ಪುರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕ ಡಾ.ಮಂತರ್ ಗೌಡ ಮಾತನಾಡಿದರು. ವಿ.ಪಿ.ಶಶಿಧರ್, ನಿತೀನ್ ಚಕ್ಕಿ, ಪ್ರಮೋದ್ ಮುತ್ತಪ್ಪ ಇತರರಿದ್ದರು. 
ಕೊಡಗು

ಗೃಹ, ವಾಣಿಜ್ಯ ಕಟ್ಟಡಗಳಿಗೆ ಒಳಚರಂಡಿ ಸಂಪರ್ಕಕ್ಕೆ ತೀರ್ಮಾನ

ಪ್ರಮುಖ ಮುಖ್ಯಾಂಶಗಳು

  • ಗೃಹ, ವಾಣಿಜ್ಯ ಕಟ್ಟಡಗಳಿಗೆ ಒಳಚರಂಡಿ ಸಂಪರ್ಕಕ್ಕೆ ತೀರ್ಮಾನ
ಕುಶಾಲನಗರ: ಪಟ್ಟಣದ ೬,೫೦೦ ಗೃಹ ಮತ್ತು ವಾಣಿಜ್ಯ ಕಟ್ಟಡಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸಲು ತೀರ್ಮಾನಿಸಲಾಗಿದ್ದು, ಗೃಹ ಮತ್ತು ವಾಣಿಜ್ಯ ಬಳಕೆಗೆ ಪ್ರತ್ಯೇಕ ಸಂಪರ್ಕ ಶುಲ್ಕ ನಿಗದಿಪಡಿಸಲಾಗಿದೆ.
ಪುರಸಭೆ ಸಭಾಂಗಣದಲ್ಲಿ ಶಾಸಕ ಡಾ.ಮಂತರ್ ಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಪಟ್ಟಣದ ೬,೫೦೦ ಕಟ್ಟಡಗಳಲ್ಲಿ ಸುಮಾರು ೧,೮೦೦ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಗೃಹ ಬಳಕೆದಾರರಿದ್ದು, ಇವರಿಗೆ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಆರ್ಥಿಕವಾಗಿ ದುರ್ಬಲ ಗೃಹ ಬಳಕೆದಾರರಿಗೆ ಉಚಿತವಾಗಿ ಸಂಪರ್ಕ ನೀಡಲಾಗುವುದು. ಉಳಿದವರು ನಿಗದಿತ ಶುಲ್ಕ ಪಾವತಿಸಿ ಪುರಸಭೆಯಿಂದ ನಿರಾಕ್ಷೇಪಣಾ ಪತ್ರ ಪಡೆದು ಸಂಪರ್ಕ ಪಡೆಯಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಶಾಸಕ ಮಂತರ್ ಗೌಡ ಮಾತನಾಡಿ, ೨೦೧೨ರಲ್ಲಿ ಆರಂಭಗೊಂಡ ಒಳಚರಂಡಿ ಯೋಜನೆ ಕುಂಟುತ್ತಾ ಸಾಗಿ ಇದೀಗ ಬಹುತೇಕ ಪೂರ್ಣಗೊಂಡಿದೆ. ಎಲ್ಲ ಕಟ್ಟಡಗಳಿಗೆ ಸಂಪರ್ಕ ಕಲ್ಪಿಸಿ ಯೋಜನೆಗೆ ಚಾಲನೆ ನೀಡಬೇಕಿದೆ. ಬಳಕೆದಾರರು ಸಂಪರ್ಕ ಶುಲ್ಕ ಮಾತ್ರ ಪಾವತಿಸಿದರೆ ಸಾಕು, ವಾರ್ಷಿಕ ನಿರ್ವಹಣಾ ಶುಲ್ಕಕ್ಕೆ ಒಂದು ವರ್ಷ ವಿನಾಯಿತಿ ನೀಡಲಾಗುವುದು. ನಂತರ ನಿರ್ವಹಣಾ ಶುಲ್ಕ ಪಾವತಿಸಬೇಕು. ಎಸ್ಸಿ, ಎಸ್ಟಿ ಬಿಪಿಎಲ್ ಕುಟುಂಬಗಳ ವಾಣಿಜ್ಯ ಬಳಕೆಗೆ ಉಚಿತವಿಲ್ಲ, ಎಲ್ಲರಂತೆ ಶುಲ್ಕ ಪಾವತಿಸಬೇಕು ಎಂದರು.
ಮನೆ ಮನೆ ಭೇಟಿ ನೀಡಿ ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸಲು ಮತ್ತು ಹಳೆಯ ೧೬ ವಾರ್ಡ್‌ಗಳಲ್ಲಿ ಜನಸಂಪರ್ಕ ಸಭೆ ನಡೆಸಲು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಶಾಸಕರ ಸಲಹೆ ಮೇರೆಗೆ ಗ್ರೇಡ್ ೧,೨,೩,೪ ಎಂದು ವಿಂಗಡಿಸಿ ಶುಲ್ಕ ನಿಗದಿಪಡಿಸಲಾಗಿದೆ. ಕಲ್ಯಾಣ ಮಂಟಪ, ಹೋಟೆಲ್, ೧೦ ಕೊಠಡಿ ಮೇಲ್ಪಟ್ಟ ವಸತಿಗೃಹಗಳಿಗೆ ೧೦ ಸಾವಿರ ರೂ., ೧೦ ಕೊಠಡಿ ಒಳಗಿನ ಹೋಟೆಲ್ ಮತ್ತು ವಸತಿಗೃಹಕ್ಕೆ ೫ ಸಾವಿರ ರೂ., ಇತರೆ ಸಣ್ಣ ಉದ್ದಿಮೆಗಳಿಗೆ ೩ ಸಾವಿರ ರೂ., ಗೃಹ ಬಳಕೆಗೆ ೩ ಸಾವಿರ ಮತ್ತು ೨ ಸಾವಿರ ರೂ. ಸಂಪರ್ಕ ಶುಲ್ಕ ನಿಗದಿಪಡಿಸಲಾಗಿದೆ ಎಂದರು.
ಮೈಸೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಎಂಜಿನಿಯರ್ ಜಯಕುಮಾರ್ ಮಾತನಾಡಿ, ೨೦೧೨ರಲ್ಲಿ ರೂ.೪೦ ಕೋಟಿ ಮಂಜೂರಾಗಿದ್ದ ಯೋಜನೆ ೨೦೧೯ರಲ್ಲಿ ಪರಿಷ್ಕರಣೆಯಾಗಿ ರೂ.೭೧ ಕೋಟಿಗೆ ಏರಿಕೆಯಾಗಿದೆ. ಇದುವರೆಗೆ ರೂ.೫೦ ಕೋಟಿ ಪಾವತಿಯಾಗಿದ್ದು, ರೂ.೨೧ ಕೋಟಿ ಬಾಕಿ ಇದೆ. ವಾರ್ಷಿಕ ನಿರ್ವಹಣೆಗೆ ರೂ.೩.೫ ಕೋಟಿ ಮತ್ತು ವಿದ್ಯುತ್‌ಗೆ ರೂ.೧.೫ ಕೋಟಿ ವೆಚ್ಚವಾಗಲಿದೆ ಎಂದರು.
ಮಡಿಕೇರಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಸನ್ನ ಕುಮಾರ್ ಮಾತನಾಡಿ, ಹಿಂದಿನ ಪಟ್ಟಣ ಪಂಚಾಯಿತಿ ವ್ಯಾಪ್ತಿ, ಮುಳ್ಳುಸೋಗೆ ಮತ್ತು ಭಾಗಶಃ ಗುಮ್ಮನಕೊಲ್ಲಿ ಗ್ರಾಮಗಳಲ್ಲಿ ೭೬ ಕಿ.ಮೀ ಒಳಚರಂಡಿ ಜಾಲ, ೨ ವೆಟ್‌ವೆಲ್, ಪಂಪಿಂಗ್ ಮೆಷಿನ್, ೪.೫ ಲಕ್ಷ ಲೀಟರ್ ಸಾಮರ್ಥ್ಯದ ಶುದ್ಧೀಕರಣ ಘಟಕ, ೭ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡಿದೆ ಎಂದರು.
ಸಭೆಯಲ್ಲಿ ವೆಂಕಟೇಶ್ವರ ಥಿಯೇಟರ್ ಪ್ರದೇಶ ಮತ್ತು ಕಾವೇರಿ ಬಡಾವಣೆಯ ಶಿಥಿಲ ವಾಣಿಜ್ಯ ಮಳಿಗೆಗಳ ಬಗ್ಗೆ ಚರ್ಚೆಯಾಯಿತು. ಅಮೃತ್-೨ ಯೋಜನೆಯ ಕೂಡಿಗೆ ಬಳಿಯ ೪ ಮೀಟರ್ ಸಮಸ್ಯೆ ಬಗ್ಗೆಯೂ ಎಂಜಿನಿಯರ್ ಸಂತೋಷ್ ಗಮನ ಸೆಳೆದರು. ಜಾಗದ ಮಾಲೀಕರ ಮನವೊಲಿಸಿ ಪರ್ಯಾಯ ರಸ್ತೆ ನಿರ್ಮಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದರು.
ಸಭೆಯಲ್ಲಿ ಪುರಸಭೆ ಆಡಳಿತಾಧಿಕಾರಿ ನಿತೀನ್ ಚಕ್ಕಿ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್, ಡಿಸಿ ಕಚೇರಿ ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸ್, ಆರೋಗ್ಯ ನಿರೀಕ್ಷಕ ಉದಯಕುಮಾರ್, ಎಂಜಿನಿಯರ್ ಹರ್ಬಾಜ್, ಕಂದಾಯ ಅಧಿಕಾರಿ ರಾಮು, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೆ.ಎಸ್.ನಾಗೇಶ್, ಸದಸ್ಯರಾದ ರವೀಂದ್ರ ರೈ, ಪಿ.ಪಿ.ಸತ್ಯನಾರಾಯಣ, ಪಿ.ಎಂ.ಮೋಹನ್, ಎಂ.ಡಿ.ರಂಗಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.