ರೈತರಿಗೆ ಭತ್ತದ ಕೃಷಿಯಲ್ಲಿ ಸುಧಾರಿತ ಬೇಸಾಯ ಕ್ರಮಗಳು ತರಬೇತಿ ಕಾರ್ಯಕ್ರಮದಲ್ಲಿಭತ್ತದ ನಾಟಿ ಬಗ್ಗೆ ಪ್ರಾತ್ಯಕ್ಷಿತೆ ನೀಡಲಾಯಿತು. 
ಕೊಡಗು

ಭತ್ತದ ಕೃಷಿಯಲ್ಲಿ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ತರಬೇತಿ

ಸುನಿಲ್ ಪೊನ್ನೇಟಿ
ಕುಶಾಲನಗರ:
ಕೂಡಿಗೆಯಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ ಜಿಲ್ಲಾ ಮಟ್ಟದ ರೈತರಿಗೆ ಭತ್ತದ ಕೃಷಿಯಲ್ಲಿ ಸುಧಾರಿತ ಬೇಸಾಯ ಕ್ರಮಗಳು ತರಬೇತಿ ಹಾಗೂ ಪ್ರಾತ್ಯಕ್ಷಿತೆ ಕಾರ್ಯಗಾರ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಬುಧವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಿಕೇರಿ ಜಿಲ್ಲಾ ಸಹಾಯಕ ಕೃಷಿ ನಿರ್ದೇಶಕ ಸೋಮಶೇಖರ್ ವಹಿಸಿದ್ದರು. ಸಭೆಯಲ್ಲಿ ಭತ್ತದ ಕೃಷಿಯಲ್ಲಿ ಸುಧಾರಿತ ಬೇಸಾಯ ಕ್ರಮಗಳು ಕುರಿತು ವಿಷಯ ಮಂಡನೆಯನ್ನು ಮಂಡ್ಯದ ವಿ.ಸಿ. ಫಾರಂ ವಲಯ ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಾಪಕ ಡಾ. ಬಸವಲಿಂಗಯ್ಯ ಪ್ರಸ್ತುತಪಡಿಸಿದರು. ಭತ್ತದ ಕೃಷಿಯಲ್ಲಿ ತೊಡಗುವ ಮುನ್ನ ಅನುಸರಿಸಬೇಕಾದ ಕ್ರಮಗಳು ಮತ್ತು ಅಧಿಕ ಬೆಳೆಯನ್ನು ತೆಗೆಯುವ ವಿಧಾನ ಸೇರಿದಂತೆ ಕೃಷಿ ಇಲಾಖೆಯ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು.
ಯಂತ್ರಶ್ರೀ ಕಾರ್ಯಕ್ರಮದ ಕುರಿತು ಜಿಲ್ಲಾ ಎಸ್.ಕೆ.ಡಿ.ಆರ್.ಡಿ.ಪಿ. ನಿರ್ದೇಶಕ ವಿಠ್ಠಲ ಸಾಲಿಯಾನ್ ಮಾಹಿತಿ ನೀಡಿ ನೂತನ ಬೇಸಾಯದ ಯೋಜನೆಯ ಬಗ್ಗೆ ಸಮಗ್ರವಾಗಿ ತಿಳಿಸಿದರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರ ಕೂಡಿಗೆಯ ಕೃಷಿ ಸಹಾಯಕ ನಿರ್ದೇಶಕ ಪಿ. ಶಿವಮೂರ್ತಿ ಇಲಾಖೆ ಯೋಜನೆಗಳ ಸದುಪಯೋಗ ಮತ್ತು ವಿವಿಧ ಸಮಗ್ರ ಕೃಷಿಯಲ್ಲಿ ತೊಡಗುವ ವಿಚಾರದ ಬಗ್ಗೆ ಹಂತ ಹಂತವಾಗಿ ವಿಷಯಗಳನ್ನು ತಿಳಿಸಿದರು.
ತರಬೇತಿಯಲ್ಲಿ ಹಾಜರಿದ್ದ ಪುರುಷ, ಮಹಿಳಾ ರೈತರಿಗೆ ಭತ್ತದ ನಾಟಿಯ ಬಗ್ಗೆ ಕೃಷಿ ಕೇಂದ್ರದ ಗದ್ದೆಯಲ್ಲಿ ಪ್ರಾತ್ಯಕ್ಷಿತೆ ಮೂಲಕ ಮಾಹಿತಿ ನೀಡಲಾಯಿತು.