ಗಲ್ಲಾ ಪೆಟ್ಟಿಗೆಯಲ್ಲಿದ್ದ ಹಣ ಕಳವು  
ಕೊಡಗು

ಗಲ್ಲಾ ಪೆಟ್ಟಿಗೆಯಲ್ಲಿ ಹಣ ಕದ್ದ ಇಬ್ಬರ ಸೆರೆ

ಮಾದೇಶ್ ತಿ.ನರಸೀಪುರ

ಪ್ರಮುಖ ಮುಖ್ಯಾಂಶಗಳು

  • ಹಾಡಹಗಲೇ ಪ್ಲೈವುಡ್ ಅಂಗಡಿಯಲ್ಲಿ ಕಳ್ಳತನ ಪ್ರಕರಣ
ಸಿದ್ದಾಪುರ: ಮಡಿಕೇರಿ ರಸ್ತೆಯಲ್ಲಿರುವ ಪ್ಲೈವುಡ್ ಅಂಗಡಿಯಲ್ಲಿ ಹಾಡಹಗಲೇ ಕಳ್ಳತನ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
ಹಾಸನದ ಮಹಮ್ಮದ್ ಇಕ್ಬಾಲ್(57) ಹಾಗೂ ಶಾಹಿದ್ ಅಹ್ಮದ್ ಪಾಷಾ(50) ಬಂಧಿತರು. ಆರೋಪಿಗಳಿಂದ ಸ್ಕೂಟರ್ ವಶಕ್ಕೆ ಪಡೆಯಲಾಗಿದೆ.
ಮೇ 25ರಂದು ಬೆಳಗ್ಗೆ 11ಗಂಟೆ ಸುಮಾರಿಗೆ ಈ ಇಬ್ಬರು ಪ್ಲೈವುಡ್ ಹಾಗೂ ಮರದ ಬೀಡಿಂಗ್ ಖರೀದಿಸುವ ನೆಪದಲ್ಲಿ ಅಂಗಡಿಗೆ ಪ್ರವೇಶಿಸಿದ್ದರು. ಈ ವೇಳೆ ಒಬ್ಬ ವ್ಯವಸ್ಥಾಪಕ ಅಜೀಜ್ ಅವರೊಂದಿಗೆ ಅಂಗಡಿಯೊಳಗೆ ತೆರಳಿದ್ದರೆ, ಮತ್ತೊಬ್ಬ ಗಲ್ಲಾ ಪೆಟ್ಟಿಗೆಯ ಕೀಯನ್ನು ಎಗರಿಸಿ, ಪೆಟ್ಟಿಗೆಯಲ್ಲಿದ್ದ ಸುಮಾರು 50 ಸಾವಿರ ರೂ. ಕಳ್ಳತನ ಮಾಡಿ ಸ್ಕೂಟಿಯಲ್ಲಿ ಪರಾರಿಯಾಗಿದ್ದ.
ಪ್ರಕರಣ ಬೆಳಕಿಗೆ ಬಂದ ಬಳಿಕ ಸಿದ್ದಾಪುರ ಪೊಲೀಸ್ ಠಾಣೆಗೆ ಅಜೀಜ್ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಅಕ್ಕಪಕ್ಕದ ಅಂಗಡಿಗಳ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಆರೋಪಿಗಳ ಸುಳಿವು ಪತ್ತೆಹಚ್ಚಿ ಹಾಸನಕ್ಕೆ ತೆರಳಿದ್ದರು.
ನಾಲ್ಕು ದಿನಗಳ ಕಾಲ ಹಾಸನದಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಹಾಗೂ ಮಡಿಕೇರಿ ಉಪವಿಭಾಗದ ಡಿವೈಎಸ್ಪಿ ಸೂರಜ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿದ್ದಾಪುರ ಪೊಲೀಸ್ ಠಾಣೆ ಸಹಾಯಕ ಠಾಣಾಧಿಕಾರಿ ಮಂಜುನಾಥ್ ಹಾಗೂ ಅಪರಾಧ ಪತ್ತೆದಳದ ಸಿಬ್ಬಂದಿ ರಾಜೇಶ್, ಪ್ರಕಾಶ್ ಮತ್ತು ಮಣಿಕಂಠ ಇದ್ದರು.