ಕುಶಾಲನಗರದ ಕೂಡ್ಲೂರು ಕೈಗಾರಿಕಾ ಪ್ರದೇಶದ ಎಸ್‌ಎಲ್‌ಎನ್ ಕಾಫಿ ಸಂಸ್ಥೆಯ ವತಿಯಿಂದ ಕೂಡುಮಗಳೂರು ಗ್ರಾಮ ಪಂಚಾಯಿತಿಗೆ ಟ್ರಾೃಕ್ಟರ್ ಹಸ್ತಾಂತರಿಸಲಾಯಿತು. ಎನ್.ವಿಶ್ವನಾಥನ್, ಎನ್. ಸಾತಪ್ಪನ್, ಭಾಸ್ಕರ್ ನಾಯಕ್ ಇತರರು ಇದ್ದರು. 
ಕೊಡಗು

ಕೂಡುಮಗಳೂರು ಗ್ರಾ.ಪಂ.ಗೆ ಟ್ರಾೃಕ್ಟರ್ ವಿತರಣೆ

ಕುಶಾಲನಗರ:  ಕುಶಾಲನಗರದ ಕೂಡ್ಲೂರು ಕೈಗಾರಿಕಾ ಪ್ರದೇಶದ ಎಸ್‌ಎಲ್‌ಎನ್ ಕಾಫಿ ಸಂಸ್ಥೆ ವತಿಯಿಂದ ಕೂಡುಮಗಳೂರು ಗ್ರಾಮ ಪಂಚಾಯಿತಿಗೆ ತ್ಯಾಜ್ಯ ಸಾಗಿಸಲು ಅನುಕೂಲವಾಗುವಂತೆ ಒಂದು ಟ್ರಾೃಕ್ಟರ್ ಹಾಗೂ ಇಬ್ಬರು ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ಉಚಿತವಾಗಿ ವಿತರಿಸಲಾಯಿತು. 
ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ನೇತೃತ್ವದ ಆಡಳಿತ ಮಂಡಳಿಗೆ ಎಸ್‌ಎಲ್‌ಎನ್ ಕಾಫಿ ಸಂಸ್ಕರಣಾ ಘಟಕದ ವ್ಯವಸ್ಥಾಪಕ ನಿರ್ದೇಶಕ ಎನ್.ವಿಶ್ವನಾಥನ್ ಹಾಗೂ ಚೇರ್ಮನ್ ಎನ್.ಸಾತಪ್ಪನ್ ಸಹೋದರರು ಗುರುವಾರ ಹಸ್ತಾಂತರ ಮಾಡಿದರು.
ಬಳಿಕ ಮಾತನಾಡಿದ ಭಾಸ್ಕರ್ ನಾಯಕ್, ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಸ್‌ಎಲ್‌ಎನ್ ಕಾಫಿ ಸಂಸ್ಕರಣಾ ಘಟಕ ಸುತ್ತಲಿನ ನೂರಾರು ಜನರಿಗೆ ಉದ್ಯೋಗ ನೀಡಿದೆ. ಜತೆಗೆ ಪಂಚಾಯಿತಿಯ ಅಗತ್ಯಗಳನ್ನು ಪೂರೈಸುತ್ತಿದೆ ಎಂದು ಶ್ಲಾಘಿಸಿದರು.
ಸಂಸ್ಥೆಯ ಅಧ್ಯಕ್ಷ ವಿಶ್ವನಾಥನ್ ಮಾತನಾಡಿ, ಸಂಸ್ಥೆ ಅಭಿವೃದ್ಧಿಯ ಆದಾಯದ ಒಂದು ಭಾಗವನ್ನು ಸಾಮಾಜಿಕ ಸೇವೆಗಳಿಗೆ ವಿನಿಯೋಗಿಸುತ್ತಿದ್ದೇವೆ ಎಂದರು.
ಇದೇ ಸಂದರ್ಭ ಅಂಗವಿಕಲರಾದ ಮಾದಾಪಟ್ಟಣದ ನಟರಾಜ್ ಮತ್ತು ನೆಲ್ಲಿಹುದಿಕೇರಿಯ ಸುರೇಶ್ ಎಂಬುವರಿಗೆ ತ್ರಿಚಕ್ರ ವಾಹನ ವಿತರಣೆ ಮಾಡಲಾಯಿತು. ಗ್ರಾಮ ಪಂಚಾಯಿತಿ ಸದಸ್ಯ ಕೆ.ಕೆ.ಬೋಗಪ್ಪ, ಫಿಲೋಮಿನಾ, ಮಂಜು, ಖತೀಜಾ, ಪಾರ್ವತಮ್ಮ, ಗೌರಮ್ಮ, ಶಂಷುದ್ದೀನ್, ಮಣಿಕಂಠ, ಅಭಿವೃದ್ಧಿ ಅಧಿಕಾರಿ ಸಂತೋಷ್, ವೇಲಾಯುಧನ್ ಇದ್ದರು.