ಗಿಡಗಳನ್ನು ನೆಡುವ ಮೂಲಕ ೨೭ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಿಸುವ ಮೂಲಕ ಯೋಧರಿಗೆ ನಮನ ಸಲ್ಲಿಸಲಾಯಿತು. 
ಕೊಡಗು

ಗಿಡ ನೆಟ್ಟು ವಿಜಯ್ ದಿವಸ್ ಆಚರಣೆ

ಪ್ರಮುಖ ಮುಖ್ಯಾಂಶಗಳು

  • ಗಿಡ ನೆಟ್ಟು ವಿಜಯ್ ದಿವಸ್ ಆಚರಣೆ
ಕುಶಾಲನಗರ: ಕುಶಾಲನಗರ ಕಾವೇರಿ ನದಿ ಸ್ವಚ್ಛತಾ ಆಂದೋಲನ ಮತ್ತು ಕುಶಾಲನಗರ ಪುರಸಭೆ ಸಹಯೋಗದೊಂದಿಗೆ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ನದಿ ತಟದಲ್ಲಿ ೨೭ ಗಿಡಗಳನ್ನು ನೆಡುವ ಮೂಲಕ ೨೭ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಿಸುವ ಮೂಲಕ ಯೋಧರಿಗೆ ನಮನ ಸಲ್ಲಿಸಲಾಯಿತು.
ಕುಶಾಲನಗರ-ಕೊಪ್ಪ ಗಡಿಭಾಗದ ಸೇತುವೆ ಕೆಳಭಾಗದ ನದಿ ತಟದಲ್ಲಿ ನಡೆದ ಕಾರ್ಯಕ್ರಮಕ್ಕೆ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಹವಾಲ್ದಾರ್ ಆಮೆ ಜನಾರ್ಧನ್(ನಿ) ಅವರು ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಕಾರ್ಗಿಲ್ ಯುದ್ಧ ಸಂದರ್ಭದ ಮಾಹಿತಿ ಮೆಲುಕು ಹಾಕಿದರು. ದೇಶಕ್ಕಾಗಿ ಬಲಿದಾನ ಮಾಡಿದ ಯೋಧರ ಸ್ಮರಣೆ ಮಾಡಬೇಕು. ದೇಶಪ್ರೇಮದ ಬಗ್ಗೆ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ನೀಡುವ ಮೂಲಕ ಹಾದಿ ತಪ್ಪದಂತೆ ಎಚ್ಚರ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಕಾರ್ಗಿಲ್ ವಿಜಯೋತ್ಸವ ಹಾಗೂ ಬಲಿದಾನಗೈದ ಯೋಧರ ಹೆಸರಿನಲ್ಲಿ ಪರಿಸರ ಪೂರಕ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಗೌಡ ಯುವಕ ಸಂಘದ ಅಧ್ಯಕ್ಷರಾದ ಕೊಡಗನ ಹರ್ಷ, ಉದ್ಯಮಿ ಅಮ್ಜದ್, ಕಾವೇರಿ ಸ್ವಚ್ಛತಾ ಅಭಿಯಾನದ ಪ್ರಮುಖರಾದ ವನಿತಾ ಚಂದ್ರಮೋಹನ್ ಮಾತನಾಡಿದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡ ಸಂದರ್ಭ ಹುತಾತ್ಮರಾದ ಯೋಧರ ಸ್ಮರಣೆ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಜವಾಬ್ದಾರಿಯಾಗಿದೆ ಎಂದರು.
ಈ ಸಂದರ್ಭ ಪುರಸಭೆ ನೌಕರ ಬಣ್ಣಾರಿ, ಮತ್ತು ಪೌರಕಾರ್ಮಿಕರು ಪಾಲ್ಗೊಂಡಿದ್ದರು.