ಕಾವೇರಿ ನದಿ ದಡದಲ್ಲಿ ಪೊಲೀಸರು ಅಕ್ರಮ ಮರಳುಗಾರಿಕೆ ಬಗ್ಗೆ ಪರಿಶೀಲಿಸಿ ಸಾಕ್ಷೃಧಾರಗಳನ್ನು ಕಲೆ ಹಾಕಿದರು.
- ಗಣಿ, ಭೂವಿಜ್ಞಾನ ಇಲಾಖೆಗೆ ಹಸ್ತಾಂತರ
ನಾಪೋಕ್ಲು: ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಟಿಪ್ಪರ್‌ಅನ್ನು ಪೊಲೀಸರು ವಶಕ್ಕೆ ಪಡೆದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿ ದಂಡ ವಿಧಿಸಿದ್ದಾರೆ.
ಸಮೀಪದ ಬೇತು ಗ್ರಾಮದ ಕಾರೆಕಾಡು ಬಳಿಯ ಕಾವೇರಿ ನದಿ ದಡದಿಂದ ಟಿಪ್ಪರ್‌ನಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎಸ್‌ಐ ರಾಘವೇಂದ್ರ ಹಾಗೂ ಸಿಬ್ಬಂದಿ ಮರಳು ತುಂಬಿದ ಟಿಪ್ಪರ್ ವಶಕ್ಕೆ ಪಡೆದಿದ್ದಾರೆ. ಬಳಿಕ ಪ್ರಕರಣವನ್ನು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿ ವಾಹನದ ಮಾಲೀಕ ಡಿ.ಕೆ.ನಂದೀಶ್ ಅವರಿಗೆ 32,320 ರೂ. ದಂಡ ವಿಧಿಸಿ ಕ್ರಮ ಕೈಗೊಂಡಿದ್ದಾರೆ. ಬಳಿಕ ಕಾವೇರಿ ನದಿ ದಡಕ್ಕೆ ಮರಳು ಸಾಗಣೆಗೆ ತೆರಳುವ ರಸ್ತೆಗೆ ಅಡ್ಡಲಾಗಿ ಜೆಸಿಬಿ ಯಂತ್ರವನ್ನು ಬಳಸಿ ಚರಂಡಿ ತೆಗೆಸಿದ ಪೊಲೀಸರು ಮರಳುಗಾರಿಕೆಗೆ ವಾಹನಗಳು ತೆರಳದಂತೆ ಕ್ರಮ ಕೈಗೊಂಡಿದ್ದಾರೆ.
ಅಕ್ರಮವಾಗಿ ಮರಳು ದಂಧೆ ನಡೆಸುತ್ತಿರುವ ಬಗ್ಗೆ ತಿಳಿದರೆ ಸಾರ್ವಜನಿಕರು ಪೊಲೀಸ್ ಠಾಣೆಗೆ ಅಥವಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಇಲಾಖೆ ತಿಳಿಸಿದೆ.