ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮಡಿಕೇರಿಗೆ ಆಗಮಿಸಿದ ಮಾಜಿ ಉಪರಾಷ್ಟçಪತಿ ವೆಂಕಯ್ಯ ನಾಯ್ಡು
ಮಾಜಿ ಉಪರಾಷ್ಟçಪತಿ ವೆಂಕಯ್ಯ ನಾಯ್ಡು ಅವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮಡಿಕೇರಿಗೆ ಶನಿವಾರ ಆಗಮಿಸಿದ್ದಾರೆ. ಮೈಸೂರಿನಿಂದ ಹೆಲಿಕಾಪ್ಟರ್‌ನಲ್ಲಿ ಬಂದ ಅವರು ಮಡಿಕೇರಿ ಸಮೀಪದ ಖಾಸಗಿ ರೆಸಾರ್ಟ್ನ ಹೆಲಿಪ್ಯಾಡಿನಲ್ಲಿ ಮಧ್ಯಾಹ್ನ ಇಳಿದರು. ಸಂಜೆ ಇಲ್ಲಿನ ರೆಸಾರ್ಟ್ ಒಂದರಲ್ಲಿ ಆಯೋಜಿಸಿದ್ದ ಕೊಡಗಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ಭಾನುವಾರ (ಫೆ.15) ಇದೇ ರೆಸಾರ್ಟ್ನಲ್ಲಿ ನಡೆಯಲಿರುವ ಸಿನಿಮಾ ನಿರ್ಮಾಪಕ ಅಟ್ಲುರಿ ಪೂರ್ಣಚಂದ್ರ ರಾವ್ ಅವರ 90ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ಕಾರ್ಯಕ್ರಮಕ್ಕೆ ಸೂಪರ್‌ಸ್ಟಾರ್ ರಜನೀಕಾಂತ್ ಕೂಡ ಬರುತ್ತಿದ್ದಾರೆ ಎನ್ನಲಾಗಿದೆ. ಇದಲ್ಲದೆ ತೆಲುಗು ಮತ್ತು ತಮಿಳು ಚಿತ್ರರಂಗದ ಗಣ್ಯರು ಕೂಡ ಈ ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ತೀರಾ ಖಾಸಗಿಯಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆಹ್ವಾನಿತರಿಗೆ ಮಾತ್ರ ರೆಸಾರ್ಟ್ಗೆ ಪ್ರವೇಶ ಕಲ್ಪಿಸಲಾಗಿದೆ. ಗಣ್ಯಾತಿಗಣ್ಯರು ಪಾಲ್ಗೊಳ್ಳುತ್ತಿರುವುದರಿಂದ ರೆಸಾರ್ಟ್ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಖಾಸಗಿ ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ವೆಂಕಯ್ಯ ನಾಯ್ಡು ಅವರು ಫೆ. 18ರ ತನಕ ಇಲ್ಲಿಯೇ ತಂಗಲಿದ್ದು, ನಂತರ ಬೆಂಗಳೂರಿಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು ಕೊಡಗಿಗೆ ಆಗಮಿಸಿದ ವೆಂಕಯ್ಯ ನಾಯ್ಡು ಅವರನ್ನು ಹೆಲಿಪ್ಯಾಡಿನಲ್ಲಿ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಮಾಜಿ ಸಚಿವ ಅಪ್ಪಚ್ಚುರಂಜನ್, ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ, ಮಡಿಕೇರಿ ತಹಸೀಲ್ದಾರ್ ಶ್ರೀಧರ್ ಸ್ವಾಗತಿಸಿದರು.