ಯದುವೀರ್ 
ಕೊಡಗು

ವಿಬಿ ಜಿ ರಾಮ್ ಜಿ ಅಪಪ್ರಚಾರಕ್ಕೆ ಕಿವಿಗೊಡದಿರಿ

ಮಡಿಕೇರಿ:
ವಿಕಸಿತ ಭಾರತ್ ಕಲ್ಪನೆಗೆ ಅನುಗುಣವಾಗಿ ಗ್ರಾಮೀಣ ಪ್ರದೇಶಗಳ ಸಬಲೀಕರಣ ಉದ್ದೇಶದಿಂದ ವಿಬಿ ಜಿ ರಾಮ್ ಜಿ ಕಾಯಿದೆ ರೂಪಿಸಲಾಗಿದ್ದು ಇದರ ಬಗೆಗಿನ ಅಪಪ್ರಚಾರಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಗ್ರಾಮಾಂತರ ಪ್ರದೇಶದ ಜನರಿಗೆ ಉದ್ಯೋಗ ಕೊಡುವ ನಿಟ್ಟಿನಲ್ಲಿ ಇಂದಿರಾಗಾAದಿ ಕಾಲದಿಂದಲೂ ಯೋಜನೆಗಳು ಜಾರಿಯಲ್ಲಿವೆ. ಕಾಲಕ್ಕೆ ತಕ್ಕಂತೆ ಅವುಗಳ ಹೆಸರು, ಕಾರ್ಯವೈಖರಿ ಬದಲಿಸಿಕೊಂಡು ಬರಲಾಗಿದೆ. ಇದೀಗ ಈಗಿನ ಕಾಲಘಟ್ಟಕ್ಕೆ ಸರಿಯಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಯ ಸಲುವಾಗಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದ್ದು, ಮಹಾತ್ಮ ಗಾಂಧೀಜಿ ಕನಸಿನ ವಿಕಸಿತ ಭಾರತದ ಗುರಿ ಇಟ್ಟುಕೊಂಡು ವಿಬಿ ಜಿ ರಾಮ್ ಜಿ ಕಾಯಿದೆ ಮಾಡಲಾಗಿದೆ. ಮಹಾತ್ಮ ಗಾಂಧಿ ಆದರ್ಶಗಳ ಆಧಾರದಲ್ಲಿ ಈ ಕಾಯಿದೆ ಅಡಿಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಬಿಜೆಪಿ ವತಿಯಿಂದ ಗುರುವಾರ ಇಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಎಂ ನರೇಗಾ ಯೋಜನೆ ಬಗ್ಗೆ ಸಾಕಷ್ಟು ದೂರುಗಳು ಇದ್ದವು. ಈ ಯೋಜನೆಯಲ್ಲಿ ಗ್ರಾಮೀಣ ಕೌಶಲ್ಯದ ಸರಿಯಾದ ಬಳಕೆ ಆಗುತ್ತಿರಲಿಲ್ಲ. ಗ್ರಾಮಗಳ ಅಭಿವೃದ್ಧಿಗೂ ಈ ಯೋಜನೆ ಸಹಕಾರಿ ಆಗಿರಲಿಲ್ಲ. ಹಾಗಾಗಿ ಬದಲಾವಣೆ ಅಗತ್ಯವಾಗಿತ್ತು. ಈ ಯೋಜನೆ ಬಗ್ಗೆ ಕಾಂಗ್ರೆಸ್‌ನ ಅಪಪ್ರಚಾರಗಳೆಲ್ಲಾ ಸುಳ್ಳುಗಳಿಂದ ಕೂಡಿದೆ. ಸ್ಥಳೀಯ ಕಾಮಗಾರಿಗಳ ನಿರ್ಧಾರ ಗ್ರಾಮ ಪಂಚಾಯಿತಿಗಳಲ್ಲೇ ಆಗುತ್ತದೆ. ಕೊಡಗಿನಂಥ ಜಿಲ್ಲೆಗಳಿಗೆ ಈ ಕಾಯಿದೆ ಸಾಕಷ್ಟು ಸಹಕಾರಿ ಆಗಿದೆ. ಕಾಲಕ್ಕೆ ತಕ್ಕಂತೆ ಕೆಲಸವನ್ನು ರಾಜ್ಯ ಮಟ್ಟದಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಗ್ರಾಮೀಣರ ಜೀವನೋಪಾಯಕ್ಕಾಗಿಯೂ ಅನುಕೂಲವಾಗಿದೆ. ಪ್ರಮುಖವಾಗಿ ರಾಜ್ಯಗಳಿಗೆ ಹೊಣೆಗಾರಿಕೆ ಸೃಷ್ಟಿಸಲಾಗಿದೆ. ಕಾಯಿದೆ ಸಮರ್ಪಕ ಜಾರಿಗೆ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ವಿಕಸಿತ ಭಾರತಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಯೋಜನೆ ರೂಪಿಲಾಗಿದೆ. ಕಾಯಿದೆ ಜಾರಿ ಆದ ನಂತರ ಉತ್ತಮ ಬೆಳವಣಿಗೆ ನಿರೀಕ್ಷೆ ಮಾಡಬಹುದು ಎಂದರು.
ಬಿಜೆಪಿ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಬಿ.ಸಿ. ನವೀನ್ ಮಾತನಾಡಿ ವಿಬಿ ಜಿ ರಾಮ್ ಜಿ ಕಾಯಿದೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಬಿಜೆಪಿ ಮೂರು ಹಂತದಲ್ಲಿ ಕಾರ್ಯಕ್ರಮ ರೂಪಿಸಿದೆ. ನಾವು ನೇರವಾಗಿ ಜನರ ಬಳಿಯೇ ಹೋಗುತ್ತಿದ್ದೇವೆ. ಆದರೆ ಕಾಂಗ್ರೆಸ್ ಈ ವಿಚಾರದಲ್ಲಿ ಪ್ರಚಾರ ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ ಕೊಡಗು ಜಿಲ್ಲೆಯ ಬಹುತೇಕ ಗ್ರಾ.ಪಂ.ಗಳಲ್ಲಿ ವಿಬಿ ಜಿ ರಾಮ್ ಜಿ ಕಾಯಿದೆಯನ್ನು ಸ್ವಾಗತಿಸಲಾಗಿದೆ. ಹೆಚ್ಚಿನ ಗ್ರಾ.ಪಂ.ಗಳಲ್ಲಿ ಯೋಜನೆ ಪರವಾಗಿ ನಿರ್ಣಯ ಆಗಿದೆ ಎಂದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರ ಅರುಣ್ ಕುಮಾರ್, ನಗರಾಧ್ಯಕ್ಷ ಉಮೇಶ್ ಸುಬ್ರಹ್ಮಣಿ ಸುದ್ದಿಗೋಷ್ಠಿಯಲ್ಲಿ ಇದ್ದರು.