ಚೆನ್ನಯ್ಯನಕೋಟೆ ಜಮಾಅತ್ ಪರವಾಗಿ ಕೋಳುಮಂಡ ರಫೀಕ್ ಅವರನ್ನು ಸನ್ಮಾನಿಸುತ್ತಿರುವುದು . ಜಮಾಅತ್ ಪದಾಧಿಕಾರಿಗಳು ಹಾಜರಿದ್ದರು.
- ವಿರಾಜಪೇಟೆ ತಾಲೂಕು ಕೆ.ಡಿ. ಪಿ. ಸದಸ್ಯ ಕೋಳುಮಂಡ ರಫೀಕ್ ಅಭಿಪ್ರಾಯ
ಪೊನ್ನಂಪೇಟೆ: ಧಾರ್ಮಿಕ ಉತ್ಸವಗಳು ಮತ್ತು ಆಚರಣೆಗಳು ಆಯಾ ಊರಿನ ಮತ್ತು ಮಹಲಿನ ಒಂದು ಪ್ರಮುಖ ಪರಂಪರೆಯಾಗಿದೆ. ಕೊಡಗಿನ ಹಲವೆಡೆ ನಡೆಯುವ ಉರೂಸ್ ಗಳು ಸಮಾಜದಲ್ಲಿ ಕೋಮು ಸಾಮರಸ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ವಿರಾಜಪೇಟೆ ತಾಲೂಕು ಕೆ.ಡಿ. ಪಿ. ಸದಸ್ಯ ಕೋಳುಮಂಡ ರಫೀಕ್ ಅಭಿಪ್ರಾಯಪಟ್ಟಿದ್ದಾರೆ.
ಪೊನ್ನಂಪೇಟೆ ತಾಲೂಕಿನ ಪಾಲಿಬೆಟ್ಟ ಸಮೀಪದ ಚೆನ್ನಯ್ಯನಕೋಟೆಯ ಜಮಾಅತ್ ಆಶ್ರಯದಲ್ಲಿ ನಡೆಯುವ ಹಜ್ಹರತ್ ನಜ್ಹರ್ ಮೊಹಿದ್ದೀನ್ ಶಾವಲಿಯವರ ವಾರ್ಷಿಕ ಉರೂಸ್ ಕಾರ್ಯಕ್ರಮದ ಸಮಾರೋಪದ ಅಂಗವಾಗಿ ಮಂಗಳವಾರ ಆಯೋಜಿಸಲಾಗಿದ್ದ ಸೌಹಾರ್ದ ಸಮ್ಮೇಳದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಕೊಡಗಿನ ಹಲವೆಡೆ ನಡೆಯುವ ಉರೂಸ್ ಕಾರ್ಯಕ್ರಮಗಳಲ್ಲಿ ಹಿಂದೂ- ಮುಸಲ್ಮಾನ ಸಮುದಾಯವರು ಮತಭೇದವನ್ನು ಮರೆತು ಒಂದಾಗಿ ಭಾಗವಹಿಸುತ್ತಾರೆ. ಹೀಗಾಗಿ ಜಿಲ್ಲೆಯ ಬಹುತೇಕ ಉರೂಸುಗಳು ಹಿಂದೂ- ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಜನ ಸಮುದಾಯಗಳ ನಡುವೆ ಭಾವೈಕ್ಯತೆಯನ್ನು ಮೂಡಿಸುವಲ್ಲಿ ಹಾಗೂ ವಿವಿಧ ಕೋಮುಗಳ ನಡುವೆ ಸಾಮರಸ್ಯವನ್ನು ಸಾರುವಲ್ಲಿ ಯಶಸ್ವಿಯಾಗಿದೆ. ಈ ರೀತಿಯ ಆಚರಣೆಗಳೇ ನಿಜವಾದ ಭಾವೈಕ್ಯತೆಯ ಸಂಗಮ. ಎಲ್ಲ ಧರ್ಮಗಳು ಶ್ರೇಷ್ಠ ಎಂದು ತಿಳಿದಾಗ ಮಾತ್ರವೇ ಇಲ್ಲಿನ ಧರ್ಮ, ಸಂಪ್ರದಾಯ ಹಾಗೂ ಭಾಷೆಗಳ ಬಗ್ಗೆ ಗೌರವ ಭಾವನೆ ಮೂಡುತ್ತದೆ ಎಂದು ಹೇಳಿದರು.
ಸೌಹಾರ್ದ ಸಮ್ಮೇಳನವನ್ನು ಚೆನ್ನಯ್ಯನಕೋಟೆಯ ಜುಮಾಮಸೀದಿಯ ಧರ್ಮಗುರು ಮೊಹಮ್ಮದ್ ನಾಝೀರ್ ರಜ್ವಿ ಉದ್ಘಾಟಿಸಿದರು. ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಪಿ. ಎ. ಹನೀಫ್ ಮಾತನಾಡಿದರು. ಚೆನ್ನಯ್ಯನಕೋಟೆ ಜುಮ್ಮಾ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷರಾದ ಜವಾದುಲ್ ರೆಹಮಾನ್, ಚೆನ್ನಯ್ಯನಕೋಟೆ ಗ್ರಾ. ಪಂ. ಉಪಾಧ್ಯಕ್ಷ ವಿಜು, ಸದಸ್ಯರಾದ ನಾಗರಾಜು, ಹೊಳಮಾಲ ಜುಮ ಮಸೀದಿ ಆಡಳಿತ ಮಂಡಳಿ ಅಧ್ಯಕ್ಷರಾದ ಮುಸ್ತಫಾ, ಅಲ್ಲಿನ ಜುಮಾ ಮಸೀದಿಯ ಖತೀಬರಾದ ಬಶೀರ್ ಸಖಾಫಿ, ಸ್ಥಳೀಯ ಸಮಾಜ ಸೇವಕರಾದ ಮನು, ರವೀಂದ್ರ ಭಾವೆ, ಚೆನ್ನಯ್ಯನಕೋಟೆ ಜುಮ್ಮಾ ಮಸೀದಿ ಕಾರ್ಯದರ್ಶಿ ಫೈರೋಜ್ ಖಾನ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕೋಳುಮಂಡ ರಫೀಕ್ ಮತ್ತು ಹನೀಫ್ ಅವರ ಸಮುದಾಯ ಸೇವೆಯನ್ನು ಪರಿಗಣಿಸಿ ಚೆನ್ನಯ್ಯನಕೋಟೆ ಜಮಾಅತ್ ಪರವಾಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಉಮ್ಮರ್ ಮದನಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.