ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಬಹುತೇಕ ಕಡೆ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗಿದ್ದು, ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿದೆ. ಪ್ರಸಕ್ತ ವರ್ಷ ಮುಂಗಾರು, ಹಿಂಗಾರು ಕೈಕೊಟ್ಟಿರುವ ಪರಿಣಾಮ ಕೃಷಿಕರು ಬರಗಾಲದ ಭೀತಿಯಲ್ಲಿದ್ದಾರೆ. ಈಗಾಗಲೇ ಮಳೆಯ ಕೊರತೆಯಿಂದ ಕಾಫಿ ತೋಟಗಳಲ್ಲಿ ಗಿಡಗಳು, ಕಾಳುಮೆಣಸು ಬಳ್ಳಿಗಳು ಒಣಗಲು ಪ್ರಾರಂಭಿಸಿವೆ. ಮಳೆಯಿಲ್ಲದೆ ಕಾಫಿ ತೋಟದ ನಿರ್ವಹಣಾ ಕೆಲಸಗಳಲ್ಲೂ ವಿಳಂಬವಾಗಿದೆ. ತೇವಾಂಶದ ಕೊರತೆಯಿಂದ ಕಾಫಿ ಗಿಡಗಳಿಗೆ ರಾಸಾಯನಿಕ ಗೊಬ್ಬರವನ್ನೂ ಹಾಕಲು ಸಾಧ್ಯವಾಗಿರಲಿಲ್ಲ. ಕಳೆದ ಎರಡು ದಿನದಿಂದ ಸುರಿದ ಮಳೆಯಿಂದ ಕಾಫಿ ತೋಟಗಳಲ್ಲಿ ತೇವಾಂಶ ಇದ್ದು, ಗೊಬ್ಬರು ಹಾಕುವ ಪ್ರಕ್ರಿಯೆ ಪ್ರಾರಂಭವಾಗಿದೆ.
ಹೆಚ್ಚಾಗಿ ಅರೇಬಿಕಾ ಕಾಫಿ ಬೆಳೆಯುವ ಶನಿವಾರಸಂತೆ, ಸೋಮವಾರಪೇಟೆ ಕಸಬಾ, ಕೊಡ್ಲಿಪೇಟೆ, ಶಾಂತಳ್ಳಿ ಹೋಬಳಿಗಳ ಬಹುತೇಕ ಕಡೆ ಹದಮಳೆ ಸುರಿದಿರುವುದು ಬೆಳೆಗಾರರಲ್ಲಿ ಹರ್ಷ ಮೂಡಿಸಿದೆ. ರೋಬಸ್ಟಾ ಕಾಫಿ ಬೆಳೆಯುವ ಸುಂಠಿಕೊಪ್ಪ ಹೋಬಳಿಯಲ್ಲೂ ವರುಣ ಕೃಪೆ ತೋರಿದ್ದರಿಂದ ಬೆಳೆಗಾರರು ಸಂತೃಪ್ತಿಗೊಂಡಿದ್ದಾರೆ.
ಮಳೆ, ಗಾಳಿ ಪರಿಣಾಮ ಸೋಮವಾರಪೇಟೆ, ಬಾಣವಾರ ಮುಖ್ಯ ರಸ್ತೆಯ ಗೋಣಿಮರೂರು ಗ್ರಾಮದ ಬಳಿ ಶನಿವಾರ ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಅರಣ್ಯ ಇಲಾಖೆ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.