ಸೋಮವಾರಪೇಟೆ ಸಮೀಪದ ಕರ್ಕಳ್ಳಿ ಗ್ರಾಮದ ರಸ್ತೆಯಲ್ಲಿ ಗಾಂಜಾ ಸಹಿತ ಅರೋಪಿಗಳನ್ನು ಬಂಧಿಸಿರುವುದು. 
ಕೊಡಗು

ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಸೆರೆ

ಮಾದೇಶ್ ತಿ.ನರಸೀಪುರ
ಸೋಮವಾರಪೇಟೆ: ಹೊರಜಿಲ್ಲೆಯಿಂದ ಗಾಂಜಾವನ್ನು ತರಿಸಿ ಪಟ್ಟಣ ವ್ಯಾಪ್ತಿಯಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಅಬಕಾರಿ ಇಲಾಖೆ ಪೊಲೀಸರು ಬಂಧಿಸಿದ್ದಾರೆ.
ನಗರದ ಕರ್ಕಳ್ಳಿ ಬಾಣೆ ನಿವಾಸಿ ಎಸ್.ಡಿ.ಯಶವಂತ ಹಾಗೂ ಎಸ್.ಡಿ.ಚೇತನ್ ಬಂಧಿತರು.
ಗಾಂಜಾ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಆಧರಿಸಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ದಾಳಿ ವೇಳೆ ಆರೋಪಿಗಳು ಸ್ವತಃ ಗಾಂಜಾ ಸೇವನೆ ಮಾಡುತ್ತಿರುವುದೂ ಬೆಳಕಿಗೆ ಬಂದಿದೆ. ಅಧಿಕಾರಿಗಳು ಅವರ ಬಳಿಯಿಂದ 339 ಗ್ರಾಂ ಗಾಂಜಾ ಹಾಗೂ ಮಾರಾಟಕ್ಕೆ ಬಳಸಲಾಗುತ್ತಿದ್ದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆಯನ್ನು ಅಬಕಾರಿ ಇಲಾಖೆ ಮುಂದುವರಿಸಿದೆ. ಈ ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ಕೆ.ಬಿ.ರಾಜೇಂದ್ರ, ಸಿಬ್ಬಂದಿ ಎಚ್.ಎ. ರಾಜು ಹಾಗೂ ವಾಹನ ಚಾಲಕ ಮಧುಸೂದನ್ ಭಾಗವಹಿಸಿದ್ದರು.