ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಕಚೇರಿ 
ಕೊಡಗು

ಸೊರಗಿದೆ ಪ್ರವಾಸೋದ್ಯಮ ಇಲಾಖೆ

ಮಡಿಕೇರಿ:
ಜಗತ್ತಿನ ಪ್ರವಾಸೋದ್ಯಮ ನಕಾಶೆಯಲ್ಲಿ ಗುರುತಿಸಿಕೊಂಡಿರುವ ಕೊಡಗಿನ ಪ್ರವಾಸೋದ್ಯಮ ಇಲಾಖೆಯನ್ನು ಮುನ್ನಡೆಸಲು ನಾವಿಕನೇ ಇಲ್ಲ. ಕಳೆದ ಸುಮಾರು ಒಂದು ವರ್ಷದಿಂದ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರ ಕುರ್ಚಿ ಖಾಲಿ ಉಳಿದಿದೆ. ಇಲಾಖೆಯಲ್ಲಿ ಕಾಯಂ ಸಿಬ್ಬಂದಿ ಕೂಡ ಇಲ್ಲದಿರುವುದರಿಂದ ರಚನಾತ್ಮಕ ಕೆಲಸಗಳೂ ಆಗುತ್ತಿಲ್ಲ. ಪ್ರಮುಖವಾಗಿ ಹೋಂಸ್ಟೇ ನೋಂದಣಿಗೆ ಸಂಬAಧಿಸಿದ ಪ್ರಕ್ರಿಯೆಗಳ ಮೇಲೂ ಇದರಿಂದ ಪರಿಣಾಮ ಉಂಟಾಗಿದೆ.
ಭಾರತದ ಸ್ಕಾಟ್‌ಲ್ಯಾಂಡ್ ಎನ್ನುವ ಅನ್ವರ್ಥಕ ಹೆಸರು ಕೊಡಗಿಗಿದೆ. ದಕ್ಷಿಣದ ಕಾಶ್ಮೀರ ಎಂದು ಕೂಡ ಬಣ್ಣಿಸಲಾಗುತ್ತದೆ. ಪಶ್ಚಿಮಘಟ್ಟದ ಸೆರಗಿನಲ್ಲಿ ಮಲೆನಾಡಿನ ಮಡಿಲಲ್ಲಿರುವ ಕೊಡಗು ತನ್ನ ಅತ್ಯದ್ಭುತ ಪ್ರಾಕೃತಿಕ ಸೌಂದರ್ಯದಿAದಲಾಗಿ ದೇಶ, ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಕರಾವಳಿ ಪ್ರವಾಸೋದ್ಯಮ ಉತ್ತುಂಗದಲ್ಲಿದ್ದ ಸಮಯದಲ್ಲಿ 2004ರಲ್ಲಿ ದೇಶದ ಕರಾವಳಿಗೆ ಸುನಾಮಿ ಅಪ್ಪಳಿಸಿದ ನಂತರ ಪ್ರವಾಸಿಗರ ಆದ್ಯತೆಯ ಕ್ಷೇತ್ರ ಬದಲಾಯಿತು. ಪಶ್ಚಿಮಘಟ್ಟದ ಗಿರಿ ಶ್ರೇಣಿಗಳ ಕಡೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಾರಂಭಿಸಿತು. ಹೀಗೆ ಕಳೆದ 2 ದಶಕಗಳಿಂದ ಈಚೆಗೆ ಕೊಡಗಿನಲ್ಲಿ ವಾಣಿಜ್ಯಿಕವಾಗಿ ಶುರುವಾದ ಪ್ರವಾಸೋದ್ಯಮ ಈಗ ಏರು ಹಾದಿಯಲ್ಲಿದೆ.
2018ರ ನಂತರ ಸತತ ಮೂರು ವರ್ಷಗಳ ಕಾಲ ಜಿಲ್ಲೆಯನ್ನು ಕಾಡಿದ್ದ ಪ್ರಾಕೃತಿಕ ವಿಕೋಪ, ಅತಿವೃಷ್ಠಿ ಹಾಗೂ ನಂತರ ಜಗತ್ತಿಗೆ ಕಂಟಕವಾಗಿದ್ದ ಕೊರೊನಾ ಕೊಡಗಿನ ಪ್ರವಾಸೋದ್ಯಮವನ್ನು ಸ್ವಲ್ಪ ಹಿಂದಕ್ಕೆ ತೆಗೆದುಕೊಂಡು ಹೋಗಿತ್ತು. ಆದರೆ ನಂತರದ ದಿನಗಳಲ್ಲಿ ನಿಧಾನಕ್ಕೆ ಚೇತರಿಸಿಕೊಂಡ ಜಿಲ್ಲೆ ಈಗ ಮತ್ತೆ ಸಹಜ ಸ್ಥಿತಿಗೆ ಬಂದಿದೆ. ಕಳೆದ 4 ವರ್ಷದಿಂದ ಈಚೆಗೆ ಪ್ರವಾಸಿಗ ಸಂಖ್ಯೆ ಮೊದಲಿನಂತೆ ಹೆಚ್ಚಳವಾಗಿದೆ. ಪ್ರವಾಸಿ ಚಟುವಟಿಕೆಗಳೂ ಇಲ್ಲಿ ಬಿರುಸುಗೊಂಡಿದ್ದು, ಪ್ರವಾಸಿತಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕೆಲಸವೂ ನಡೆದಿದೆ.
ಕೊಡಗಿಗೆ ಹೆಚ್ಚು ಹೆಚ್ಚು ಪ್ರವಾಸಿಗರು ಆಗಮಿಸುತ್ತಿರುವುದರಿಂದ ಪ್ರವಾಸೋದ್ಯಮದ ಬೆಳವಣಿಗೆಯೂ ಅಡ್ಡಾದಿಡ್ಡಿಯಾಗಿ ನಡೆಯುತ್ತಿದೆ. ಇದಕ್ಕೊಂದು ಶಿಸ್ತುಬದ್ಧ ವ್ಯವಸ್ಥೆ ಇಲ್ಲದ ಕಾರಣ ಹಲವಷ್ಟು ಸಮಸ್ಯೆಗಳ ಉದ್ಭವಕ್ಕೆ ಕಾರಣವಾಗಿದೆ. ನೀತಿ ನಿಯಮಗಳ ಚೌಕಟ್ಟಿನೊಳಗೆ ವ್ಯವಸ್ಥೆ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿ ಇರುವ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯಲ್ಲಿ ಪ್ರಮುಖ ಹುದ್ದೆಯೇ ಕಳೆದ ಒಂದು ವರ್ಷದಿಂದ ಖಾಲಿ ಉಳಿದಿದೆ. ಉಪ ವಿಭಾಗಾಧಿಕಾರಿಗೆ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರ ಹುದ್ದೆಯ ಜವಾಬ್ದಾರಿ ವಹಿಸಿದ್ದರೂ ಅವರ ಮೂಲ ಇಲಾಖೆ ಕಾರ್ಯಭಾರ ಮಧ್ಯೆ ಪ್ರವಾಸೋದ್ಯಮ ಇಲಾಖೆ ಸೊರಗುತ್ತಿದೆ.
ಕೊಡಗು ಪ್ರವಾಸೋದ್ಯಮ ಇಲಾಖೆಯಲ್ಲಿ ಕಾಯಂ ಸಿಬ್ಬಂದಿ ಕೂಡ ಇಲ್ಲ. ಮಂಜೂರಾದ 5 ಹುದ್ದೆಗಳಿದ್ದರೂ ಒಬ್ಬರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ಉಳಿದ 4 ಹುದ್ದೆಗಳು ಖಾಲಿ ಇವೆ. ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಆಗಿದ್ದರೂ ಇವರಿಂದ ಕಾಯಂ ನೌಕರರ ರೀತಿಯಲ್ಲಿ ಕೆಲಸ ಆಗುವುದಿಲ್ಲ ಎನ್ನುವ ಆರೋಪಗಳಿವೆ. ಪ್ರವಾಸೋದ್ಯಮವನ್ನೇ ಉಸಿರಾಡುತ್ತಿರುವ ಕೊಡಗಿನಂಥ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಈ ದುಸ್ಥಿತಿಯಿಂದಾಗಿಯೇ ಸಾಕಷ್ಟು ಸಮಸ್ಯೆಗಳು ಉದ್ಭವ ಆಗಿದೆ ಎನ್ನುತ್ತಾರೆ ಪ್ರವಾಸೋದ್ಯಮಿಗಳು.
ಕೊಡಗು ಪ್ರವಾಸೋದ್ಯಮ ಇಲಾಖೆಗೆ ಉಪನಿರ್ದೇಶಕರಾಗಿ 2023ರ ನವೆಂಬರ್‌ನಲ್ಲಿ ವರ್ಗಾ ಆಗಿ ಬಂದಿದ್ದ ಅನಿತಾ ಭಾಸ್ಕರ್ ಸುಮಾರು ಒಂದೂವರೆ ವರ್ಷಗಳ ಕಾಲ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ಇಲಾಖೆಗೆ ಜೀವ ತುಂಬುವ ಕೆಲಸ ಮಾಡಿದ್ದರು. ಇವರ ಕೆಲಸವನ್ನು ಸ್ಥಳೀಯ ಪ್ರವಾಸೋದ್ಯಮಿಗಳು ಈಗಲೂ ಸ್ಮರಿಸಿಕೊಳ್ಳುತ್ತಾರೆ. ಅನಧಿಕೃತ ಹೋಮ್‌ಸ್ಟೇಗಳ ಕಾರ್ಯಾಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಇವರು ತಮ್ಮ ಕಾರ್ಯವಧಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಹೋಮ್‌ಸ್ಟೇಗಳ ನೋಂದಣಿಗೆ ಕಾರಣಕರ್ತರಾಗಿದ್ದರು.
ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿಗೆ ಅರ್ಜಿ ಸಲ್ಲಿಸಿದ ಹೋಮ್‌ಸ್ಟೇಗಳಿಗೆ ಖುದ್ದು ಭೇಟಿ ನೀಡುತ್ತಿದ್ದ ಅನಿತಾ ಭಾಸ್ಕರ್ ಸರ್ಕಾರದ ನಿಯಮಾವಳಿಗಳಂತೆ ಹೋಮ್‌ಸ್ಟೇಗಳು ನಡೆಯುತ್ತಿದ್ದರೆ ಮಾತ್ರ ಪರವಾನಗಿ ಕೊಡುತ್ತಿದ್ದರು. ಇವರ ಅವಧಿಯಲ್ಲಿ ಸುಮಾರು 2 ಸಾವಿರ ಹೋಮ್‌ಸ್ಟೇಗಳನ್ನು ನೋಂದಣಿ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ಕೊಡಗು ಜಿಲ್ಲಾ ಹೋಮ್ ಸ್ಟೇ ಅಸೋಸಿಯೇಷನ್ ಪದಾಧಿಕಾರಿಗಳು. ಹಾಗಾಗಿಯೇ ಜಿಲ್ಲೆಯಲ್ಲಿ ಈಗ ಸುಮಾರು ಶೇ.75ರಷ್ಟು ಹೋಂಸ್ಟೇಗಳು ಶಿಸ್ತುಬದ್ಧ ವ್ಯವಸ್ಥೆ ಅಡಿ ನಡೆಯುವಂತಾಗಿದೆ.
ಅನಿತಾ ಭಾಸ್ಕರ್ ವರ್ಗಾ ಆದ ನಂತರ ಕೊಡಗು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರ ಹುದ್ದೆ ಖಾಲಿ ಇದೆ. ಇವರ ಅವಧಿಯಲ್ಲಿ ಆರಂಭವಾದ ಯೋಜನೆಗಳೂ ನೆನೆಗುದಿಗೆ ಬಿದ್ದಿವೆ. ಹೋಂ ಸ್ಟೇ ನೋಂದಣಿ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆಯುತ್ತಿದೆ. ಜಿಲ್ಲೆಯಾದ್ಯಂತ ಗುರುತಿಸಲಾಗಿದ್ದ ಹೊಸ ಪ್ರವಾಸಿತಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಮತ್ತು ಇವುಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಕೆಲಸ ಕೂಡ ಆಗುತ್ತಿಲ್ಲ. ಪ್ರಮುಖವಾಗಿ ರಾಜ್ಯ ಸರ್ಕಾರ ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ಜಾರಿಗೆ ಬಂದಿದ್ದು ಇದರ ಪರಿಣಾಮಕಾರಿ ಅನುಷ್ಠಾನಕ್ಕೂ ತೊಂದರೆ ಆಗಿದೆ.
ಕೊಡಗಿಗೆ ಭೇಟಿ ನೀಡುವ ಪ್ರವಾಸಿಗಳ ಪಾಲಿಗೆ ಇಲ್ಲಿನ ಪ್ರವಾಸೋದ್ಯಮ ಸುರಕ್ಷಿತ ಮತ್ತು ನೆನಪಿನಲ್ಲಿ ಉಳಿಯುವಂತೆ ಆಗಬೇಕಿದ್ದರೆ ಶಿಸ್ತುಬದ್ಧ ಚೌಕಟ್ಟಿನೊಳಗೆಯೇ ನಡೆಯಬೇಕಾದ ಅಗತ್ಯವಿದೆ. ಇದರ ಮೇಲುಸ್ತುವಾರಿ ಜವಾಬ್ದಾರಿ ಪ್ರವಾಸೋದ್ಯಮ ಇಲಾಖೆಯದ್ದೇ ಆಗಿರುವುದರಿಂದ ಇಲಾಖೆಯಲ್ಲಿ ಖಾಲಿ ಇರುವ ಉಪನಿರ್ದೇಶಕರ ಹುದ್ದೆ ಆದಷ್ಟು ಶೀಘ್ರ ಭರ್ತಿ ಆಗುವುದ ಮಾತ್ರವಲ್ಲದೆ ಇಲಾಖೆಯಲ್ಲಿ ಖಾಲಿ ಇರುವ ಕಾಯಂ ಸಿಬ್ಬಂದಿ ನೇಮಕವೂ ಆಗಬೇಕಿದೆ ಎನ್ನುವ ಒತ್ತಾಯ ಪ್ರವಾಸೋದ್ಯಮ ವಲಯದಿಂದ ಕೇಳಿ ಬರುತ್ತಿದೆ.
"

ಪ್ರವಾಸೋದ್ಯಮಕ್ಕೆ ಕೊಡಗಿನ ಕಾಣಿಕೆ ದೊಡ್ಡದಿದೆ. ಪ್ರವಾಸೋದ್ಯಮ ಇಲ್ಲಿನ ಪ್ರಮುಖ ಆದಾಯ ಮೂಲವೂ ಹೌದು. ಆದರೆ ಇದಕ್ಕೆ ಸಂಬAಧಿಸಿದAತೆ ಇರುವ ಪ್ರವಾಸೋದ್ಯಮ ಇಲಾಖೆಯನ್ನು ಮುನ್ನಡೆಸುವವರೇ ಜಿಲ್ಲೆಯಲ್ಲಿ ಇಲ್ಲ. ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರ ಹುದ್ದೆ ಖಾಲಿ ಇರುವುದರಿಂದ ಯಾವುದೇ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಉಪವಿಭಾಗಾಧಿಕಾರಿಗೆ ಪ್ರವಾಸೋದ್ಯಮ ಇಲಾಖೆ ಉಸ್ತುವಾರಿ ಕೊಡಲಾಗಿದೆ. ಆದರೆ ಅವರ ಮೂಲ ಹುದ್ದೆಯ ಕಾರ್ಯಭಾರವೇ ಸಾಕಷ್ಟಿರುವಾಗ ಪ್ರವಾಸೋದ್ಯ ಇಲಾಖೆ ಕಡೆಗೆ ಗಮನ ಹರಿಸಲು ಅವರಿಗೆ ಸಾಧ್ಯ ಆಗುತ್ತಿಲ್ಲ.

"

ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರಾಗಿದ್ದ ಅನಿತಾ ಭಾಸ್ಕರ್ ಅವರ ವರ್ಗಾವಣೆ ನಂತರ ಉಪವಿಭಾಗಾಧಿಕಾರಿ ಆ ಹುದ್ದೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಗೆ ಉಪನಿರ್ದೇಶಕರ ಹುದ್ದೆಯ ಅಗತ್ಯತೆ ನನ್ನ ಗಮನಕ್ಕೂ ಬಂದಿದೆ. ಈಗ ಸಾಮಾನ್ಯ ವರ್ಗಾವಣೆ ಆರಂಭವಾಗಿದ್ದು, ಈ ವಿಷಯದಲ್ಲಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು.