ಸೋಮವಾರಪೇಟೆಯಲ್ಲಿ ಟ್ರಾಫಿಕ್ ಜಾಮ್
ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ದಿನೇ ದಿನೇ ಹದಗೆಡುತ್ತಿದ್ದು, ಸಂಚಾರಿ ನಿಯಮಗಳು ಕೇವಲ ಕಾಗದದ ಮೇಲೆ ಮಾತ್ರ ಉಳಿದಂತಾಗಿದೆ. ಜನಸಂಖ್ಯೆಗಿಂತ ವಾಹನಗಳ ಸಂಖ್ಯೆಯೇ ಸೋಮವಾರಪೇಟೆಯಲ್ಲಿ ಹೆಚ್ಚಾಗಿರುವ ಕಾರಣ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ವಾರಕ್ಕೊಮ್ಮೆ ಮರೆಯಲ್ಲಿ ನಿಂತು ಹೆಲ್ಮೆಟ್ ಧರಿಸದ ವಾಹನ ಸವಾರರಿಗೆ ದಂಡ ವಿಧಿಸುವುದೇ ಪೊಲೀಸರ ಕಾರ್ಯವಾಗಿಬಿಟ್ಟಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಆದರೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಡೆಯುತ್ತಿರುವ ಸಂಚಾರ ನಿಯಮ ಉಲ್ಲಂಘನೆ, ಅಕ್ರಮ ಪಾರ್ಕಿಂಗ್ ಹಾಗು ವಿರುದ್ದ ದಿಕ್ಕಿನಿಂದ ವಾಹನ ಸಂಚಾರಕ್ಕೆ ಕಡಿವಾಣ ಹಾಕುವಲ್ಲಿ ಪೊಲೀಸರ ವಿಫಲತೆ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಗೃಹರಕ್ಷಕ ದಳದ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸಂಚಾರ ನಿಯಂತ್ರಣದಲ್ಲಿ ಸ್ವಲ್ಪ ಮಟ್ಟಿನ ಶಿಸ್ತು ಕಾಣಿಸಿಕೊಳ್ಳುತ್ತಿತ್ತು. ಆದರೆ ಇದೀಗ ಅವರ ಸೇವೆ ಪಟ್ಟಣದ ರಸ್ತೆಗಳಲ್ಲಿ ಕಡಿಮೆಯಾಗಿರುವುದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ.
ಅಪಘಾತಗಳಿಗೆ ಆಹ್ವಾನ ನೀಡುತ್ತಿರುವ ಜಂಕ್ಷನ್‌ಗಳು
ಸೋಮವಾರಪೇಟೆ ಪಟ್ಟಣದ ಆಲೆಕಟ್ಟೆ ರಸ್ತೆಗೆ ತೆರಳುವ ವಿವೇಕಾನಂದ ವೃತ್ತ, ಕ್ಲಬ್ ರಸ್ತೆ, ಸಿ.ಕೆ.ಸುಬ್ಬಯ್ಯ ರಸ್ತೆ, ಕಕ್ಕೆ ಹೊಳೆ ಜಂಕ್ಷನ್ ಹಾಗೂ ಗಾಂಧಿ ವೃತ್ತದ ಬಳಿ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿವೆ. ಈ ಪ್ರದೇಶಗಳಲ್ಲಿ ವಿರುದ್ಧ ದಿಕ್ಕಿನಿಂದ ವಾಹನಗಳು ನುಗ್ಗುವುದು ಸಾಮಾನ್ಯವಾಗಿದೆ. ರಾತೋರಾತ್ರಿ ಹಾರ್ಡ್ ವೇರ್ ಅಂಗಡಿಗಳ ಮುಂದೆ ಬೃಹತ್ ಲಾರಿಗಳನ್ನು ನಿಲ್ಲಿಸುವುದರಿಂದ ಪಾದಚಾರಿಗಳು ಹಾಗೂ ಇತರೆ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಕೆಲವು ರಸ್ತೆಗಳಲ್ಲಿ ನೋ ಪಾರ್ಕಿಂಗ್ ಫಲಕಗಳನ್ನು ಅಳವಡಿಸಿದ್ದರೂ ಅದರ ಕೆಳಗಡೆಯೇ ವಾಹನಗಳನ್ನು ನಿಲ್ಲಿಸುವುದು ಕಂಡುಬರುತ್ತಿದೆ. ಪಟ್ಟಣದ ಬಡಾವಣೆಗಳಿಗೆ ತೆರಳುವ ಮಾರ್ಗಗಳಲ್ಲಿ ನಾಮಫಲಕಗಳ ಕೊರತೆಯೂ ಸಂಚಾರ ಗೊಂದಲಕ್ಕೆ ಕಾರಣವಾಗಿದೆ.
ಪ್ರಮುಖ ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ
ಪಟ್ಟಣದ ಎಂ.ಜಿ. ರಸ್ತೆ, ಮುಖ್ಯ ರಸ್ತೆ, ತ್ಯಾಗರಾಜ ರಸ್ತೆ ಹಾಗೂ ಮಹದೇಶ್ವರ ಬಡಾವಣೆಗೆ ತೆರಳುವ ರಸ್ತೆಯ ಎರಡೂ ಬದಿಗಳಲ್ಲೂ ವಾಹನ ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ರಸ್ತೆಯ ಅಗಲ ಕಡಿಮೆಯಾಗುತ್ತಿದೆ. ಸಂಚಾರ ದಟ್ಟಣೆ ಮತ್ತು ಅಪಘಾತಗಳ ಸಂಭವ ಹೆಚ್ಚುತ್ತಿದೆ. ಸಂಜೆ ವೇಳೆಗೆ ಖಾಸಗಿ ಬಸ್ ಸಂಚಾರವೂ ಹೆಚ್ಚಾಗಿ, ಅವುಗಳ ನಿಲುಗಡೆಯಿಂದ ಮತ್ತು ಖಾಸಗಿ ವಾಹನಗಳ ಪಾರ್ಕಿಂ ಗ್ ಹೆಚ್ಚಾಗುವ ಕಾರಣ ಇದು ಸಂಚಾರ ಸಿಕ್ಕು ತಾಣವಾಗಿಬಿಡುತ್ತದೆ. ಬಸ್‌ಗಳಿಗೇ ಜಾಗ ಇಲ್ಲದಂತೆ
ಕಾರುಗಳು, ದ್ವಿಚಕ್ರ ವಾಹನಗಳು ನಿಲ್ಲುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೀವ್ರ ಅಡಚಣೆ ಆಗುತ್ತಿದೆ. ಇದು ಹಲವರಿಗೆ ಬೇಸರ ಮೂಡಿಸಿದೆ.
ವರ್ಷದ ಕೊನೆಯಲ್ಲಿ ಮಾತ್ರ ಪೊಲೀಸ್ ಇಲಾಖೆ ಅಪರಾಧ ತಡೆ ಮಾಸಾಚರಣೆ,
ರಸ್ತೆ ಸುರಕ್ಷತಾ ಸಪ್ತಾಹ ಇತ್ಯಾದಿಗಳನ್ನು ನಡೆಸುತ್ತದೆ. ಆದರೆ ಅವುಗಳಿಂದ
ಸಮಸ್ಯೆಗೆ ಯಾವುದೇ ರೀತಿಯ ಶಾಶ್ವತ ಪರಿಹಾರ ದೊರೆಯುವುದಿಲ್ಲ ಎಂದು
ನಾಗರಿಕರು ದೂರಿದ್ದಾರೆ. ಸಂಚಾರ ವ್ಯವಸ್ಥೆ ಮೇಲೆ ದಿನವೂ ನಿರಂತರ ನಿಗಾ, ಜಾಗೃತಿ ಹಾಗೂ ಕಟ್ಟುನಿಟ್ಟಿನ ಕ್ರಮಗಳ ಅಗತ್ಯತೆಯನ್ನು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಸಂಚಾರ ವ್ಯವಸ್ಥೆಯಲ್ಲಿ ಶಿಸ್ತು ಕಾಪಾಡಲು ಪೊಲೀಸ್ ಇಲಾಖೆ, ಪಟ್ಟಣ ಪಂಚಾಯಿತಿ ಹಾಗೂ ಉದ್ಯಮಿಗಳ ಸಹಕಾರ ಮತ್ತು ಸಮನ್ವಯದ ಅಗತ್ಯವಿದೆ. ಎಲ್ಲರ ಪಾಲ್ಗೊಳ್ಳುವಿಕೆ ಯಿಂದ ವ್ಯವಸ್ಥೆ ನಿಯಂತ್ರಣ ಸುಲಭವಾಗಲಿದೆ.
ಪ್ರಮುಖ ಜಂಕ್ಷನ್‌ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ, ಗೃಹರಕ್ಷಕ ದಳದ ಸಿಬ್ಬಂದಿ
ಮರು ನಿಯೋಜನೆ, ವಿಶೇಷ ಪೆಟ್ರೋಲಿಂಗ್ ಹಾಗೂ ಅಕ್ರಮ ಪಾರ್ಕಿಂಗ್ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ.ಇಲ್ಲದಿದ್ದರೆ ಸಂಚಾರ ಸಿಕ್ಕು ಹೀಗೆಯೇ ಮುಂದುವರಿದು, ಅಪಘಾತಗಳ ಸಂಖ್ಯೆ ಮೇಲಿಂದ ಮೇಲೆ ಹೆಚ್ಚಾಗುತ್ತದೆ. ಈ ಬಗ್ಗೆ ಪೊಲೀಸ್ ಇಲಾಖೆ ಮತ್ತು ಪಟ್ಟಣ ಪಂಚಾಯಿತಿ ತುರ್ತು ಗಮನಹರಿಸಬೇಕಿದೆ. ಶಾಸಕರೂ ಸಂಬಂಧಪಟ್ಟ ಇಲಾಖೆಗಳಿಗೆ ಅಗತ್ಯ ಸೂಚನೆ ನೀಡಬೇಕಿದೆ.
ಸೋಮವಾರಪೇಟೆ ರಸ್ತೆ ಬದಿಯಲ್ಲಿ ವಾಹನ ಪಾರ್ಕಿಂಗ್‌ಗೆ ಮಾರ್ಕ್ ಮಾಡಲಾಗುವುದು. ವರ್ಕ್‌ಶಾಪ್ ಏರಿಯಾದಲ್ಲಿ ವಾಹನ ನಿಲುಗಡೆಗೆ ಪೇ ಆ್ಯಂಡ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಕೆಲಸ ನಡೆಯುತ್ತಿದೆ. ಏಕಮುಖ ಸಂಚಾರ ವ್ಯವಸ್ಥೆ ಕುರಿತಾಗಿ ಜಾಗೃತಿ ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆ ಮತ್ತು ಪಟ್ಟಣ ಪಂಚಾಯಿತಿಯಿಂದ ನಡೆಸಲು ಸೂಚಿಸಲಾಗುತ್ತದೆ. ಸಾರ್ವಜನಿಕರೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಬಾರದು.
ವಾಹನಗಳ ಸಂಖ್ಯೆ ಸೋಮವಾರಪೇಟೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ರಾಮೀಣ ಭಾಗದಿಂದ ಬರುವ ಜನರಿಗೆ ಎಲ್ಲಿ ವಾಹನಗಳನ್ನು ನಿಲ್ಲಿಸಬೇಕೆಂದು ಗೊತ್ತಾಗುತ್ತಿಲ್ಲ. ಪಾರ್ಕಿಂಗ್‌ಗೆ ಮಾರ್ಕ್ ಮಾಡಲೇಬೇಕು. ನಿಗದಿಯಾದ ಸ್ಥಳಗಳಲ್ಲಿ ವಾಹನ ನಿಲ್ಲಿಸಲು ಇದರಿಂದ ಸಾಧ್ಯವಾಗುತ್ತದೆ.