ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಖಾಲಿ ಬಾಟಲಿಗಳನ್ನು ಸಂಗ್ರಹಿಸುವ ಬಾಟಲಿ ಆಕೃತಿಯ ಕಬ್ಬಿಣದ ತಂತಿಯಿಂದ ನಿರ್ಮಾಣ ಮಾಡಿದ ಕಸದ ತೊಟ್ಟಿಯನ್ನು ರೋಟರಿ 3181ರ ಪ್ರಾಂತಪಾಲ ಪಿ.ಕೆ. ರಾಮಕೃಷ್ಣ ಉದ್ಘಾಟಿಸಿದರು. ಪುರಸಭೆ ಮುಖ್ಯಾಧಿಕಾರಿ ಗಿರೀಶ್ ಕುಮಾರ್, ಕುಶಾಲನಗರ ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ ಮತ್ತಿತರರಿದ್ದರು  
ಕೊಡಗು

ಪ್ರವಾಸಿಗರು ಸ್ವಚ್ಛತೆ ಕಾಪಾಡಲಿ

ರವಿಕುಮಾರ್ ಪಿ. ಕೆ
ಕುಶಾಲನಗರ: ಇಲ್ಲಿನ ರೋಟರಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ರೋಟರಿ ಸುವರ್ಣ ಸಂಭ್ರಮೋತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಕುಶಾಲನಗರ ಪಟ್ಟಣವನ್ನು ಕ್ಲೀನ್ ಸಿಟಿಯಾಗಿಸುವ ಮಹತ್ತರ ಉದ್ದೇಶದೊಂದಿಗೆ ಹಮ್ಮಿಕೊಂಡಿರುವ ‘ಸ್ವಚ್ಛ ಕುಶಾಲನಗರ’ ನಮ್ಮೆಲ್ಲರ ಹೊಣೆ. ನಗರದ ಪರಿಸರ ರಕ್ಷಣೆಗೆ ಎಲ್ಲರೂ ಪಣತೊಡಿ. ಇಲ್ಲಿ ಜೀವನದಿ ಕಾವೇರಿ ಹರಿದಿಹಳು. ಕೈ ಮುಗಿದು ನಗರದೊಳಗೆ ಪ್ರವೇಶಿಸಿ. ಹಸಿ ಕಸ- ಒಣ ಕಸ ಬೇರ್ಪಡಿಸಿ ವಿಂಗಡಿಸಿ. ಪುರಸಭೆ ಹಾಗೂ ರೋಟರಿ ಸಂಸ್ಥೆಯ ಸ್ವಚ್ಛತಾ ಆಂದೋಲನದೊಂದಿಗೆ ಸಾರ್ವಜನಿಕರು ಕೈ ಜೋಡಿಸಿ’ ಎಂಬಿತ್ಯಾದಿ ಜನ ಜಾಗೃತಿಯ ಗೋಡೆ ಬರಹಗಳೊಂದಿಗೆ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಖಾಲಿ ಬಾಟಲಿಗಳನ್ನು ಸಂಗ್ರಹಿಸುವ ಬಾಟಲಿ ಆಕೃತಿಯ ಕಬ್ಬಿಣದ ತಂತಿಯಿಂದ ನಿರ್ಮಾಣ ಮಾಡಿದ ಕಸದ ತೊಟ್ಟಿಯನ್ನು ರೋಟರಿ 3181 ರ ಪ್ರಾಂತಪಾಲ ಪಿ.ಕೆ. ರಾಮಕೃಷ್ಣ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕೊಡಗು ಸ್ವರ್ಗದಂತಿರುವ ಪ್ರದೇಶ. ಇಲ್ಲಿಗೆ ದೂರದ ಪ್ರದೇಶಗಳಿಂದ ನಿತ್ಯವೂ ಆಗಮಿಸುವ ಸಾವಿರಾರು ಪ್ರವಾಸಿಗರು ಕೊಡಗಿನ ಪ್ರವೇಶ ದ್ವಾರದಲ್ಲಿ ಕೈಮುಗಿದು ಜಿಲ್ಲೆಯೊಳಗೆ ಪ್ರವೇಶ ಪಡೆಯಬೇಕು. ಏಕೆಂದರೆ, ಕೊಡಗಿನ ಸುಂದರ ಪ್ರಕೃತಿ - ಪರಿಸರದ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಕೊಡಗಿನ ಪ್ರವೇಶದ್ವಾರ ಕುಶಾಲನಗರದ ಸ್ವಚ್ಛತೆಗೆ ರೋಟರಿ ಸಂಸ್ಥೆ ಯೋಜನೆ ಶ್ಲಾಘನೀಯವಾಗಿದೆ. ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಬಾಟಲಿ ಮಾದರಿಯ ಕಸದ ತೊಟ್ಟಿಯನ್ನು ಬಳಕೆ ಮಾಡುವ ಮೂಲಕ ಕೊಡಗು ಜಿಲ್ಲೆಯನ್ನು ಸ್ವಚ್ಛ ಸುಂದರಗೊಳಿಸಲು ಕರೆ ಕೊಟ್ಟರು.
ಪುರಸಭೆ ಮುಖ್ಯಾಧಿಕಾರಿ ಗಿರೀಶ್‌ಕುಮಾರ್ ಮಾತನಾಡಿ, ಬಾಟಲಿಗಳನ್ನು ಶೇಖರಿಸುವ ಕಸದ ತೊಟ್ಟಿ ಮಾದರಿ ಆಕರ್ಷಣೆ ಯಾಗಿದೆ. ನಗರದ ಪರಿಸರಕ್ಕೆ ಧಕ್ಕೆಯಾಗದಂತೆ ಸ್ವಚ್ಛ ಸುಂದರ ನಗರವಾಗಿಸಲು ಪಣ ತೊಟ್ಟಿರುವ ರೋಟರಿಯೊಂದಿಗೆ ಪುರಸಭೆ ಸದಾ ಇರುತ್ತದೆ. ಹಾಗಾಗಿ ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಕುಶಾಲನಗರ ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ ಮಾತನಾಡಿ, ರೋಟರಿ ಸಂಸ್ಥೆಗೆ 50 ವರ್ಷಗಳು ತುಂಬುತ್ತಿರುವ ಹಿನ್ನೆಲೆ ಆರಂಭಿಕವಾಗಿ ಇಂತಹ ಸ್ವಚ್ಛತಾ ಯೋಜನೆಗೆ ವಿಭಿನ್ನವಾದ ಪ್ರಯತ್ನದೊಂದಿಗೆ ಜನಜಾಗೃತಿ ಮೂಡಿಸಲಾಗುತ್ತಿದ್ದು, ಸಾರ್ವಜನಿಕರ ಸಹಕಾರ ತುಂಬ ಅಗತ್ಯ. ಹಾಗೆಯೇ ಬ್ರಿಟಿಷರ ಕಾಲದ ಹಳೆಯ ಸೇತುವೆಯನ್ನು ರೋಟರಿಯಿಂದ ಆಕರ್ಷಕ ಉದ್ಯಾನವಾಗಿ ಅಭಿವೃದ್ಧಿ ಪಡಿಸಲು ಪುರಸಭೆ ಅವಕಾಶ ಕಲ್ಪಿಸಲು ಕೋರಿದರು.
ಹಾಗೆಯೇ ನಗರದ ನಾಗರಿಕರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಸ್ವಚ್ಛ ಕುಶಾಲನಗರಕ್ಕೆ ರೋಟರಿಯೊಂದಿಗೆ ಕೈ ಜೋಡಿಸಬೇಕೆಂದು ಕೋರಿದರು.
ರೋಟರಿ ಉಪ ಪ್ರಾಂತಪಾಲ ಉಲ್ಲಾಸ್ ಕೃಷ್ಣ, ರೋಟರಿ ಸುವರ್ಣ ಸಂಭ್ರಮೋತ್ಸವದ ಛೇರ್ಮನ್ ಎಸ್.ಕೆ. ಸತೀಶ್, ಪದಾಧಿಕಾರಿಗಳಾದ ಡಾ.ಹರಿ ಎ. ಶೆಟ್ಟಿ, ಆರತಿ ಶೆಟ್ಟಿ, ಎಸ್.ಎನ್.ರಾಜೇಂದ್ರ, ಶಿಬು ಥಾಮಸ್, ಕ್ರಿಜ್ವಲ್ ಕೋಟ್ಸ್, ರೋಟರಿ ಕಾರ್ಯದರ್ಶಿ ಮಂಜುನಾಥ್, ಪ್ರಿನ್ಸ್ ಇನ್ನಿತರರು ಇದ್ದರು.