ಅಂತರಶಾಲಾ ಚೆಸ್ ಪಂದ್ಯಾವಳಿಯಲ್ಲಿ ಬಹುಮಾನ ವಿದ್ಯಾರ್ಥಿಗಳೊಂದಿಗೆ ಶಂಕರ್ ನಾರಾಯಣ, ದಾಮೋದರ್, ಕೆ.ಎಸ್.ಸುಮಿತ್ರಾ ಇತರರಿದ್ದರು.
- ಗೆಲುವು-ಸೋಲು ಪ್ರತಿಯೊಂದು ಆಟದ ಸಹಜವಾದ ಭಾಗ
- ಅಂತರಶಾಲಾ ಚೆಸ್ ಪಂದ್ಯಾವಳಿಯ ಸಮಾರೋಪದಲ್ಲಿ ಶಂಕರ್ ನಾರಾಯಣ
ಮಡಿಕೇರಿ: ಕೊಡಗು ವಿದ್ಯಾಲಯ, ಮಡಿಕೇರಿಯಲ್ಲಿನ ಚೆಸ್ ಪಂದ್ಯಾವಳಿಯ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಎರಡು ದಿನಗಳ ಸಿಲ್ವರ್ ಜುಬಿಲಿ ಅಂತರಶಾಲಾ ಚೆಸ್ ಪಂದ್ಯಾವಳಿ ಯಶಸ್ವಿಯಾಗಿ ಸಂಪನ್ನಗೊಂಡಿತು. ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಚೆಸ್ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದರು.
ಸಮಾರೋಪ ಸಮಾರಂಭದಲ್ಲಿ ಹಿರಿಯ ಚೆಸ್ ತರಬೇತುದಾರ ಶಂಕರ್ ನಾರಾಯಣ ಮಾತನಾಡಿ, ಕಲಿಕೆಯೇ ನಮ್ಮ ಮುಖ್ಯ ಧ್ಯೇಯವಾಗಿದೆ. ಗೆಲುವು ಮತ್ತು ಸೋಲು ಪ್ರತಿಯೊಂದು ಆಟದ ಸಹಜವಾದ ಭಾಗ. ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಶಿಸ್ತು ಹಾಗೂ ಕ್ರೀಡಾಸ್ಫೂರ್ತಿಯನ್ನು ಬೆಳೆಸುತ್ತವೆ. ತರಬೇತುದಾರನಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಸಂದರ್ಭದಲ್ಲಿ ಅವರಿಂದಲೂ ನಾನು ಅನೇಕ ವಿಷಯಗಳನ್ನು ಕಲಿತಿದ್ದೇನೆ. ಈ ಚೆಸ್ ಅಕಾಡೆಮಿಯು ನನಗೆ ಅಮೂಲ್ಯ ಅನುಭವವನ್ನು ನೀಡಿದೆ. ವಿದ್ಯಾರ್ಥಿಗಳು ತೋರಿದ ಉತ್ಸಾಹ ಶ್ಲಾಘನೀಯವಾಗಿದ್ದು, ಇದೇ ಉತ್ಸಾಹವನ್ನು ಮುಂದಿನ ದಿನಗಳಲ್ಲಿಯೂ ಮುಂದುವರಿಸಿಕೊಂಡು ಇನ್ನಷ್ಟು ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ದೈಹಿಕ ಶಿಕ್ಷಣ ನಿರ್ದೇಶಕರಾದ ದಾಮೋದರ್ ಮಾತನಾಡಿ, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳ ಶ್ರಮ ಮತ್ತು ಸಹಕಾರವನ್ನು ಶ್ಲಾಘಿಸಿದರು. ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರುವುದರ ಜೊತೆಗೆ ಕ್ರೀಡಾಸ್ಫೂರ್ತಿ, ಸ್ನೇಹ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುತ್ತವೆ ಎಂದು ಹೇಳಿದರು.
ವಿವಿಧ ವಿಭಾಗಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಟ್ರೋಫಿ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ.ಎಸ್.ಸುಮಿತ್ರಾ, ಆಡಳಿತ ಮುಖ್ಯಸ್ಥ ಪಿ.ರವಿ, ಶಿಕ್ಷಕಿ ಸೋನಾ ಮುತ್ತಮ್ಮ ಉಪಸ್ಥಿತರಿದ್ದರು.
ಪಂದ್ಯಾವಳಿಯಲ್ಲಿ ವಿಜೇತರಾದವರು: ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಡಿ.ವಿಭಾ ಶೆಟ್ಟಿ(ಪ್ರ), ಟಿ.ಪಿ.ರಿಷಿತಾ(ದ್ವಿ), ಎಂ.ವಿ.ಜನ್ಯ(ತೃ) ಹಾಗೂ ಜೆನೆಲಿಯಾ ಧೀನಾ ಚತುರ್ಥ ಬಹುಮಾನ ಪಡೆದರು.
ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಕೆ.ಸಶಿಕಾಂತ್(ಪ್ರ), ಅಯಾನ್ ವಂದ ಕುದ್ರಿ(ದ್ವಿ), ವಿ.ಎಂ.ಕೃಪಾಲ್ ಕುಲಾಲ್(ತೃ) ಹಾಗೂ ಎಸ್.ಎಸ್.ಸಾತ್ವಿಕ್ ಚತುರ್ಥ ಬಹುಮಾನ ಪಡೆದರೆ, ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಬಿ.ಡಿ.ಧೃತಿ(ಪ್ರ), ಕೆ.ಆರ್.ತ್ರಿನಮ್(ದ್ವಿ), ಕೆ.ಎಂ.ಲಕ್ಷ್ಯ ಪೊನ್ನಕ್ಕ(ತೃ) ಹಾಗೂ ಕೆ. ಸಂಯಮಾ ವಿಟ್ಟಲ್ ಚತುರ್ಥ ಬಹುಮಾನ ಪಡೆದರು.
ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಉನ್ನತ್ ಪಿ.ಎಸ್.ಸಾರಥ್ಯ(ಪ್ರ), ತರುಣ್ ನಾಯಕ್(ದ್ವಿ), ಅರುಷ್ ಅಭಿನಂದನ್ ವಂದ ಕುದ್ರಿ(ತೃ) ಹಾಗೂ ಎಂ.ಸಂಸ್ಕಾರ್ ಚತುರ್ಥ ಬಹುಮಾನ ಪಡೆದರು.