ಇಂಗ್ಲೀಷ್ ಶಿಕ್ಷಕರು ಇಲ್ಲದೇ ಇರುವುದರಿಂದ ಸರ್ಕಾರಿ ಶಾಲೆಗಳ ಬಡ ಮಕ್ಕಳಿಗೆ ಅನ್ಯಾಯ ಆಗುತ್ತಿದೆ (ಸಾಂದರ್ಭಿಕ ಚಿತ್ರ)
ಜಾಗತೀಕರಣದ ಈ ಯುಗದಲ್ಲಿ ಇಂಗ್ಲಿಷ್ ಕೇವಲ ಒಂದು ಭಾಷೆಯಾಗಿ ಉಳಿದಿಲ್ಲ. ಬದಲಿಗೆ ಅದು ಉದ್ಯೋಗ, ತಂತ್ರಜ್ಞಾನ ಮತ್ತು ಜಾಗತಿಕ ಜ್ಞಾನವನ್ನು ಪಡೆದುಕೊಳ್ಳಲು ಪ್ರಮುಖ ಸೇತುವೆಯಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಮಾಜದಲ್ಲಿ ಸಮಾನ ಅವಕಾಶಗಳು ಸಿಗಬೇಕಾದರೆ ಗುಣಮಟ್ಟದ ಇಂಗ್ಲಿಷ್ ಶಿಕ್ಷಣ ಅತ್ಯಗತ್ಯ. ಆದರೆ ಈಗ ಸರ್ಕಾರ ನೇಮಕ ಮಾಡಿಕೊಳ್ಳುತ್ತಿರುವ 15 ಸಾವಿರ ಶಿಕ್ಷಕರಲ್ಲಿ ಇಂಗ್ಲೀಷ್ ಶಿಕ್ಷಕರ ಸಂಖ್ಯೆ ತೀರಾ ಕಡಿಮೆ ಇದೆ. ಕೊಡಗಿನಲ್ಲಿ ಒಂದು ಹುದ್ದೆಗೆ ಕೂಡ ನೇಮಕ ಆಗುತ್ತಿಲ್ಲ.
ಉನ್ನತ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳು, ಐಟಿ ರಂಗ ಹಾಗೂ ಖಾಸಗಿ ವಲಯದ ಉದ್ಯೋಗಗಳಲ್ಲಿ ಇಂಗ್ಲಿಷ್ ಸಂವಹನ ಕೌಶಲ್ಯ ಪ್ರಮುಖ ಅರ್ಹತೆಯಾಗಿದೆ. ನಗರ ಪ್ರದೇಶದ ಮಕ್ಕಳು ಖಾಸಗಿ ಶಾಲೆಗಳಲ್ಲಿ ಸುಲಭವಾಗಿ ಇಂಗ್ಲಿಷ್ ಕಲಿತು ಮುನ್ನುಗ್ಗುತ್ತಿದ್ದರೆ, ಗ್ರಾಮೀಣ ಭಾಗದ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳು ಸರ್ಕಾರಿ ಶಾಲೆಗಳನ್ನೇ ನೆಚ್ಚಿಕೊಂಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಇಂಗ್ಲಿಷ್ ಬೋಧನೆ ಸಿಗದೆ, ಗ್ರಾಮೀಣ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದು ಅವರಲ್ಲಿ ಕೀಳರಿಮೆಯನ್ನು ಬೆಳೆಸುತ್ತಿದ್ದು, ಭವಿಷ್ಯದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಿನ್ನಡೆ ಅನುಭವಿಸುವಂತೆ ಮಾಡುತ್ತಿದೆ ಎನ್ನುವುದು ಪೋಷಕರ ಆರೋಪವಾಗಿದೆ.
ರಾಜ್ಯದ ಸಾವಿರಾರು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಕರ ತೀವ್ರ ಕೊರತೆಯಿದೆ. ಹಲವು ಶಾಲೆಗಳಲ್ಲಿ ಇಂಗ್ಲಿಷ್ ವಿಷಯಕ್ಕೆ ಪ್ರತ್ಯೇಕ ಶಿಕ್ಷಕರು ಇಲ್ಲದೆ, ಇತರ ವಿಷಯದ ಶಿಕ್ಷಕರೇ ಇಂಗ್ಲಿಷ್ ಬೋಧಿಸುವ ಅನಿವಾರ್ಯತೆಯಿದೆ. ವರ್ಷದಿಂದ ವರ್ಷಕ್ಕೆ ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚುತ್ತಿದ್ದರೂ, ಸರ್ಕಾರ ಮಾತ್ರ ಪೂರ್ಣ ಪ್ರಮಾಣದ ನೇಮಕಾತಿ ಪ್ರಕ್ರಿಯೆಗೆ ಮುಂದಾಗುತ್ತಿಲ್ಲ. ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಸರ್ಕಾರದ ನಿರಾಸಕ್ತಿ ಶಿಕ್ಷಣದ ಗುಣಮಟ್ಟದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇಂಗ್ಲೀಷ್ ಶಿಕ್ಷಕರ ನೇಮಕಾತಿಯಲ್ಲಿ ಉಂಟಾಗುತ್ತಿರುವ ವಿಳಂಬ ಶೈಕ್ಷಣಿಕ ವ್ಯವಸ್ಥೆಯ ಬಲ ಕುಗ್ಗಿಸುತ್ತಿದೆ ಎನ್ನುವ ಮಾತುಗಳು ಸಾಮಾನ್ಯವಾಗಿದೆ.
ಇನ್ನೊಂದೆಡೆ ಬಿ.ಎಡ್, ಎಂ.ಎ (ಇಂಗ್ಲಿಷ್) ಹಾಗೂ ಟಿಇಟಿ ಪರೀಕ್ಷೆಗಳನ್ನು ಉತ್ತೀರ್ಣರಾಗಿ ಉದ್ಯೋಗದ ನಿರೀಕ್ಷೆಯಲ್ಲಿರುವ ಸಾವಿರಾರು ಅಭ್ಯರ್ಥಿಗಳು ನಿರುದ್ಯೋಗದ ಭೀತಿಯಲ್ಲಿದ್ದಾರೆ. ವರ್ಷಗಟ್ಟಲೆ ಶ್ರಮಪಟ್ಟು ವ್ಯಾಸಂಗ ಮಾಡಿದರೂ ಸರ್ಕಾರದ ಅಧಿಸೂಚನೆಗಳು ಹೊರಬರದೆ ವಯೋಮಿತಿ ಮೀರುತ್ತಿದೆ. ಖಾಸಗಿ ಶಾಲೆಗಳಲ್ಲಿ ಸಿಗುವ ಅಲ್ಪ ವೇತನಕ್ಕೆ ದುಡಿಯಲಾಗದೆ, ಇತ್ತ ಸರ್ಕಾರಿ ಕೆಲಸವೂ ಸಿಗದೆ ಇಂಗ್ಲಿಷ್ ವಿಷಯದ ಪದವೀಧರರು ತೀವ್ರ ಮಾನಸಿಕ ಹಾಗೂ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
ಇದೀಗ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ 2026-27ನೇ ಸಾಲಿಗೆ ಸಂಬAಧಿಸಿದAತೆ 15 ಸಾವಿರ ಶಿಕ್ಷಕರ ಬೃಹತ್ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಆ.18ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು ಸೆ.7ರ ತನಕ ಕಾಲಾವಕಾಶ ಕಲ್ಪಿಸಲಾಗಿದೆ. ಆದರೆ ಪದವೀಧರ ಪ್ರಾಥಮಿಕ ಶಿಕ್ಷಕರ ಇಂಗ್ಲಿಷ್ ವಿಷಯದ ಹುದ್ದೆಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ ಎಂದು ಅರ್ಹ ಅಭ್ಯರ್ಥಿಗಳು ಆರೋಪಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ವಿಷಯದ ಶಿಕ್ಷಕರ ತೀವ್ರ ಕೊರತೆಯಿದ್ದರೂ, ಪ್ರಸ್ತುತ ನೇಮಕಾತಿ ಅಧಿಸೂಚನೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಹುದ್ದೆಗಳನ್ನು ಹಂಚಿಕೆ ಮಾಡಲಾಗಿಲ್ಲ. ಇದರಿಂದ ಸಾವಿರಾರು ಇಂಗ್ಲಿಷ್ ಬಿ.ಎಡ್, ಡಿ.ಎಲ್.ಎಡ್ ಮುಗಿಸಿದ ಅರ್ಹ ಅಭ್ಯರ್ಥಿಗಳ ಭವಿಷ್ಯದ ಜತೆಗೆ, ಗ್ರಾಮೀಣ ಭಾಗದ ಶಾಲಾ ಮಕ್ಕಳ ಶೈಕ್ಷಣಿಕ ಹಿತಾಸಕ್ತಿಗೂ ಧಕ್ಕೆಯಾಗುತ್ತಿದೆ ಎಂದು ಅರ್ಹ ಅಭ್ಯರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಇಂದು ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಯುಗವನ್ನು ಎದುರಿಸಲು ಇಂಗ್ಲಿಷ್ ಭಾಷೆಯ ಜ್ಞಾನ ಅತ್ಯಗತ್ಯ. ಆದರೆ ಶಾಲಾ ಮಟ್ಟದಲ್ಲೇ ಸಮರ್ಥ ಇಂಗ್ಲಿಷ್ ಶಿಕ್ಷಕರಿಲ್ಲದಿದ್ದರೆ ಮಕ್ಕಳು ಹಿಂದುಳಿಯುವAತಾಗುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ವಿಷಯಕ್ಕೆ ಸಂಬAಧಿಸಿದAತೆ ಸಾವಿರಾರು ಹುದ್ದೆಗಳು ಖಾಲಿಯಿವೆ. ಆದರೆ ಪ್ರಸ್ತುತ ನೇಮಕಾತಿಯಲ್ಲಿ ಇವುಗಳನ್ನು ಸರಿಯಾಗಿ ಪರಿಗಣಿಸದೆ ಕಡಿಮೆ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ.
ಹಲವು ವರ್ಷಗಳಿಂದ ಶಿಕ್ಷಕರ ಅರ್ಹತಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅರ್ಹ ಇಂಗ್ಲಿಷ್ ಶಿಕ್ಷಕ ಅಭ್ಯರ್ಥಿಗಳಿಗೆ ಈ ಅಧಿಸೂಚನೆಯಿಂದ ತೀವ್ರ ಹಿನ್ನಡೆಯಾಗಿದೆ. ಹಾಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ವಿಷಯದ ವಾಸ್ತವಿಕ ಖಾಲಿ ಹುದ್ದೆಗಳ ಸರಿ ಪ್ರಮಾಣದ ಮಾಹಿತಿಯನ್ನು ಶಾಲಾ ಶಿಕ್ಷಣ ಇಲಾಖೆ ತಕ್ಷಣವೇ ಪಡೆದುಕೊಳ್ಳಬೇಕು. ಅಧಿಸೂಚನೆಯಲ್ಲಿ ಇಂಗ್ಲಿಷ್ ಶಿಕ್ಷಣಕ್ಕೆ ಹೆಚ್ಚುವರಿ ಹುದ್ದೆಗಳನ್ನು ಮಂಜೂರು ಮಾಡಿ, ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎನ್ನುವ ಒತ್ತಾಯ ಕೇಳಿಬರುತ್ತಿದೆ.
ವಿಷಯವಾರು ಶಿಕ್ಷಕರ ಕೊರತೆಯನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ಇಂಗ್ಲಿಷ್ ಭಾಷಾ ಬೋಧನೆಗೆ ಸೂಕ್ತ ಆದ್ಯತೆ ನೀಡುವ ಮೂಲಕ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎನ್ನುವ ವಿಷಯ ಮುಂದಿಟ್ಟುಕೊAಡು ಇಂಗ್ಲೀಷ್ ಭಾಷಾ ಪದವೀಧರ ಶಿಕ್ಷಕರು ಹೋರಾಟಕ್ಕೆ ಇಳಿಯಲು ಸಜ್ಜಾಗುತ್ತಿದ್ದಾರೆ. ನಮ್ಮ ಹೋರಾಟ ಕೇವಲ ನಮಗೆ ಕೆಲಸ ಸಿಗಲಿ ಎನ್ನುವುದಕ್ಕಾಗಿ ಮಾತ್ರವಲ್ಲ. ಸರ್ಕಾರಿ ಶಾಲೆಗಳಲ್ಲಿ ಓದುವ ಬಡ ಹಾಗೂ ಗ್ರಾಮೀಣ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಎನ್ನುವ ಅರ್ಹ ಅಭ್ಯರ್ಥಿಗಳು ಸರ್ಕಾರಿ ಶಾಲೆಯ ಮಗುವಿಗೂ ಗುಣಮಟ್ಟದ ಇಂಗ್ಲಿಷ್ ಶಿಕ್ಷಣ ಸಿಗಬೇಕಾದರೆ, ವಿಷಯ ಪರಿಣತ ಶಿಕ್ಷಕರ ನೇಮಕಾತಿ ಅತ್ಯಗತ್ಯ ಎನ್ನುತ್ತಾರೆ.
ರಾಜ್ಯದಲ್ಲಿ ಒಟ್ಟು 15 ಸಾವಿರ ಶಿಕ್ಷಕರ ನೇಮಕಾತಿಗಾಗಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಈ ಪೈಕಿ 8,500 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು, 4,500 ಸಹ ಶಿಕ್ಷಕರು, 900 ಪ್ರಾಥಮಿಕ ಶಾಲಾ ಶಿಕ್ಷಕರು, 600 ದೈಹಿಕ ಶಿಕ್ಷಣ ಶಿಕ್ಷಕರು, 500 ಕಂಪ್ಯೂಟರ್ ಶಿಕ್ಷಕರ ನೇಮಕ ನಡೆಯುತ್ತಿದೆ. ಈ ಪೈಕಿ ಕೊಡಗಿನಲ್ಲಿ ಒಟ್ಟು 129 ಹುದ್ದೆಗಳಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಮೂವರು ಕಂಪ್ಯೂಟರ್ ಶಿಕ್ಷಕರು, 73 ಪದವೀಧರ ಪ್ರಾಥಮಿಕ ಶಿಕ್ಷಕರು, 3 ದೈಹಿಕ ಶಿಕ್ಷಣ ಶಿಕ್ಷಕರು, 47 ಪ್ರೌಢಶಾಲಾ ಶಿಕ್ಷಕರ ನೇಮಕಾತಿ ನಡೆಯಲಿದೆ. ಇಂಗ್ಲೀಷ್ ಶಿಕ್ಷಕರ ನೇಮಕಾತಿ ಪದವೀಧರ ಶಿಕ್ಷಕರ ಅಡಿಯಲ್ಲಿ ಬರಲಿದ್ದು ಕೊಡಗಿನ ಮಟ್ಟಿಗೆ ಒಂದು ಕೂಡ ಇಂಗ್ಲೀಷ್ ಶಿಕ್ಷಕರ ಹುದ್ದೆ ನಿಗದಿ ಆಗಿಲ್ಲ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಷಯವಾರು ಶಿಕ್ಷಕರ ಕೊರತೆಯನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ನೇಮಕಾತಿ ನಡೆಸಬೇಕು. ನಾವು ನಮ್ಮ ಉದ್ಯೋಗಕ್ಕಾಗಿ ಸರ್ಕಾರದ ಮುಂದೆ ಈ ಬೇಡಿಕೆ ಇಡುತ್ತಿಲ್ಲ. ನಗರ ಪ್ರದೇಶಗಳು ಮತ್ತು ಖಾಸಗಿ ಶಾಲೆಗಳ ಮಕ್ಕಳ ಜತೆ ಸ್ಪರ್ಧಿಸಲು, ಸಮಾಜದಲ್ಲಿ ಸಮಾನ ಅವಕಾಶ ಸಿಗಲು ಹಾಗೂ ಸರ್ಕಾರಿ ಶಾಲಾ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಈ ಬೇಡಿಕೆ ಇಡುತ್ತಿದ್ದೇವೆ. ಹಾಗಾಗಿ ಸರ್ಕಾರ ನಮ್ಮ ಮನವಿಯನ್ನು ಸಹಾನುಭೂತಿಯಿಂದ ಪರಿಗಣಿಸಿ, 2026ರ ಶಿಕ್ಷಕರ ನೇಮಕಾತಿಯಲ್ಲಿ ಇಂಗ್ಲಿಷ್ ವಿಷಯದ ಹುದ್ದೆಗಳನ್ನು ಮರುಪರಿಶೀಲಿಸಿ ಹೆಚ್ಚಿಸುವ ಮೂಲಕ ಸಾವಿರಾರು ಅರ್ಹ ಅಭ್ಯರ್ಥಿಗಳ ನಿರೀಕ್ಷೆಗೆ ನ್ಯಾಯ ಒದಗಿಸಬೇಕಾಗಿದೆ.
— ಹೆಸರು ಹೇಳಲಿಚ್ಛಿಸದ ಅರ್ಹ ಅಭ್ಯರ್ಥಿ
2015ರ ಮಂಜೂರಾದ ಹುದ್ದೆಗಳಿಗೆ ಅನುಗುಣವಾಗಿ ನೇಮಕಾತಿ ನಡೆಯುತ್ತಿದೆ. ಆ ರೊಸ್ಟರ್ ಇಟ್ಟುಕೊಂಡೇ ನೇಮಕಾತಿಗೆ ಕರೆ ಮಾಡಲಾಗಿದೆ. ಎಲ್ಲಾ ಶಾಲೆಗಳಿಗೆ ಇಂಗ್ಲೀಷ್ ಶಿಕ್ಷಕರ ಮಂಜೂರಾದ ಹುದ್ದೆ ಇಲ್ಲ. ಶಿಕ್ಷಕರ ಕೊರತೆ ಎನ್ನುವುದಕ್ಕಿಂದ ಮಂಜೂರಾದ ಹುದ್ದೆಗಳೇ ಕಡಿಮೆ ಇದೆ. ಹಾಗಾಗಿ ಪ್ರಾಥಮಿಕ ಶಾಲೆ ಪದವೀಧರ ಶಿಕ್ಷಕರ ಹುದ್ದೆಯಲ್ಲಿ ಈಗ ಶೂನ್ಯ ಅಂತ ಇದೆ..
— ಆರ್.ಪಿ. ಮಹೇಶ್, ಪ್ರಭಾರ ಉಪನಿರ್ದೇಶಕ, ಶಾಲಾ ಶಿಕ್ಷಣ ಇಲಾಖೆ, ಕೊಡಗು