆಯರು ಗ್ರಾಮಸ್ಥರು ಕೊಂಡೋತ್ಸವದಲ್ಲಿ ಭಾಗವಹಿಸಿದರು. ಪೂಜ್ಯೋತ್ಸವ ಅಂಗವಾಗಿ ಅತ್ಯಾಕರ್ಷಕ ಮದ್ದುಗುಂಡುಗಳ ಪ್ರದರ್ಶನ ನಡೆಯಿತು. ದೇವಾಲಯ ಮುಂಭಾಗದಲ್ಲಿ ಮುಂಜಾನೆ ಉಯ್ಯಾಲೆ ಮಹೋತ್ಸವ ಕಾರ್ಯಕ್ರಮ ನಡೆಯಿತು.
ಪೂಜಾ ಕೈಂಕರ್ಯಗಳನ್ನು ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮಿತಿ ಪ್ರಧಾನ ಅರ್ಚಕ ರಾಘವೇಂದ್ರ ಆಚಾರ್ ಮತ್ತು ದೇವಾಲಯದ ಅರ್ಚಕ ಚಂದ್ರಮುರುಳಿ ಅರಾಧ್ಯ ತಂಡದವರು ನೆರವೇರಿಸಿದರು.
ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಸ್. ಚಂದ್ರು, ಉಪಾಧ್ಯಕ್ಷ ಕೆ.ಬಿ. ಪ್ರಕಾಶ್, ಕಾರ್ಯದರ್ಶಿ ಕೆ.ಟಿ. ವೆಂಕಟೇಶ್, ಸಹ ಕಾರ್ಯದರ್ಶಿ ಸಂತೋಷ್, ಸಮಿತಿ ನಿರ್ದೇಶಕರು, ನಿಕಟಪೂರ್ವ ಅಧ್ಯಕ್ಷರುಗಳು, ಸಮಿತಿ ಗೌರವ ಅಧ್ಯಕ್ಷರು, ಸಲಹಾ ಸಮಿತಿಯ ಸದಸ್ಯರು, ಕೂಡಿಗೆ, ಕೂಡುಮಂಗಳೂರು, ಕಣಿವೆ, ಸೀಗೆಹೊಸೂರು, ಭುವನಗಿರಿ, ಮದಲಾಪುರ ಸೇರಿದಂತೆ ವಿವಿಧೆಡೆಯ ಭಕ್ತರು ಭಾಗವಹಿಸಿದ್ದರು. ಅಗಮಿಸಿದ್ದ ಭಕ್ತರಿಗೆ ಸಮಿತಿ ವತಿಯಿಂದ ಅನ್ನಸಂರ್ತಪಣೆ ಕಾರ್ಯ ನೆರವೇರಿತು.