ನಾಪೋಕ್ಲು ವ್ಯಾಪ್ತಿಯ ಕಾಫಿತೋಟಳಲ್ಲಿ ಕಾಫಿ ಹೂಗಳು ಅರಳಿರುವ ಸುಂದರ ನೋಟ..
- ಸುರಿದ ಅಲ್ಪ ಮಳೆ ರೈತರಿಗೆ ಸಮಸ್ಯೆ
- ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಸಾಧ್ಯತೆ
ನಾಪೋಕ್ಲು: ಕೆಲ ದಿನಗಳ ಹಿಂದೆ ಸುರಿದ ಮೊದಲ ಮಳೆಯಿಂದ ನಾಪೋಕ್ಲು ವ್ಯಾಪ್ತಿಯ ಕೆಲ ಭಾಗಗಳಲ್ಲಿ ಕಾಫಿಯ ಹೂಗಳು ಅರಳಿ ಘಮಘಮಿಸುತ್ತಿವೆ. ಆದರೆ ಇದು ರೈತರಿಗೆ ಆತಂಕ ಉಂಟು ಮಾಡಿದೆ.
ಜ.21ರಂದು ಸುರಿದ ದಿಢೀರ್ ಮಳೆ ಈ ಭಾಗದ ರೈತರನ್ನು ಆತಂಕಕ್ಕೆ ದೂಡಿದೆ. ಕಾಫಿ ಕೊಯ್ಲು ಕೆಲಸ, ಭತ್ತದ ಒಕ್ಕಣೆ ಕಾರ್ಯ ಪೂರ್ಣಗೊಳ್ಳುವ ಮುನ್ನವೇ ಸುರಿದ ಅಲ್ಪ ಮಳೆ ರೈತರಿಗೆ ಸಮಸ್ಯೆ ತಂದೊಡ್ಡಿದೆ. ಈ ವ್ಯಾಪ್ತಿಯ ಬೇತು, ಕೊಟ್ಟಮುಡಿ, ಹೊದ್ದೂರು, ನೆಲಜಿ, ಎಮ್ಮೆಮಾಡು ಬಲ್ಲಮಾವಟ್ಟಿ, ಪುಲಿಕೋಟ್ ಅಯ್ಯಂಗೇರಿ ಮತ್ತಿತರ ಭಾಗಗಳಲ್ಲಿ ಸಾಧಾರಣ ಮಳೆಯಾಗಿ ಒಂದೆಡೆ ಕಾಫಿಯ ಹೂಗಳು ಅರಳುತ್ತಿದ್ದು, ಕಾಫಿ ಕೊಯ್ಲು ಕೆಲಸಕ್ಕೆ ಅಡ್ಡಿಯಾಗುತ್ತಿದೆ. ನಿಗದಿತ ಅವಧಿಗಿಂತ ಮೊದಲು ಮಳೆ ಸುರಿದ ಪರಿಣಾಮ ಗಿಡಗಳಲ್ಲಿ ಹಣ್ಣಾದ ಕಾಫಿ ಉದುರುತ್ತಿದೆ. ಅಲ್ಪ ಪ್ರಮಾಣದ ಮಳೆಯಿಂದ ಮುಂದಿನ ದಿನ ಇಳುವರಿಯ ಮೇಲೆ ಪರಿಣಾಮ ಬೀರಲಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಸಾಮಾನ್ಯವಾಗಿ ಫೆಬ್ರವರಿ ಕೊನೆಯ ವಾರದಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಹೂಮಳೆ ಸುರಿದರೆ ಕಾಫಿ ಫಸಲು ನಿಶ್ಚಿತ ಎಂದು ಬೆಳೆಗಾರರು ದೃಢವಾಗಿ ನಂಬಿದ್ದಾರೆ. ಈ ವೇಳೆ ಕಾಫಿ ಕೀಳುವ ಕೆಲಸ ಪೂರ್ಣಗೊಳ್ಳಲಿದ್ದು, ಕಾಫಿಯ ಮೊಗ್ಗುಗಳು ಅರಳಲು ಸಿದ್ಧವಾಗಿರುತ್ತವೆ. ನೀರಿನ ವ್ಯವಸ್ಥೆ ಉಳ್ಳವರು ತುಂತುರು ನೀರಾವರಿ ಮೊರೆ ಹೋಗುತ್ತಾರೆ. ಆದರೆ ಈ ವರ್ಷ ಕಾಫಿ ಕೊಯ್ಲು ಆಗುತ್ತಿರುವಾಗಲೇ ಜನವರಿ ತಿಂಗಳ ಎರಡನೇ ವಾರದಲ್ಲಿ ಮಳೆಯಾಗಿದೆ. ಅದೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಿಲ್ಲ. ಸುರಿದ ಅಲ್ಪ ಮಳೆಗೆ ಬೇಗನೇ ಕಾಫಿಯ ಹೂಗಳು ಅರಳಿದರೆ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇಳುವರಿ ಕುಂಠಿತವಾಗುತ್ತಿದೆ ಎಂದು ಬಹುತೇಕ ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.