ಕುಶಾಲನಗರ ತಾಲೂಕು ತೊರೆನೂರು ಗ್ರಾಮ ಪಂಚಾಯಿತಿಯಲ್ಲಿ ವ್ಯಾಪ್ತಿಯಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿ ಜಾಬ್ ಕಾರ್ಡ್ ಮೇಳ ಹಾಗೂ ಮನೆ ಮನೆ ಭೇಟಿ ಕಾರ್ಯಕ್ರಮ ನಡೆಯಿತು. ರಾಕೇಶ್, ಅರುಣ್ ಹಾಗೂ ಗ್ರಾಮಸ್ಥರು ಇದ್ದರು. 
ಕೊಡಗು

ಕೂಲಿ ಕಾರ್ಮಿಕರಿಗೆ ವಿಬಿ ಜಿ ರಾಮ್ ಜಿ ಬಲ

ಮಡಿಕೇರಿ:
ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್‌ಗಾರ್ ಆ್ಯಂಡ್ ಅಜೀವಿಕ ಮಿಷನ್ ಗ್ರಾಮೀಣ - 2026 (ವಿಬಿ ಜಿ ರಾಮ್ ಜಿ) ಯೋಜನೆ ಕೊಡಗಿನಲ್ಲೂ ಆರಂಭವಾಗಿದ್ದು, ಫಲಾನುಭವಿಗಳಿಗೆ ಯಶಸ್ವಿಯಾಗಿ ತಲುಪಿಸುವ ಸಂಬAಧ ಜಿಲ್ಲಾಡಳಿತ ಚಟುವಟಿಕೆಗಳನ್ನು ಶುರು ಮಾಡಿದೆ. ಈ ನಿಟ್ಟಿನಲ್ಲಿ ಜಾಬ್ ಕಾರ್ಡ್ ಮೇಳಗಳನ್ನು ಆಯೋಜಿಸಲಾಗುತ್ತಿದ್ದು, ಆ. 15 ರಿಂದ ಶುರುವಾಗಿರುವ ಅಭಿಯಾನ ಸೆ.15ರ ವರೆಗೆ ನಡೆಯಲಿದೆ. ಗರಿಷ್ಠ ಪ್ರಮಾಣದಲ್ಲಿ ಸಾರ್ವಜನಿಕರನ್ನು ನೋಂದಣಿ ಮಾಡಿಸುವ ಉದ್ದೇಶ ಈ ಕಾರ್ಯಕ್ರಮದ ಹಿಂದಿದೆ.
ಗ್ರಾಮೀಣ ಭಾಗದ ಉದ್ಯೋಗ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ (ಎಂಜಿಎನ್‌ಆರ್‌ಇಜಿಎ) ಬದಲು ನೂತನವಾಗಿ ಜಾರಿಗೆ ತರಲಾಗಿರುವ ವಿಕಸಿತ ಭಾರತ - ಗ್ಯಾರಂಟಿ ಫಾರ್ ರೋಜ್‌ಗಾರ್ ಆ್ಯಂಡ್ ಅಜೀವಿಕ ಮಿಷನ್ ಗ್ರಾಮೀಣ - 2026 (ವಿಬಿ ಜಿ ರಾಮ್ ಜಿ) ಯೋಜನೆಯಡಿ ಕೊಡಗು ಜಿಲ್ಲೆಯಾದ್ಯಂತ ಬೃಹತ್ ಜಾಬ್ ಕಾರ್ಡ್ ಮೇಳಗಳನ್ನು ಆಯೋಜಿಸಲಾಗುತ್ತಿದೆ.
ಹಳೆಯ ನರೇಗಾ ಯೋಜನೆಯಡಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ಉದ್ಯೋಗ ನೀಡಲಾಗುತ್ತಿತ್ತು. ಆದರೆ ನೂತನ ವಿಬಿ ಜಿ ರಾಮ್ ಜಿ ಯೋಜನೆಯಡಿ ಇದನ್ನು 125 ದಿನಗಳಿಗೆ ಹೆಚ್ಚಿಸಲಾಗಿದೆ. ಗ್ರಾಮೀಣ ಕಾರ್ಮಿಕರಿಗೆ ದಿನವೊಂದಕ್ಕೆ 382 ರೂ. ಕೂಲಿ ನಿಗದಿಪಡಿಸಲಾಗಿದೆ. ಸಮುದಾಯ ಆಧಾರಿತ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ರೈತರು ತಮ್ಮ ಜಮೀನುಗಳಲ್ಲಿ ವೈಯಕ್ತಿಕ ಬಾವಿ ನಿರ್ಮಾಣ, ದನದ ಕೊಟ್ಟಿಗೆ, ಕೋಳಿ ಶೆಡ್ ಸೇರಿದಂತೆ ಒಟ್ಟು 318 ಮಾದರಿಯ ಕೆಲಸಗಳನ್ನು ಮಾಡಿಕೊಳ್ಳಬಹುದು.
ಕೃಷಿ ಚಟುವಟಿಕೆಗಳು ಹೆಚ್ಚಿರುವ (ಬಿತ್ತನೆ, ಕೊಯ್ಲು) ಸಮಯದಲ್ಲಿ ರೈತರಿಗೆ ಕೂಲಿಕಾರರ ಕೊರತೆಯಾಗದಂತೆ ತಡೆಯಲು, ವರ್ಷದಲ್ಲಿ ಗರಿಷ್ಠ 60 ದಿನಗಳ ಕಾಲ ಈ ಯೋಜನೆಯ ಕೆಲಸಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ರಾಜ್ಯ ಸರ್ಕಾರಗಳಿಗೆ ಅವಕಾಶವಿದೆ. ಕೆಲಸ ಮುಗಿದ ನಂತರ ವಾರಕ್ಕೊಮ್ಮೆ ಅಥವಾ ಗರಿಷ್ಠ 15 ದಿನಗಳ ಒಳಗಾಗಿ ನೇರವಾಗಿ ಕೆಲಸಗಾರರ ಖಾತೆಗೆ ಕೂಲಿ ಹಣ ಜಮಾ ಮಾಡಲಾಗುತ್ತದೆ. ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ ಕೆಲಸ ನೀಡದಿದ್ದರೆ, ಅಭ್ಯರ್ಥಿಗಳಿಗೆ ನಿರುದ್ಯೋಗ ಭತ್ಯೆ ಪಡೆಯುವ ಹಕ್ಕಿರುತ್ತದೆ.
ಜಲ ಭದ್ರತೆಗಾಗಿ ಕೆರೆಗಳ ಹೂಳೆತ್ತುವುದು, ನೀರು ಸಂರಕ್ಷಣೆ ಹಾಗೂ ನೀರಾವರಿ ಕಾಮಗಾರಿಗಳು, ಗ್ರಾಮೀಣ ಮೂಲಸೌಕರ್ಯಕ್ಕಾಗಿ ಸಂಪರ್ಕ ರಸ್ತೆಗಳು, ಗೋದಾಮುಗಳು ಮತ್ತು ಗ್ರಾಮೀಣ ಕಟ್ಟಡಗಳ ನಿರ್ಮಾಣ. ಜೀವನೋಪಾಯ ಮೂಲಸೌಕರ್ಯಕ್ಕಾಗಿ ಕೃಷಿ ಮತ್ತು ಹಾಲಿನ ಉತ್ಪಾದನೆಗೆ ಪೂರಕವಾದ ಮೂಲಸೌಕರ್ಯ ಅಭಿವೃದ್ಧಿ. ಹವಾಮಾನ ವೈಪರೀತ್ಯ ತಡೆಗಾಗಿ ತೀವ್ರ ವಾತಾವರಣ ವೈಪರೀತ್ಯ ಅಥವಾ ನೈಸರ್ಗಿಕ ವಿಕೋಪಗಳನ್ನು ಎದುರಿಸಲು ಸಹಕಾರಿಯಾಗುವ ತುರ್ತು ಕಾಮಗಾರಿಗಳನ್ನು ಆದ್ಯತೆಯ ವಲಯವನ್ನಾಗಿ ವಿಬಿ ಜಿ ರಾಮ್ ಜಿಯಲ್ಲಿ ಸೇರಿಸಲಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ಅಕುಶಲ ಕೂಲಿಯ ಸಂಪೂರ್ಣ ವೆಚ್ಚ ಭರಿಸುತ್ತಿತ್ತು. ಆದರೆ ಹೊಸ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ 60:40 ಅನುಪಾತದಲ್ಲಿ ವೆಚ್ಚ ಹಂಚಿಕೆಯಾಗುತ್ತದೆ. ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳಿಗೆ ಈ ಅನುಪಾತ 90:10ರಷ್ಟಿದೆ.
ಉದ್ಯೋಗಾಕಾಂಕ್ಷಿಗಳು ನಮೂನೆ-6ರಲ್ಲಿ ಅರ್ಜಿಯ ಮೂಲಕ ಕೆಲಸಕ್ಕೆ ಬೇಡಿಕೆ ಸಲ್ಲಿಸಿದ 15 ದಿನಗಳ ಒಳಗಾಗಿ ಗ್ರಾಮ ಪಂಚಾಯತಿ ವತಿಯಿಂದ ಕಡ್ಡಾಯವಾಗಿ ಕೆಲಸ ಒದಗಿಸಲಾಗುತ್ತದೆ. ಜಿಲ್ಲೆಯ 102 ಗ್ರಾಮ ಪಂಚಾಯತಿಗಳಲ್ಲಿ ಈ ಜಾಬ್ ಕಾರ್ಡ್ ಮೇಳವು ಯಶಸ್ವಿಯಾಗಿ ತಲುಪಲು 5 ತಾಲೂಕುಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
ಹೊಸ ಜಾಬ್ ಕಾರ್ಡ್ ಪಡೆಯಲು, ಕಾಮಗಾರಿಗಳ ಅನುಮೋದನೆಗೆ ಹಾಗೂ ಉದ್ಯೋಗಕ್ಕಾಗಿ ಗ್ರಾಮೀಣ ಪ್ರದೇಶದ ಜನರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತಿ ಕಾರ್ಯಾಲಯವನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ. ಈಗಾಗಲೇ ಜಿಲ್ಲೆಯ ಎಲ್ಲಾ ಗ್ರಾ.ಪಂ.ಗಳು ನಿಯಮಾನುಸಾರ ಕ್ರಿಯಾಯೋಜನೆ ಸಲ್ಲಿಸಿದ್ದು, ಅವುಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನೂ ನೀಡಲಾಗಿದೆ. ಆಸಕ್ತ ಗ್ರಾಮೀಣ ಕುಟುಂಬಗಳು ತಕ್ಷಣವೇ ತಮ್ಮ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಿ ವಿಬಿ ಜಿ ರಾಮ್ ಜಿ ಕಾರ್ಡ್ ಪಡೆದುಕೊಂಡು ಯೋಜನೆಯ ಲಾಭ ಪಡೆಯಬಹುದಾಗಿದೆ.
ಜಾಬ್ ಕಾರ್ಡ್ ಮೇಳದ ಅಂಗವಾಗಿ ಗುರುವಾರ (ಆ.20) ಕುಶಾಲನಗರ ತಾಲೂಕು ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಕಸಿತ ಭಾರತ - ಗ್ಯಾರಂಟಿ ಫಾರ್ ರೋಜ್‌ಗಾರ್ ಆ್ಯಂಡ್ ಅಜೀವಿಕ ಮಿಷನ್ ಯೋಜನೆಯಡಿ ಮನೆ ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮದ ರೈತರು ಮತ್ತು ಸಾರ್ವಜನಿಕರಿಗೆ ಯೋಜನೆ ಅಡಿಯಲ್ಲಿ ಸಿಗುವ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಕುರಿತು ವಿವರವಾದ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು. ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ರಾಕೇಶ್, ಸಂಯೋಜಕ ಅರುಣ್ ಹಾಗೂ ಗ್ರಾಮಸ್ಥರು ಇದ್ದರು.
ಯೋಜನೆಯಡಿ ಲಭ್ಯವಿರುವ ಅನುಕೂಲಗಳ ಬಗ್ಗೆ ಜಾಗೃತಿ ಮೂಡಿಸಿ ಭಾಗವಹಿಸುವಿಕೆ ಹೆಚ್ಚಿಸುವುದು, ಪ್ರತಿದಿನ ಕನಿಷ್ಠ 5 ಲಕ್ಷ ಮಾನವ ದಿನಗಳಂತೆ, ತಿಂಗಳಲ್ಲಿ 1.50 ಕೋಟಿ ಮಾನವ ದಿನಗಳ ಸೃಜನೆಯ ಮೂಲಕ ಗ್ರಾಮೀಣ ಜನರ ಜೀವನೋಪಾಯಕ್ಕೆ ಭದ್ರತೆ ಒದಗಿಸುವುದು, ಜಲಸಂರಕ್ಷಣೆ, ಅಂತರ್ಜಲ ಮರುಪೂರಣ ಹಾಗೂ ದೀರ್ಘಕಾಲೀನ ಜೀವನೋಪಾಯಕ್ಕೆ ಆದ್ಯತೆ, ಸ್ವಗ್ರಾಮದಲ್ಲೇ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ನಗರಗಳಿಗೆ ವಲಸೆ ಹೋಗುವುದನ್ನು ತಡೆಯುವುದು ವಿಬಿ ಜಿ ರಾಮ್ ಜಿ ಯೋಜನೆಯ ಪ್ರಮುಖ ಉದ್ದೇಶಗಳಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆಯರು, ವಿಶೇಷಚೇತನರು, ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ದುರ್ಬಲ ವರ್ಗದ ಕೂಲಿಕಾರರಿಗೆ ಆದ್ಯತೆ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 10 ಫಲಾನುಭವಿಗಳಿಗೆ ಕೃಷಿ ಹೊಂಡ, ತೆರೆದ ಬಾವಿ, ಕೊಳವೆ ಬಾವಿ ಮರುಪೂರಣ ಘಟಕ ನಿರ್ಮಿಸಲು ಅವಕಾಶ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 5 ಫಲಾನುಭವಿಗಳಿಗೆ ಜಾನುವಾರು ಶೆಡ್ ನಿರ್ಮಾಣಕ್ಕೆ ಆದ್ಯತೆ,
ಸಾಂಪ್ರದಾಯಿಕ ಜಲಮೂಲಗಳು, ನಾಲಾಗಳಲ್ಲಿ ತಡೆಗೋಡೆ ನಿರ್ಮಾಣ, ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ಮರುಪೂರಣ ಘಟಕ ನಿರ್ಮಾಣಕ್ಕೆ ಈ ನೂತನ ಯೋಜನೆ ಅಡಿಯಲ್ಲಿ ಆದ್ಯತೆ ನೀಡಲಾಗುವುದು
ಜಿಲ್ಲಾಡಳಿತದ ಮೂಲಕ ಈಗ ನಡೆಯುತ್ತಿರುವ ಜಾಬ್ ಕಾರ್ಡ್ ಮೇಳಗಳ ಮೂಲಕ ನೋಂದಣಿಯಾಗದ ದುರ್ಬಲ ವರ್ಗದ ಕುಟುಂಬಗಳಿಗೆ ಹೊಸ ರೋಜ್‌ಗಾರ್ ಗ್ಯಾರಂಟಿ ಕಾರ್ಡ್ ವಿತರಣೆ, ವಿಶೇಷಚೇತನರಿಗೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ರೋಜ್‌ಗಾರ್ ಗ್ಯಾರಂಟಿ ಕಾರ್ಡ್, ಸ್ಥಳದಲ್ಲೇ ಜಾಬ್ ಕಾರ್ಡ್ಗಳ ನವೀಕರಣ ಹಾಗೂ ಇ-ಕೆವೈಸಿ ಅಪ್‌ಡೇಟ್. ಕೆಲಸಕ್ಕೆ ಹಾಜರಾಗಬೇಕಾದ ದಿನಾಂಕದೊAದಿಗೆ ಸ್ವೀಕೃತಿ ರಸೀದಿ ವಿತರಣೆ ಮಾಡಲಾಗುತ್ತದೆ.
"

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಬದಲಿಗೆ ನೂತನವಾಗಿ ಜಾರಿಗೆ ಬಂದಿರುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಆ್ಯಂಡ್ ಅಜೀವಿಕ್ ಮಿಷನ್ ಗ್ರಾಮೀಣ -2026 ಯೋಜನೆಯಡಿ ಜಿಲ್ಲೆಯಾದ್ಯಂತ ಆ. 15ರಿಂದ ಸೆ. 15ರ ವರೆಗೆ ಒಂದು ತಿಂಗಳ ಕಾಲ ಜಾಬ್ ಕಾರ್ಡ್ ಮೇಳ ನಡೆಯಲಿದೆ. ಜಿಲ್ಲೆಯ 102 ಗ್ರಾ.ಪಂ.ಗಳಲ್ಲಿ ಒಂದು ತಿಂಗಳ ಕಾಲ ನಡೆಯಲಿರುವ ಈ ಜಾಬ್ ಕಾರ್ಡ್ ಮೇಳದಲ್ಲಿ ಗ್ರಾಮೀಣ ಜನರು ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು.

— ಆನಂದ್ ಪ್ರಕಾಶ್ ಮೀನಾ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿ.ಪಂ., ಕೊಡಗು