ಅವಿತ ಕಾವ್ಯಗಳು ಎಂಬ ವಿನೂತನ ಕಾರ್ಯಕ್ರಮ 
ಕೊಡಗು

‘ಅಡುಗೆಯೊಳಗೆ ಅವಿತ ಕಾವ್ಯಗಳು’ ವಿನೂತನ ಕಾರ್ಯಕ್ರಮ ಇಂದು

ಶನಿವಾರಸಂತೆ: ಕೊಡಗು ಅಭಿನಯ ಕಲಾ ಮಿಲನ ಚಾರಿಟಬಲ್ ಟ್ರಸ್ಟ್ ವತಿಯಿಂದ ತಿಂಗಳ ಕಾರ್ಯಕ್ರಮದ ಸಂಭ್ರಮದಲ್ಲಿ ಅಡುಗೆಯೊಳಗೆ ಅವಿತ ಕಾವ್ಯಗಳು ಎಂಬ ವಿನೂತನ ಕಾರ್ಯಕ್ರಮವನ್ನು ಆ.2ರಂದು ಭಾನುವಾರ 10.30 ಗಂಟೆಗೆ ಶನಿವಾರಸಂತೆಯ ನಾಟ್ಯ ಸದನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಅಭಿನಯ ಕಲಾ ಮಿಲನ ಚಾರಿಟಬಲ್ ಟ್ರಸ್ಟ್‌ನ ಪದಾಧಿಕಾರಿ ಕುದುಕುಳಿ ಇಂದಿರಾವತಿ ಅಡುಗೆಮನೆ ಹೆಡ್ ಕುಕ್ ಆಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶನಿವಾರಸಂತೆ ಮಹಿಳಾ ಸಮಾಜದ ಅಧ್ಯಕ್ಷೆ ಬಿ.ಎನ್.ಭುವನೇಶ್ವರಿ ಒಲೆ ಹಚ್ಚಿ ಉದ್ಘಾಟಿಸುತ್ತಾರೆ.ನಿಡ್ತ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾನಸಾ ಮುಖ್ಯ ಅತಿಥಿಯಾಗಿ ಒಗ್ಗರಣೆ ಹಾಕುತ್ತಾರೆ.
ಕವಯತ್ರಿಯರಾದ ಪವಿತ್ರಾ ಹೆತ್ತೂರು, ಡಿ.ಸುಜಲಾ ದೇವಿ, ಎಸ್.ಎಂ.ಆಶಾ, ದೀಪಿಕಾ ಸುದರ್ಶನ್, ವಸಂತಿ ರವೀಂದ್ರ, ಲಾವಣ್ಯಾ ಮೋಹನ್, ಜಿ.ಪಿ.ಕವಿತಾ, ಎಂ.ಎ.ರುಬಿನಾ, ಎ.ಡಿ.ಪದ್ಮಾವತಿ, ಜಲಾ ಕಾಳಪ್ಪ, ಎಲ್.ಎಂ.ಪ್ರೇಮಾ, ಬಿ.ಜಿ.ಜ್ಯೋತಿ, ಶರ್ಮಿಳಾ ರಮೇಶ್, ಶ.ಗ.ನಯನತಾರಾ ಪ್ರಕಾಶ್ಚಂದ್ರ ಕವಿತೆಗಳ ರುಚಿ ಬಡಿಸಲಿದ್ದಾರೆ.
ನೃತ್ಯ ಶಾಲಾ ವಿದ್ಯಾರ್ಥಿನಿ ಡಿ.ವೈ.ಇಶಾನಿ ಸ್ವಾಗತ ಮಾಡಿದರೆ, ಕುಮಾರಿ ಪುಣ್ಯ ಪ್ರಾಂಜಲಿ ಅಡುಗೆ ಮನೆ ಗೀತೆ ಹಾಡುತ್ತಾರೆ. ಶಿಕ್ಷಕಿ ತೇಜಾವತಿ ಗೀತೆ ಗಾಯನ ಮಾಡುತ್ತಾರೆ.
ಕಾರ್ಯಕ್ರಮದಲ್ಲಿ ಅಭಿನಯ ಕಲಾ ಮಿಲನ ಚಾರಿಟಬಲ್ ಟ್ರಸ್ಟ್‌ನ ಹಿರಿಯ ತರಬೇತುದಾರ, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ತೆಕ್ಕಡೆ ಕುಮಾರ ಸ್ವಾಮಿಯವರಿಗೆ ಗೌರವ ಸಮರ್ಪಣೆ ಮಾಡಲಾಗುವುದು ಎಂದು ಕಾರ್ಯಕ್ರಮ ಆಯೋಜಕಿ ನಾಟ್ಯ ಮಿಲನ ನೃತ್ಯ ಶಾಲೆಯ ಅಧ್ಯಕ್ಷೆ ಮಿಲನಾ ಭರತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.