ಸೋಮವಾರಪೇಟೆ ಸಮೀಪದ ಬಜೆಗುಂಡಿ ಖಿಳರಿಯಾ ಜುಮಾ ಮಸೀದಿಯಲ್ಲಿ ಮುಸ್ಲಿಮರು ಈದ್ ಉಲ್ ಫಿತ್ರ್ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಿ, ಶುಭಾಶಯ ವಿನಿಮಯ ಮಾಡಿಕೊಂಡರು.
ಸೋಮವಾರಪೇಟೆ: ಸಮೀಪದ ಬಜೆಗುಂಡಿ ಖಿಳರಿಯಾ ಜುಮಾ ಮಸೀದಿಯಲ್ಲಿ ಮುಸ್ಲಿಮರು ಈದ್ ಉಲ್ ಫಿತ್ರ್ ಹಬ್ಬವನ್ನು ಭಕ್ತಿ-ಭಾವದಿಂದ ಶುಕ್ರವಾರ ಆಚರಿಸಿದರು.
ಬೆಳಗಿನ ಜಾವದಿಂದಲೇ ಮಸೀದಿ ಆವರಣದಲ್ಲಿ ಭಕ್ತರು ಜಮಾಯಿಸಿ, ವಿಶೇಷ ನಮಾಜ್ ಸಲ್ಲಿಸಿದರು. ಜಮಾಅತ್ ಖತೀಬರಾದ ಉಬೈದ್ ಫೈಝಿ ಅವರು ಪ್ರಾರ್ಥನೆಗೆ ನೇತೃತ್ವ ವಹಿಸಿ, ಧಾರ್ಮಿಕ ಉಪದೇಶ ನೀಡಿದರು. ಅವರು ಶಾಂತಿ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳ ಮಹತ್ವವನ್ನು ವಿವರಿಸಿದರು.
ಜಮಾಅತ್ ಅಧ್ಯಕ್ಷ ಕೆ.ಎ.ಯಾಕುಬ್ ಮಾತನಾಡಿ, ರಂಜಾನ್ ತಿಂಗಳು ಆತ್ಮಶುದ್ಧಿ, ಸಹನೆ ಮತ್ತು ದಾನ-ಧರ್ಮದ ಸಂಕೇತವಾಗಿದೆ. ಉಪವಾಸದ ಮೂಲಕ ಮಾನವನು ತನ್ನೊಳಗಿನ ಕೆಟ್ಟ ಗುಣಗಳನ್ನು ತೊಡೆದು ಹಾಕಿ ಉತ್ತಮ ಜೀವನದತ್ತ ಸಾಗಬೇಕು. ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಯುದ್ಧಗಳಿಂದ ನಿರಪರಾಧಿಗಳ ಮೇಲೆ ಅನಾಹುತಗಳು ಸಂಭವಿಸುತ್ತಿದ್ದು, ಇದರಿಂದ ಮಾನವೀಯತೆ ಹದಗೆಡುತ್ತಿದೆ ಎಂದು ವಿಷಾದಿಸಿದರು. ಇಂತಹ ಸಂದರ್ಭದಲ್ಲಿ ಎಲ್ಲರೂ ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವವನ್ನು ಬೆಳೆಸಬೇಕು ಎಂದು ಕರೆ ನೀಡಿದರು. ವಿಶ್ವದಲ್ಲಿ ಶಾಂತಿ ನೆಲೆಸಿ, ಯುದ್ಧಭೀತಿ ನಿವಾರಣೆಯಾಗಲಿ ಎಂದು ಪ್ರಾರ್ಥಿಸೋಣ ಎಂದರು.
ನಮಾಜ್ ನಂತರ ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು, ಸಿಹಿ ತಿಂಡಿಗಳನ್ನು ಹಂಚಿಕೊಂಡು ಸಂಭ್ರಮಿಸಿದರು. ಹಿರಿಯರು, ಯುವಕರು ಹಾಗೂ ಮಕ್ಕಳು ಸಮಾನವಾಗಿ ಪಾಲ್ಗೊಂಡು ಹಬ್ಬದ ವಾತಾವರಣಕ್ಕೆ ಮೆರುಗು ತಂದರು.
ಜಮಾಅತ್‌ನಲ್ಲಿ ಸೇವೆ ಸಲ್ಲಿಸಿ ಬೇರೆಡೆಗೆ ವರ್ಗಾವಣೆಯಾಗುತ್ತಿರುವ ಉಬೈದ್ ಫೈಝಿ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಅವರ ಸೇವೆಯನ್ನು ಸ್ಮರಿಸಿ ಜಮಾಅತ್ ಸದಸ್ಯರು ಕೃತಜ್ಞತೆ ಸಲ್ಲಿಸಿದರು.