ಮಕ್ಕಳ ಉಚಿತ ಬೇಸಿಗೆ ಕ್ರೀಡಾ ತರಬೇತಿ ಶಿಬಿರದ ಅಂಗವಾಗಿ ನಡೆದ ಚಾರಣದಲ್ಲಿ ಮಕ್ಕಳೊಂದಿಗೆ ಶಾಂ ಪೂಣಚ್ಚ, ಕೋಟೇರ ನಾಣಯ್ಯ, ಕುಡೆಕಲ್ ಸಂತೋಷ್ ಇತರರಿದ್ದರು.
- ನಿಶಾನಿ ಬೆಟ್ಟದ ಮೇಲೇರಿ ಸಂಭ್ರಮಿಸಿದ ಚಿಣ್ಣರು
ಮಡಿಕೇರಿ: ವಾಂಡರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಸ್ವಾಮಿ ಸ್ಮರಣಾರ್ಥ ನಡೆಯುತ್ತಿರುವ ಮಕ್ಕಳ ಉಚಿತ ಬೇಸಿಗೆ ಕ್ರೀಡಾ ತರಬೇತಿ ಶಿಬಿರದ ಅಂಗವಾಗಿ ಮಕ್ಕಳಿಗೆ ನಿಶಾನಿ ಮೊಟ್ಟೆಗೆ ಇತ್ತೀಚೆಗೆ ಚಾರಣ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಕ್ರೀಡಾಂಗಣದಿಂದ ೧೧೫ ವಿದ್ಯಾರ್ಥಿ ಮತ್ತು ಕ್ಲಬ್‌ನ ಪ್ರಮುಖರನ್ನು ಹೊತ್ತುಕೊಂಡು ಹೊರಟ ಕೊಡಗು ವಿದ್ಯಾಲಯದ ಎರಡು ಬಸ್‌ಗಳು ಮದೆನಾಡು ಬಳಿಯ ಎರಡನೇ ಮೊಣ್ಣಂಗೇರಿಯಲ್ಲಿ ಮಕ್ಕಳನ್ನು ಇಳಿಸಿತು. ಅಲ್ಲಿಂದ ರಸ್ತೆ ಮೂಲಕ ಮೊಣ್ಣಂಗೇರಿ ಶಾಲೆವರೆಗೆ ನಡೆದು ಅಲ್ಲಿ ಕೊಂಚ ವಿಶ್ರಾಂತಿ ಪಡೆದು ಮುಂದಕ್ಕೆ ಸಾಗಿ ಕುಡಿಯ ಹಾರಿದ ಕಲ್ಲಿನ ಪ್ರದೇಶದಲ್ಲಿ ಸೇರಿದರು. ಇಲ್ಲಿಗೆ ಮೂರು ಕಿ.ಮೀ. ಕ್ರಮಿಸಿಯಾಗಿತ್ತು. ಲಘು ಪಾನೀಯ, ತಿನಿಸುಗಳಾದ ಬಳಿಕ ಯೋಗ ಗುರು ಕೆ.ಕೆ. ಮಹೇಶ್ ಕುಮಾರ್ ಕುಡಿಯ ಹಾರಿದ ಕಲ್ಲಿನ ವಿಶೇಷತೆ ಬಗ್ಗೆ ಮಕ್ಕಳಿಗೆ ವಿವರಿಸಿ ಮಾಹಿತಿ ನೀಡಿದರು.
ಚಾರಣದಲ್ಲಿ ಮಕ್ಕಳೊಂದಿಗೆ ಪೋಷಕರು, ತರಬೇತುದಾರರೂ ಭಾಗವಹಿಸಿದ್ದರು. ಅದರಲ್ಲೂ ೭೦ವರ್ಷ ದಾಟಿದ ವಾಂಡರ್ಸ್ ಕ್ಲಬ್ ಅಧ್ಯಕ್ಷ ಕೋಟೇರ ಮುದ್ದಯ್ಯ ಹಾಗೂ ಸಂಚಾಲಕ ಬಾಬು ಸೋಮಯ್ಯ ಅವರುಗಳು ಕೂಡ ತಾವೂ ಯಾರಿಗೂ ಕಡಿಮೆ ಇಲ್ಲವೆಂಬಂತೆ, ಮಕ್ಕಳನ್ನು ನಾಚಿಸುವಂತೆ ಬೆಟ್ಟವನ್ನೇರಿ ಇಳಿದು ಅಚ್ಚರಿ ಮೂಡಿಸಿದರು.
ಬೆಟ್ಟದಿಂದ ಇಳಿದ ಬಳಿಕ ಜೋಡುಪಾಲದಲ್ಲಿರುವ ಜಲಪಾತದ ಬಳಿ ನೀರಿಗಿಳಿದ ಮಕ್ಕಳು ನೀರಾಟವಾಡಿ ಸಂಭ್ರಮಿಸಿದರು. ಸ್ಥಳೀಯರಾದ ವೆಂಕಪ್ಪ ಅವರು ಮಾರ್ಗದರ್ಶಕರಾಗಿ ಮಕ್ಕಳನ್ನು ಮುನ್ನಡೆಸಿದರೆ, ವಾಂಡರ್ಸ್ ತರಬೇತುದಾರರುಗಳಾದ ಬೊಪ್ಪಂಡ ಶಾಂ ಪೂಣಚ್ಚ, ಕೋಟೇರ ನಾಣಯ್ಯ, ಕುಡೆಕಲ್ ಸಂತೋಷ್, ಲೋಕೇಶ್ ನಾಯ್ಡು, ಪೋಷಕರಾದ ಜನಾರ್ದನ್ ಇತರರು ಮಕ್ಕಳ ಬಗ್ಗೆ ಕಾಳಜಿ ವಹಿಸಿದ್ದರು.