ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ನಡೆದ ವಿಜ್ಞಾನ ಆಧಾರಿತ ಪೋಷಕಾಂಶ ಹಾಗೂ ಇತರ ಕೃಷಿ ಪರಿಕರಗಳ ಆಳವಡಿಕೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು. ಡಾ. ಅರ್ಥಬಂಧು ಸಾಹು, ಡಾ. ಎಸ್.ಎನ್. ಸುಶೀಲ್, ವೆಂಕಟರಾಮ ರೆಡ್ಡಿ ಜೆ. ಪಾಟೀಲ್, ಬೋಸ್ ಮಂದಣ್ಣ ಮತ್ತಿತರರು ಇದ್ದರು.  
ಕೊಡಗು

ರಾಸಾಯನಿಕ ಕೀಟನಾಶಕಗಳ ಬದಲಿಗೆ ಜೈವಿಕ ಕೀಟನಾಶಕ ಬಳಸಿ

ಮಡಿಕೇರಿ:
ರೈತರು ರಾಸಾಯನಿಕ ಕೀಟನಾಶಕಗಳ ಬದಲಿಗೆ ಜೈವಿಕ ಕೀಟನಾಶಕಗಳನ್ನು ಹೆಚ್ಚಾಗಿ ಬಳಸುವಂತಾಗಬೇಕು ಎಂದು ಬೆಂಗಳೂರು ಐಸಿಎಆರ್ ನಿರ್ದೇಶಕ ಡಾ. ಎಸ್.ಎನ್. ಸುಶೀಲ್ ಹೇಳಿದರು. ಚೆಟ್ಟಳ್ಳಿಯಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಶುಕ್ರವಾರ ನಡೆದ ವಿಜ್ಞಾನ ಆಧಾರಿತ ಪೋಷಕಾಂಶ ಹಾಗೂ ಇತರ ಕೃಷಿ ಪರಿಕರಗಳ ಆಳವಡಿಕೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷಿ ಅಭಿವೃದ್ಧಿಯಲ್ಲಿ ತೋಟಗಾರಿಕೆ ಕ್ಷೇತ್ರದ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ರೈತರು ಚಿಂತನೆ ನಡೆಸಬೇಕು. ರಾಸಾಯನಿಕ ಕೀಟನಾಶಕಗಳಿಗಿಂತ ಜೈವಿಕ ಕೀಟನಾಶಕಗಳ ಬಳಕೆಗೆ ಆದ್ಯತೆ ನೀಡಬೇಕು ಎಂದರು.
ಐಸಿಎಆರ್‌ನ ಮತ್ತೊಬ್ಬ ನಿರ್ದೇಶಕ ಡಾ. ಅರ್ಥಬಂಧು ಸಾಹು ಮಾತನಾಡಿ ಮಣ್ಣಿನ ಫಲವತ್ತತೆ ಕಾಪಾಡಲು ಸಾವಯವ ಪದಾರ್ಥಗಳ ಬಳಕೆ ಅಗತ್ಯ. ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆ ಮಣ್ಣಿನ ಗುಣಮಟ್ಟಕ್ಕೆ ಹಾನಿ ಮಾಡುತ್ತದೆ ಎಂದು ಹೇಳಿದರು.
ಕೃಷಿ ನಿರ್ದೇಶಕ ಡಾ. ಜಿ.ಟಿ. ಪುತ್ರ ಮಾತನಾಡಿ ಯೂರಿಯಾ, ಡಿಎಪಿ, ಎಂಒಪಿ ಗೊಬ್ಬರಗಳ ಕಚ್ಛಾ ವಸ್ತುಗಳಿಗೆ ವಿದೇಶ ಅವಲಂಬನೆ ಹೆಚ್ಚಿರುವುದರಿಂದ ಪರಿಸರ ಸ್ನೇಹಿ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕೆಂದರು.
ಕೃಷಿ ನಿರ್ದೇಶನಾಲಯದ ನಿರ್ದೇಶಕ ವೆಂಕಟರಾಮ ರೆಡ್ಡಿ ಜೆ. ಪಾಟೀಲ್ ಮಾತನಾಡಿ ಚೆಟ್ಟಳ್ಳಿಯ ಕೇಂದ್ರ ಇತರೆ ಕೃಷಿ ಕೇಂದ್ರಗಳಿಗೆ ಮಾದರಿಯಾಗಿದ್ದು, ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗೆ 3 ಲಕ್ಷದಿಂದ 15 ಲಕ್ಷ ರೂ. ತನಕ ಸಬ್ಸಿಡಿ ದೊರೆಯಲಿದೆ ಎಂದರು.
ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಹಾಗೂ ಪ್ರಗತಿಪರ ಬೆಳೆಗಾರ ಬೋಸ್ ಮಂದಣ್ಣ ಮಾತನಾಡಿ, ಜಾಗತಿಕ ಪರಿಸ್ಥಿತಿಗಳ ಪರಿಣಾಮವಾಗಿ ಗೊಬ್ಬರ ಹಾಗೂ ಇತರ ಉತ್ಪನ್ನಗಳ ಕೊರತೆ ಉಂಟಾಗುವ ಸಾಧ್ಯತೆ ಇದೆ. ಕೊಡಗಿನ ಹವಾಮಾನದಲ್ಲಿ ಬದಲಾವಣೆ ಕಾಣಿಸುತ್ತಿದ್ದು, ನುರಿತ ಕಾರ್ಮಿಕರ ಕೊರತೆ ಕೃಷಿಗೆ ಸವಾಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ನಿರ್ದೇಶಕ ಡಾ. ತುಷಾರ್ ಕಾಂತಿ ಬೆಹೆರಾ ಮಾತನಾಡಿ, ಕೃಷಿ ಕೇಂದ್ರಗಳ ಅಭಿವೃದ್ಧಿಯಿಂದ ರೈತರ ಪ್ರಗತಿ ಸಾಧ್ಯವಾಗುತ್ತದೆ. ಕೊಡಗಿನ ಹವಾಮಾನಕ್ಕೆ ಅನುಕೂಲಕರವಾದ ಆಫ್-ಸೀಜನ್ ಲಿಚಿ ಬೆಳೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹೊಂದಿದ್ದು, ಅದರ ಬೆಳವಣಿಗೆಗೆ ಒತ್ತು ನೀಡುವಂತೆ ಸಲಹೆ ನೀಡಿದರು.
ಚೆಟ್ಟಳ್ಳಿ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಬಿ.ಎಂ. ಮುರಳೀಧರ ಮಾತನಾಡಿ ಸಂಸ್ಥೆಯ 80ನೇ ವರ್ಷದ ಸ್ಥಾಪನಾ ಹಿನ್ನೆಲೆ ಕುರಿತು ಮಾಹಿತಿ ನೀಡಿದರು. ಈ ವರ್ಷ ಒಂದು ಲಕ್ಷಕ್ಕೂ ಹೆಚ್ಚು ತೋಟಗಾರಿಕಾ ಗಿಡಗಳು, 60 ಸಾವಿರ ಬಟರ್‌ಫ್ರೂಟ್ ಗಿಡಗಳು ಹಾಗೂ 10 ಸಾವಿರ ಕೊಡಗಿನ ಕಿತ್ತಳೆ ಗಿಡಗಳನ್ನು ಮಾರಾಟ ಮಾಡಿ ಸುಮಾರು 1.20 ಕೋಟಿ ರೂ. ಆದಾಯ ಗಳಿಸಿರುವುದಾಗಿ ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಅತಿಥಿಗಳು ಮಧುವನ, ಪಾಲಿಹೌಸ್ ಹಾಗೂ ತೆರೆದ ಸಭಾಂಗಣ ಉದ್ಘಾಟಿಸಿದರು. ಕೇಂದ್ರದಲ್ಲಿ ಬೆಳೆದ ಅರ್ಕಾ ಸುಪ್ರೀಮ್, ಅರ್ಕಾ ಕೂರ್ಗ್ ಬಟರ್‌ಫ್ರೂಟ್ ಸೇರಿದಂತೆ ವಿವಿಧ ಹಣ್ಣು-ಹಂಪಲುಗಳು, ಕೃಷಿಯನ್ನು ಬಾಧಿಸುವ ವಿವಿಧ ಕೀಟಗಳು, ಸಾವಯವ ಗೊಬ್ಬರಗಳು, ಪೋಷಕಾಂಶಗಳು, ಹಣ್ಣಿನ ಗಿಡಗಳು ಹಾಗೂ ಕೃಷಿಕರ ತಾಜಾ ಜೇನು ಪ್ರದರ್ಶನಕ್ಕಿಡಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಪೌಷ್ಠಿಕ ಕೈತೋಟ ಹಾಗೂ ವೈಜ್ಞಾನಿಕ ಜೇನು ಸಾಕಾಣಿಕೆ ಕುರಿತ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ಎಸ್‌ಸಿ, ಎಸ್‌ಟಿ ಹಾಗೂ ಟಿಎಸ್ಪಿ ಯೋಜನೆಯ ಫಲಾನುಭವಿಗಳಿಗೆ ಗಿಡಗಳು ಹಾಗೂ ಕೃಷಿ ಪರಿಕರಗಳನ್ನು ವಿತರಿಸಲಾಯಿತು.
ನಿವೃತ್ತ ಸಿಬ್ಬಂದಿ, ಪ್ರಗತಿಪರ ಕೃಷಿಕರು, ಅತ್ಯುತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗಳಾದ ಸಿ.ಎಂ ಮೋಹನ್, ಎ.ಎಂ. ಜಗದೀಶ್ ಹಾಗೂ ಪತ್ರಕರ್ತ ಪುತ್ತರಿರ ಕರುಣ್ ಕಾಳಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿಜ್ಞಾನಿಗಳಾದ ಡಾ. ರಮೇಶ್ ಬಾಬು, ಡಾ. ಎ.ಟಿ. ರಾಣಿ ಮತ್ತಿತರರು ಇದ್ದರು.