ಮತಗಟ್ಟೆ ಏಜೆಂಟರುಗಳಿಗೆ ಎಸ್‌ಐಆರ್ ಕುರಿತು ನಡೆದ ತರಬೇತಿ ಕಾರ್ಯಾಗಾರದಲ್ಲಿ ಆರ್.ಶ್ರೀಧರ್ ಮಾತನಾಡಿದರು. ಎಸ್.ಡಿ.ಪ್ರಶಾಂತ್ ಇದ್ದರು.
- ಮತದಾರರ ಪಟ್ಟಿ ದೋಷ ಮುಕ್ತಗೊಳಿಸಿ
- ತರಬೇತಿ ಕಾರ್ಯಾಗಾರದಲ್ಲಿ ತಹಶೀಲ್ದಾರ್ ಶ್ರೀಧರ
ಮಡಿಕೇರಿ: ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರು ಹೊರಗುಳಿಯದಂತೆ ಮತ್ತು ಹೊಸ ಮತದಾರರನ್ನು ಸೇರಿಸುವ ನಿಟ್ಟಿನಲ್ಲಿ ಬೂತ್ ಮಟ್ಟದ ಅಧಿಕಾರಿಗಳ ಸಹಕಾರ ಮುಖ್ಯ. ಆದ್ದರಿಂದ ಬೂತ್‌ಮಟ್ಟದ ಏಜೆಂಟರು ಮತ್ತು ಬೂತ್ ಮಟ್ಟದ ಅಧಿಕಾರಿಗಳು ಸಮನ್ವಯ ಸಾಧಿಸಿಕೊಂಡು ಕಾರ್ಯನಿರ್ವಹಿಸುವಂತೆ ಮಡಿಕೇರಿ ತಾಲೂಕು ತಹಶೀಲ್ದಾರ್ ಆರ್.ಶ್ರೀಧರ್ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಮತಗಟ್ಟೆ ಏಜೆಂಟರುಗಳಿಗೆ ಎಸ್‌ಐಆರ್ ಕುರಿತು ನಡೆದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಏಜೆಂಟರು ಎಸ್‌ಐಆರ್ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ತಿಳಿದುಕೊಂಡು, ಪಾರದರ್ಶಕವಾಗಿ ಮತದಾರರ ಪಟ್ಟಿ ಸಿದ್ಧಗೊಳ್ಳಲು ಸಹಕರಿಸಬೇಕು. ಮತದಾರರಿಗೆ ಯಾವುದೇ ತೊಂದರೆಯಾಗದಂತೆ ಗಮನಹರಿಸಬೇಕು. ಕೈಬಿಟ್ಟ ಹೆಸರುಗಳನ್ನು ಮತ್ತೆ ಸೇರಿಸಲು ನಮೂನೆ ಭರ್ತಿ ಮಾಡಲು ಸಹಾಯ ಮಾಡಬೇಕು, ಮತಗಟ್ಟೆ ಹಂತದಲ್ಲಿನ ದೋಷಗಳನ್ನು ಗುರುತಿಸಿ, ಚುನಾವಣಾ ಅಧಿಕಾರಿಗಳಿಗೆ ಸರಿಯಾದ ಸಮಯದಲ್ಲಿ ಮಾಹಿತಿ ನೀಡಬೇಕು ಎಂದು ಆರ್.ಶ್ರೀಧರ್ ಅವರು ತಿಳಿಸಿದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು, ಮತದಾರರ ಮಾಹಿತಿ ನವೀಕರಣ, ಹೊಸ ಮತದಾರರ ನೋಂದಣಿ, ಮೃತ ಹಾಗೂ ಸ್ಥಳಾಂತರಗೊಂಡ ಮತದಾರರ ಹೆಸರುಗಳ ತಿದ್ದುಪಡಿ ಮತ್ತಿತರ ಸೇರಿದಂತೆ ವಿವಿಧ ವಿಷಯಗಳ ಕುರಿತು ಕಾರ್ಯಾಗಾರದಲ್ಲಿ ವಿವರವಾದ ತರಬೇತಿ ನೀಡಲಾಯಿತು.
ತರಬೇತುದಾರರಾದ ಎಸ್.ಡಿ.ಪ್ರಶಾಂತ್ ಮಾತನಾಡಿ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಭಾರತೀಯ ಚುನಾವಣಾ ಆಯೋಗದ ವತಿಯಿಂದ ನಡೆಯುವ ಮಹತ್ವದ ಕಾರ್ಯವಾಗಿದೆ. ಮತಗಟ್ಟೆ ಮಟ್ಟದ ಏಜೆಂಟರುಗಳು ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸಲು, ತಪ್ಪುಗಳನ್ನು ತಿದ್ದಲು ಮತ್ತು ಅರ್ಹರಲ್ಲದ ಮತದಾರರನ್ನು ತೆಗೆದುಹಾಕುವ ಕಾರ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಹೇಳಿದರು.
ಮತದಾರರಾಗಲು ಭಾರತದ ಪ್ರಜೆಯಾಗಿರಬೇಕು. ಅರ್ಹತಾ ದಿನಾಂಕಗಳಲ್ಲಿ ೧೮ ವರ್ಷಕ್ಕಿಂತ ಕಡಿಮೆಯಾಗಿರಬಾರದು. ಆ ಮತಗಟ್ಟೆಯ ಸಾಮಾನ್ಯ ನಿವಾಸಿಯಾಗಿರಬೇಕು ಎಂದರು.
ಅಧಿಕಾರಿಗಳು ನಿರ್ದಿಷ್ಟ ಅವಧಿಯಲ್ಲಿ ಪ್ರತಿ ಮನೆಗೆ ಭೇಟಿ ನೀಡಿ, ಮತದಾರರ ಪಟ್ಟಿಯಲ್ಲಿರುವ ಹೆಸರುಗಳನ್ನು ಪರಿಶೀಲಿಸಬೇಕು. ೧೮ ವರ್ಷ ತುಂಬಿದ ಯುವಕ-ಯುವತಿಯರು ಮತ್ತು ಹೊಸದಾಗಿ ಸ್ಥಳಾಂತರಗೊಂಡ ಅರ್ಹ ನಾಗರಿಕರಿಂದ ಫಾರ್ಮ್-೬ ಅನ್ನು ಭರ್ತಿ ಮಾಡಿಸಿ ನೋಂದಾಯಿಸಿಕೊಳ್ಳಬೇಕು. ಮೃತಪಟ್ಟವರು, ಬೇರೆಡೆ ಸ್ಥಳಾಂತರಗೊಂಡವರು ಅಥವಾ ನಕಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ಫಾರ್ಮ್-೭ ಅನ್ನು ಸ್ವೀಕರಿಸಬೇಕು. ಹೆಸರು, ವಿಳಾಸ, ವಯಸ್ಸು ಅಥವಾ ಭಾವಚಿತ್ರ ತಪ್ಪಾಗಿದ್ದರೆ ಅವುಗಳನ್ನು ಸರಿಪಡಿಸಲು ಹಾಗೂ ಒಂದೇ ವಿಧಾನಸಭಾ ಕ್ಷೇತ್ರದೊಳಗೆ ವಿಳಾಸ ಬದಲಾವಣೆಗೆ ಫಾರ್ಮ್-೮ ಅನ್ನು ಸಂಗ್ರಹಿಸಬೇಕು ಎಂದು ಹೇಳಿದರು.
ಗಣತಿ ಪ್ರಕ್ರಿಯೆಯಲ್ಲಿ ಅಗತ್ಯವಿರುವ ರಿಜಿಸ್ಟರ್‌ಗಳು ಮತ್ತು ಇತರ ಯಾವುದೇ ಅಗತ್ಯ ಲೇಖನ ಸಾಮಗ್ರಿಗಳನ್ನು ಹೊಂದಿರುವ ವಿಶೇಷ ತೀವ್ರ ಪರಿಷ್ಕರಣೆ ಎಂದು ಲೇಬಲ್ ಮಾಡಲಾದ ಕಿಟ್ ಬ್ಯಾಗ್, ಯಾವುದೇ ಸೂಚಿಸಿದ ದಿನಾಂಕದಂದು ಅಸ್ತಿತ್ವದಲ್ಲಿರುವ ಪ್ರತಿಯೊಬ್ಬ ಮತದಾರರಿಗೆ ಅಸ್ತಿತ್ವದಲ್ಲಿರುವ ಮತದಾರರ ಪೂರ್ವ ಮುದ್ರಿತ ವಿವರಗಳೊಂದಿಗೆ ಎಣಿಕೆ ನಮೂನೆಗಳ ಜೆರಾಕ್ಸ್ ಪ್ರತಿಗಳು ನೀಡಬೇಕು. ಎಣಿಕೆಯ ಸಮಯದಲ್ಲಿ ಯಾವುದೇ ಮನೆಗೆ ಬೀಗ ಹಾಕಲಾಗಿದೆ ಅಥವಾ ಮುಚ್ಚಲಾಗಿದೆ ಎಂದು ಬಿಎಲ್‌ಒ ಕಂಡುಕೊಂಡರೆ, ಎಣಿಕೆ ನಮೂನೆಗಳನ್ನು ಮನೆಯಲ್ಲಿ ಅಳವಡಿಸಬೇಕು ಮತ್ತು ಭರ್ತಿ ಮಾಡಿದ ನಮೂನೆಗಳನ್ನು ಸಂಗ್ರಹಿಸಲು ಕನಿಷ್ಟ ಮೂರು ಸಲ ಮನೆಗೆ ಭೇಟಿ ನೀಡಬೇಕು ಎಂದರು.
ಮೊದಲೇ ಭರ್ತಿ ಮಾಡಿದ ಎಣಿಕೆ ನಮೂನೆಯನ್ನು ಡೌನ್ಲೋಡ್ ಮಾಡಬಹುದು ಮತ್ತು ಭರ್ತಿ ಮಾಡಿದ ನಮೂನೆಗಳು ಮತ್ತು ದಾಖಲೆಗಳನ್ನು ಆನ್‌ಲೈನ್ ಮೋಡ್ ಮೂಲಕ ಅಪ್ಲೋಡ್ ಮಾಡಬಹುದು ಎಂದು ಬಿಎಲ್‌ಒ ಮತದಾರರಿಗೆ ತಿಳಿಸಬೇಕು ಎಂದು ಹೇಳಿದರು.
ಬಿಎಲ್‌ಒಗಳು ಅಗತ್ಯ ದಾಖಲೆಗಳೊಂದಿಗೆ ಎಣಿಕೆ ನಮೂನೆಯ ಒಂದು ಪ್ರತಿಯನ್ನು ತನ್ನೊಂದಿಗೆ ಇಟ್ಟುಕೊಳ್ಳಬೇಕು. ಅರ್ಜಿದಾರರು ಇಟ್ಟುಕೊಳ್ಳಬೇಕಾದ ಎಣಿಕೆ ನಮೂನೆಯ ಇನ್ನೊಂದು ಪ್ರತಿಯ ಮೇಲೆ ನಮೂನೆ ಮತ್ತು ದಾಖಲೆಯ ಸ್ವೀಕೃತಿಯನ್ನು ನೀಡಬೇಕು ಎಂದು ವಿವರಿಸಿದರು.
ಕಾರ್ಯಾಗಾರದಲ್ಲಿ ಚುನಾವಣಾ ಶಿರಸ್ತೆದಾರರು ಹಾಗೂ ಸಿಬ್ಬಂದಿಗಳು, ಬೂತ್ ಮಟ್ಟದ ಅಧಿಕಾರಿಗಳು ಮತ್ತು ಏಜೆಂಟರುಗಳು ಇದ್ದರು.