ಯುಗಾದಿ ಹಬ್ಬದ ಅಂಗವಾಗಿ ಹೊನ್ನಾರು ಉತ್ಸವದಲ್ಲಿ ಪಾಲ್ಗೊಳ್ಳಲು ಜಾನುವಾರುಗಳೊಂದಿಗೆ ಊರಿನ ದೇವಾಲಯ ಬಳಿ ಸೇರಿರುವ ರೈತರು (ಸಂಗ್ರಹ ಚಿತ್ರ)
ಉತ್ತರ ಕೊಡಗಿನ ಗಡಿ ಗ್ರಾಮಗಳಲ್ಲಿ ಯುಗಾದಿ ಸಂಭ್ರಮ ಮನೆ ಮಾಡಿದೆ. ಕಳೆದ 2 ದಿನಗಳಿಂದ ಬರುತ್ತಿರುವ ಮಳೆಯಿಂದಾಗಿ ಭೂಮಿ ಹದವಾಗಿದ್ದು ಹೊನ್ನಾರು ಉತ್ಸವ ಆಚರಿಸಲು ರೈತರ ಉತ್ಸಾಹ ಹೆಚ್ಚುವಂತೆ ಆಗಿದೆ. ಈ ಬೆನ್ನಲ್ಲೇ ಹೊನ್ನಾರು ಹೆಸರಿನಲ್ಲಿ ಬೇಸಾಯದ ಕೆಲಸ ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಗುರುವಾರ (ಮಾ.19) ಚಂದ್ರಮಾನ ಯುಗಾದಿಯಂದು ಹೊಸ ವರುಷದ ಪ್ರಯುಕ್ತ ಆಚರಿಸುವ ಜನಪದ ಸಂಸ್ಕೃತಿಯ ಪ್ರತೀಕವಾದ ಹೊನ್ನಾರು ಉತ್ಸವು ರೈತರ ಪಾಲಿಗೆ ಸಡಗರ ಸಂಭ್ರಮದ ದಿನವಾಗಿದೆ. ಉತ್ತರ ಕೊಡಗಿನ ಕುಶಾಲನಗ ತಾಲೂಕಿನ ಹಾಸನ ಮತ್ತು ಮೈಸೂರು ಜಿಲ್ಲೆಗಳ ಗಡಿಪ್ರದೇಶದ ಬಯಲುಸೀಮೆ ಪ್ರದೇಶಗಳಾದ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ಹೆಬ್ಬಾಲೆ, ಶಿರಂಗಾಲ, ತೊರೆನೂರು, ಹುಲುಸೆ, ಕೂಡಿಗೆ, ಭುವನಗಿರಿ, ಸೀಗೆಹೊಸೂರು, ನಲ್ಲೂರು, ಮಣಜೂರು ಮತ್ತಿತರ ಹಳ್ಳಿಗಳಲ್ಲಿ ರೈತರು ತಮ್ಮ ಪೂರ್ವಿಕರ ಕಾಲದಿಂದಲೂ ಯುಗಾದಿ ಹಬ್ಬದಂದು ಹೊನ್ನಾರು ಉಳುಮೆ ಆಚರಿಸಿಕೊಂಡು ಬರುತ್ತಿದ್ದಾರೆ. ಕೊಡಗಿನ ಉಳಿದ ಭಾಗಗಳಲ್ಲಿ ಈ ಆಚರಣೆ ಇಲ್ಲ.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ರೈತರು ತಮ್ಮ ಮನೆಗಳು ಹಾಗೂ ಇಡೀ ಹಳ್ಳಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ರಂಗೋಲಿಯ ಚಿತ್ತಾರ ಬಿಡಿಸಿ ಅಲಂಕಾರಗೊಳಿಸುತ್ತಾರೆ. ಬೆಳಗಿನ ಜಾವ ತಮ್ಮ ಎತ್ತು ಹಾಗೂ ದನಕರುಗಳನ್ನು ನದಿಗೆ ಕರೆದೊಯ್ದು, ಸ್ನಾನ ಮಾಡಿಸಿ ಅವುಗಳಿಗೆ ಗವುಸು ಹಾಗೂ ವಸ್ತ್ರಾಲಂಕಾರದಿAದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಮನೆ ಮಂದಿಯಲ್ಲಾ ಹೊಸ ಉಡುಗೆ ತೊಡುಗೆ ತೊಟ್ಟು ಜಾನುವಾರು ಮತ್ತು ಕೃಷಿಪರಿಕರಗಳಿಗೆ ಪೂಜೆ ಸಲ್ಲಿಸುತ್ತಾರೆ.
ಮನೆಯಲ್ಲಿ ಹಬ್ಬದ ಅಂಗವಾಗಿ ತಯಾರಿಸಿದ ಒಬ್ಬಟ್ಟು, ಪಾಯಸ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ಜಾನುವಾರುಗಳಿಗೂ ತಿನ್ನಿಸಿ ಸಂತಸ ಪಡುತ್ತಾರೆ.ಬಳಿಕ ಅತಿಥಿಗಳು ಹಾಗೂ ಮನೆಮಂದಿಯಲ್ಲ ಒಟ್ಟಾಗಿ ಭಕ್ಷ್ಯ-ಬೋಜನ ಸವಿಯುತ್ತಾರೆ. ಬೇವು-ಬೆಲ್ಲ ತಿಂದು ಪರಸ್ಪರ ಹೊಸ ವರ್ಷದ ಶುಭಾಶಯ ವಿನಮಯ ಮಾಡಿಕೊಳ್ಳುತ್ತಾರೆ. ಮಧ್ಯಾಹ್ನದ ನಂತರ ಹೊನ್ನಾರು ಮೆರವಣಿಗೆ ಬಸವೇಶ್ವರ ದೇವಸ್ಥಾನಕ್ಕೆ ಸಾಮೂಹಿಕ ಪೂಜೆ ಸಲ್ಲಿಸುತ್ತಾರೆ. ಅಲ್ಲಿಂದ ಮಂಗಳವಾದ್ಯಗಳೊAದಿಗೆ ಹೊರಟು ಗ್ರಾಮದಲ್ಲಿ ಸಂಚರಿಸಿ ಉಳುಮೆ ಆರಂಭಿಸುತ್ತಾರೆ. ಬಿಸಿಲ ಧಗೆಯಿಂದ ಕಂಗೆಟ್ಟಿರುವ ರೈತರು, ಜಾನುವಾರುಗಳನ್ನು ರಕ್ಷಣೆ ಮಾಡೋ ವರುಣ ದೇವ ಎಂದು ಪ್ರಾರ್ಥನೆ ಸಲ್ಲಿಸಿ ಈ ವರ್ಷ ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಕೃತಿಯನ್ನು ಪೂಜೆಸುವುದು ಈ ಭಾಗದ ಆಚರಣೆಯ ವೈಶಿಷ್ಟö್ಯವಾಗಿದೆ.