ಕೊಡಗು ಜಿಲ್ಲಾಡಳಿತ, ಹೊದ್ದೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಕಡಬಗೇರಿಯಲ್ಲಿ ನೂತನ ಬಡಾವಣೆಗೆ ಶಾಸಕ ಡಾ.ಮಂತರ್‌ಗೌಡ ಚಾಲನೆ ನೀಡಿದರು.
ನಾಪೋಕ್ಲು: ನಿವೇಶನಗಳನ್ನು ಸರ್ಕಾರದ ಯೋಜನೆಯಂತೆ ಉಚಿತವಾಗಿ ನೀಡುತ್ತಿದ್ದು ಯಾರಿಗೂ ಕೂಡ ಒಂದು ರೂಪಾಯಿ ನೀಡಬಾರದು. ಅಧಿಕಾರಿಗಳು ಅಥವಾ ಯಾವುದೇ ವಕ್ತಿಯಾಗಲಿ ಹಣಕ್ಕೆ ಬೇಡಿಕೆ ಇಟ್ಟಲ್ಲಿ ನೇರವಾಗಿ ಜಿಲ್ಲಾಧಿಕಾರಿಗೆ ದೂರು ನೀಡಿ ಎಂದು ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಹೇಳಿದರು.
ಜಿಲ್ಲಾಡಳಿತ ಹಾಗೂ ಹೊದ್ದೂರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಬುಧವಾರ ಕಡಬಗೇರಿಯಲ್ಲಿ ನಡೆದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಟ್ಟು 60 ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿವೇಶನ ನೀಡಲಾಗಿದೆ. ಸದ್ಯದಲ್ಲಿ ಮನೆ ನಿರ್ಮಿಸಿಕೊಡಲಾಗುವುದು. ಯಾರೂ ಕೂಡ ನಿವೇಶನವನ್ನು ಇತರರಿಗೆ ಮಾರಾಟ ಮಾಡಬಾರದು. ಮಾರಾಟ ಮಾಡಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ನೂತನ ಬಡಾವಣೆಗೆ ನನ್ನ ಹೆಸರು ಬೇಡ. ಬದಲಿಗೆ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆ ಎಂದು ನಾಮಕರಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನಾವೆಲ್ಲ ಹತ್ತು ಜನ್ಮ ಎತ್ತಿದರೂ ಸಾಧಿಸಲು ಸಾಧ್ಯವಾಗದಂತಹ ಮಹಾನ್ ಸಾಧನೆಯನ್ನು ಈ ದೇಶದ ಜನತೆಗಾಗಿ ಅಂಬೇಡ್ಕರ್ ಮಾಡಿದ್ದಾರೆ. ಅಂತಹ ಮಹಾನ್ ವ್ಯಕ್ತಿಯ ಹೆಸರನ್ನು ಬಡಾವಣೆಗೆ ನಾಮಕರಣ ಮಾಡುವುದು ಒಳಿತು ಎಂದು ಹೇಳಿದರು.
ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಶಾಸಕ ಡಾ.ಮಂತರ್‌ಗೌಡ ಅವರ ಪ್ರಯತ್ನ ಹಾಗೂ ಹೊದ್ದೂರು ಗ್ರಾಪಂ ಸದಸ್ಯರು, ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳ ಪರಿಶ್ರಮದಿಂದ ಉತ್ತಮ ಕೆಲಸ ಆಗಿದೆ. ಶ್ರಮಿಸಿದ ಪ್ರತಿಯೊಬ್ಬರೂ ಅಭಿನಂದನಾರ್ಹರು ಎಂದು ಶ್ಲಾಘಿಸಿದರು.
ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎ.ಹಂಸ ಮಾತನಾಡಿ, ಡಾ.ಮಂತರ್‌ಗೌಡ ಅವರು ಶಾಸಕರಾಗಿ ಆಯ್ಕೆಗೊಂಡ ಎರಡೂವರೆ ವರ್ಷದಲ್ಲಿ 9 ಕೋಟಿ ರೂ.ಗೂ ಹೆಚ್ಚಿನ ಅನುದಾನವನ್ನು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ನೀಡಿದ್ದಾರೆ. ಒಟ್ಟು 300 ಹಕ್ಕುಪತ್ರಗಳನ್ನು ವಿತರಿಸಿದ್ದು ಇದೊಂದು ಐತಿಹಾಸಿಕ ದಾಖಲೆ ಎಂದು ಬಣ್ಣಿಸಿದರು.
ಮಡಿಕೇರಿ ತಹಸೀಲ್ದಾರ್ ಶ್ರೀಧರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶೇಖರ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಂದ್ರಿರ ಮೋಹನ್ ದಾಸ್, ಅಲ್ಪ ಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಹನೀಫ್, ಹೊದ್ದೂರು ಪಿಡಿಒ ವತ್ಸಲಾ ಕುಮಾರಿ, ಹೊಸ್ಕೇರಿ ಪಿಡಿಒ ಅಬ್ದುಲ್ಲಾ, ಗ್ರಾಮ ಪಂಚಾಯಿತಿ ಸದಸ್ಯ ಪಾಲೆಮಾಡು ಮೊಣ್ಣಪ್ಪ, ಪ್ರಮುಖರಾದ ತೆನ್ನಿರ ಮೈನಾ, ವಿ.ಜಿ.ಮೋಹನ್, ಅಪ್ರು ರವೀಂದ್ರ, ಕೊಳುಮಂಡ ರಫೀಕ್, ಗ್ರಾಮ ಪಂಚಾಯಿತಿ ಸದಸ್ಯರಾದ ಚೌರೀರ ಅನಿತಾ, ಹಮೀದ್, ಕುಸುಮಾವತಿ, ಲಕ್ಷ್ಮೀ, ಅನುರಾಧಾ, ಕಡ್ಲೆರ ಟೈನಿ, ಮೊಯ್ದು, ಕೆ.ಆರ್.ಅನಿತಾ ಉಪಸ್ಥಿತರಿದ್ದರು.