ಉಮ್ಮತಾಟ್ ನೃತ್ಯದ ಸಂಗ್ರಹ ಚಿತ್ರ. 
ಕೊಡಗು

ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಉಮ್ಮತ್ತಾಟ್ ಆಯ್ಕೆ

ಪ್ರಮುಖ ಮುಖ್ಯಾಂಶಗಳು

  • ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಉಮ್ಮತ್ತಾಟ್ ಆಯ್ಕೆ
ಮಡಿಕೇರಿ: ಬೆಂಗಳೂರಿನ ರಾಜಾಜಿನಗರದ ಲುಲು ಮಾಲ್‌ನಲ್ಲಿ ಜ.೨೯ರಿಂದ ಫೆ.೬ರ ವರೆಗೆ ನಡೆಯುವ ೧೭ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಉಮ್ಮತ್ತಾಟ್ ಕೊಡವ ಸಾಕ್ಷ್ಯಚಿತ್ರ ಆಯ್ಕೆಯಾಗಿದೆ ಎಂದು ಸಾಕ್ಷ್ಯಚಿತ್ರದ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯೂ ಅರ್ಹತಾಪತ್ರ ಪಡೆದಿರುವ ಉಮ್ಮತ್ತಾಟ್ ಜನಪದದಲ್ಲಿ ಸಿಬಿಎಫ್ ಸಿ ದಾಖಲಾತಿ ಹೊಂದಿದ ಸಾಕ್ಷ್ಯಚಿತ್ರವಾಗಿದೆ. ಈ ಬಾರಿಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತಿದ್ದು, ಮಹಿಳಾ ಸಬಲೀಕರಣ ವಿಭಾಗದಲ್ಲಿ ಉಮ್ಮತ್ತಾಟ್ ಪ್ರದರ್ಶನಗೊಳ್ಳಲಿದೆ. ಸ್ವಸ್ತಿಕ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರು ನಿರ್ಮಿಸಿ, ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರು ನಿರ್ದೇಶಿಸಿರುವ ಉಮ್ಮತ್ತಾಟ್ ಕೊಡವ ಜಾನಪದ ನೃತ್ಯ ಪ್ರಕಾರದ ಮೇಲೆ ಬೆಳಕು ಚೆಲ್ಲಿದೆ. ಹಲವು ವರ್ಷಗಳ ಇತಿಹಾಸ ಹೊಂದಿರುವ ಈ ಕಲೆಯ ಒಟ್ಟು ೧೩ ನೃತ್ಯ ಪ್ರಕಾರಗಳನ್ನು ಚಿತ್ರೀಕರಿಸಲಾಗಿದ್ದು, ೧೫೩ ಕಲಾವಿದರು ನೃತ್ಯ ಮಾಡಿದ್ದಾರೆ.
ಕಳೆದ ವರ್ಷ ಗೋವಾದಲ್ಲಿ ನಡೆದ ೫೬ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಉಮ್ಮತ್ತಾಟ್ ಇಂಡಿಯನ್ ಪನೋರಮಾಗೆ ಆಯ್ಕೆಯಾದ ಮೊದಲ ಕೊಡವ ಭಾಷಾ ಸಾಕ್ಷ್ಯಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದೀಗ ೧೭ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದರಿಂದ ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ ಎಂದು ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ, ಜಾನಪದ ಕಲಾವಿದೆ ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ, ಜನಪದ ನೃತ್ಯ ಅಧ್ಯಯನ ಗ್ರಂಥ ರಚಿಸಿರುವ ಸಾಹಿತಿ ಡಾ.ರೇವತಿ ಪೂವಯ್ಯ, ಸಾಹಿತಿ ಹಾಗೂ ಕಲಾವಿದೆ ಮೊಣ್ಣಂಡ ಶೋಭಾ ಸುಬ್ಬಯ್ಯ, ತಾಯಿ ಬೇರು ಪುಸ್ತಕದ ರಚನೆಕಾರರಾದ ಬೆಂಗಳೂರಿನ ಸ್ನೇಹ ಕಪ್ಪಣ್ಣ ಅವರುಗಳ ಸಹಕಾರ ಮತ್ತು ಸಲಹೆಯನ್ನು ಪಡೆದು ಸಾಕ್ಷ್ಯಚಿತ್ರ ಉಮ್ಮತ್ತಾಟ್‌ನ್ನು ತಯಾರಿಸಲಾಗಿದೆ ಎಂದು ಕೊಟ್ಟುಕತ್ತೀರ ಯಶೋಧ ಪ್ರಕಾಶ್ ತಿಳಿಸಿದ್ದಾರೆ.