ಸೋಮವಾರಪೇಟೆ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮ ದಿನಾಚರಣೆಯನ್ನು ಡಿ.25 ರಂದು ಅಟಲ್‌ಜೀ ಸಮುದಾಯ ಭವನದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಬಿಜೆಪಿ ಹಿರಿಯರ ಬಳಗದ ಪ್ರಮುಖರಾದ ಬಿ.ಟಿ.ತಿಮ್ಮಶೆಟ್ಟಿ ತಿಳಿಸಿದರು.
ರಾಷ್ಟ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಮಹಾನ್ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣೆ ಮತ್ತು ಚಿಂತನೆಗಳನ್ನು ಜನತೆಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು. ವಾಜಪೇಯಿ ಅವರು ಕೇವಲ ರಾಜಕಾರಣಿ ಮಾತ್ರವಲ್ಲ, ಒಬ್ಬ ಶ್ರೇಷ್ಠ ಕವಿ, ವಾಗ್ಮಿ ಹಾಗೂ ದೇಶದ ಏಕತೆ, ಸಮಗ್ರತೆಯ ಸಂಕೇತವಾಗಿದ್ದರು ಎಂದು ಬಣ್ಣಿಸಿದರು.
ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಗ್ರಾಮೀಣಾಭಿವೃದ್ಧಿ, ರಸ್ತೆ ನಿರ್ಮಾಣ, ಸಂವಹನ ವ್ಯವಸ್ಥೆ, ಪರಮಾಣು ಶಕ್ತಿ ಹಾಗೂ ವಿದೇಶಾಂಗ ನೀತಿಯಲ್ಲಿ ದೇಶವು ಮಹತ್ವದ ಹೆಜ್ಜೆಗಳನ್ನು ಇಟ್ಟಿತು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ಮಾಜಿ ಎಂಎಲ್‌ಸಿ ಸುನೀಲ್ ಸುಬ್ರಮಣಿ, ಪಕ್ಷದ ಹಿರಿಯರು, ಅಟಲ್‌ಜೀ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಬಳಗದ ಪದಾಧಿಕಾರಿಗಳಾದ ಬಿ.ಪಿ.ಶಿವಕುಮಾರ್, ಕೆ.ಎನ್. ಶಿವಕುಮಾರ್, ಮೃತ್ಯುಂಜಯ, ಹಾಲೇರಿ ದಿನೇಶ್, ದಯಾನಂದ ಇದ್ದರು.