ನ್ನಂಪೇಟೆ ಸಮೀಪದ ಬೆಸಗೂರಿನಲ್ಲಿ ಸೆರೆ ಸಿಕ್ಕ ಹುಲಿ
- ಬೆಸಗೂರು ಗ್ರಾಮ
- ಗ್ರಾಮಸ್ಥರಿಗೆ ತಲೆನೋವಾಗಿದ್ದ ಹುಲಿಯ ಉಪಟಳ
- ತಾತ್ಕಾಲಿಕ ಇತಿಶ್ರೀ
ಪೊನ್ನಂಪೇಟೆ: ತಾಲೂಕಿನ ಬೆಸಗೂರು ಗ್ರಾಮದಲ್ಲಿ ಕಳೆದ ಒಂದು ತಿಂಗಳಿನಿಂದ ಗ್ರಾಮಸ್ಥರಿಗೆ ತಲೆನೋವಾಗಿದ್ದ ಹುಲಿಯ ಉಪಟಳಕ್ಕೆ ಇದೀಗ ತಾತ್ಕಾಲಿಕ ಇತಿಶ್ರೀ ಹಾಡಲಾಗಿದೆ. 8ರಂದು ಮೂರು ಹಸುಗಳನ್ನು ಕೊಂದು ಹಾಕಿ ಹುಲಿಯನ್ನು ಮಂಗಳವಾರ ಸಂಜೆ ಸೆರೆ ಹಿಡಿಯಲಾಗಿದೆ.
ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ನೇತೃತ್ವದಲ್ಲಿ ಗ್ರಾಮಸ್ಥರು ನಡೆಸಿದ ಪ್ರತಿಭಟನೆಗೆ ಮಣಿದ ಸರ್ಕಾರ ಅರಣ್ಯ ಇಲಾಖೆಗೆ ಹುಲಿಯನ್ನು ಸೆರೆಹಿಡಿಯಲು ಅನುಮತಿ ನೀಡಿತು. 10 ರಂದು ಅರಣ್ಯ ಇಲಾಖೆ ಮತ್ತಿಗೋಡು ಸಾಕಾನೆ ಆನೆ ಶಿಬಿರದಿಂದ ಭೀಮ ಮತ್ತು ಬಳ್ಳೆ ಶಿಬಿರದಿಂದ ಮಹೇಂದ್ರ ಸಾಕಾನೆಗಳನ್ನು ಬಳಸಿಕೊಳ್ಳಲಾಯಿತು.
ಕಾರ್ಯಾಚರಣೆಗೆ ಎರಡು ಥರ್ಮಲ್ ಡ್ರೋನ್‌ಗಳನ್ನು ಬಳಸಿಕೊಂಡು ಹುಲಿಯ ಚಲನವಲನಗಳ ಮೇಲೆ ನಿಗಾ ಇಟ್ಟು ಥರ್ಮಲ್ ಸ್ಕ್ರೀನ್ ನಲ್ಲಿ ವೀಕ್ಷಿಸಲಾಯಿತು. ಆನೆಗಳ ಸಹಾಯದಿಂದ ಅರಿವಳಿಕೆ ತಜ್ಞ ಡಾ. ಪ್ರಕಾಶ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಇರುವ ಸ್ಥಳಕ್ಕೆ ಹೋಗಿ ಹುಲಿಗೆ ಅರಿವಳಿಕೆ ನೀಡಿ ಸೆರೆ ಹಿಡಿದರು. ಹುಲಿಯನ್ನು ಬೋನಿನಲ್ಲಿ ಬಂಧಿಸಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಯಿತು.
ಸಿಎಫ್ ಸೋನಂ ರುಸ್ನಿ ಸ್ಥಳಕ್ಕೆ ಭೇಟಿ ನೀಡಿ ಎಸಿಎಫ್ ಗೋಪಾಲ್ ಹಾಗೂ ತಿತಿಮತಿ ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿ ಗಂಗಾಧರ್ ಹುಲಿ ಸೆರೆಹಿಡಿಯಲು ನಿರ್ದೇಶನ ನೀಡಿದರು. ಕಾರ್ಯಾಚರಣೆಯಲ್ಲಿ ಪೊನ್ನಂಪೇಟೆ ವಿಭಾಗದ ಡಿಎಫ್‌ಒ ಜಗನ್ನಾಥ್, ಎಸಿಎಫ್ ಗೋಪಾಲ್ ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿ ಗಂಗಾಧರ್, ಉಪವಲಯ ಅರಣ್ಯ ಅಧಿಕಾರಿ ದಿವಾಕರ್, ಗಸ್ತು ಅರಣ್ಯ ಪಾಲಕ ಅಣ್ಣಯ್ಯ ಹಾಗೂ ಪೊನ್ನಂಪೇಟೆ ವಲಯ ,ತಿತಿಮತಿ ವಲಯ ,ತಿತಿಮತಿ ಆನೆ ಕಾರ್ಯಪಡೆ ಹಾಗೂ ಆರ್‌ಆರ್‌ಟಿ ಸೇರಿದಂತೆ 80ಕ್ಕೂ ಅಧಿಕ ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.
ಕಾಟಾಚಾರಕ್ಕೆ ಕ್ಯಾಮರಾ ಇಡಬೇಡಿ: ಬೆಸಗೂರಿನಲ್ಲಿ ಒಂದು ತಿಂಗಳಿನಿಂದ 7 ಹಸುಗಳನ್ನು ಬಲಿ ತೆಗೆಯುವವರೆಗೆ ಅರಣ್ಯ ಇಲಾಖೆಯವರು ಏನು ಮಾಡುತ್ತಿದ್ದೀರಿ? ಒಂದು ಹಸುವನ್ನು ಹುಲಿ ಕೊಲ್ಲುವಾಗಲೇ ಅದನ್ನು ಹಿಡಿಯುವ ಪ್ರಯತ್ನ ಮಾಡಿದಿದ್ದರೆ ಆರು ಜೀವಗಳು ಉಳಿಯುತ್ತಿತ್ತು, ದಾದಾ ಸೋಮಯ್ಯ ಅವರ ಎರಡು ಹಸುಗಳನ್ನು ಕೊಂದಾಗ ಕಾಟಾಚಾರಕ್ಕೆ ಹೋಗಿ ಕ್ಯಾಮರಾ ಇಡುವ ಕೆಲಸ ಮಾಡುವ ಬದಲು ಮೊದಲೇ ಹುಲಿಯನ್ನು ಸೆರೆಹಿಡಿಯಲು ಸರ್ಕಾರದಿಂದ ಅನುಮತಿ ಪಡೆಯುವ ಪ್ರಯತ್ನ ಏಕೆ ಮಾಡಲಿಲ್ಲ ಎಂಬುವುದು ಗ್ರಾಮಸ್ಥರ ಆಕ್ರೋಶ.
ಇನ್ನಾದರೂ ಅರಣ್ಯ ಇಲಾಖೆಯವರು ಸರಿಯಾಗಿ ಕೆಲಸ ಮಾಡಲಿ. ಒಂದು ಹಸುವನ್ನು ಹುಲಿ ಕೊಂದರೆ ಸರ್ಕಾರದಿಂದ 37500 ರೂ. ಪರಿಹಾರವಾಗಿ ನೀಡುತ್ತದೆ. ಇವತ್ತಿನ ಬೆಲೆಗೆ ಒಂದು ಹಸು 70 ರಿಂದ 80 ಸಾವಿರ ರೂ. ಗಳಷ್ಟು ಬೆಲೆಬಾಳುತ್ತದೆ. ಅದೇ ಬೆಲೆಯನ್ನು ಕೊಡಬೇಕು. ಹಸು ಸತ್ತಾಗ ಶವ ಪರೀಕ್ಷೆಯನ್ನು ಪಶು ವೈದ್ಯಾಧಿಕಾರಿ ಸ್ಥಳದಲ್ಲೇ ಮಾಡಿ ಸಾವಿಗೆ ನಿಖರ ಕಾರಣ ಏನು ಎಂಬುದನ್ನು ವರದಿ ಸಿದ್ಧಪಡಿಸಬೇಕು. ಕಾಟಾಚಾರಕ್ಕೆ ಹಸುವಿನ ಶವ ಪರೀಕ್ಷೆ ಮಾಡುವುದನ್ನು ನಿಲ್ಲಿಸಲಿ.
ಕಾಡ್ಯಮಾಡ ಮನು ಸೋಮಯ್ಯ, ಜಿಲ್ಲಾ ರೈತ ಸಂಘ ಅಧ್ಯಕ್ಷ.
ನನ್ನ ಎರಡು ಹಸುಗಳು ಬಲಿಯಾಗಿದೆ. ಒಂದು ಹಸುವಿನ ಬೆಲೆ 1.5 ಲಕ್ಷ ರೂ. ಸರ್ಕಾರ ಕೊಡುವ ಪರಿಹಾರ ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಹಾಗೆ ಆಗಿದೆ. ಸರ್ಕಾರ ಹುಲಿ ಹೇಗೆ ಬೆಲೆಬಾಳುವ ಪ್ರಾಣಿಯೋ ಹಾಗೆಯೇ ರೈತರಿಗೂ ಹಸು ಅಷ್ಟೇ ಮುಖ್ಯವಾದ ಪ್ರಾಣಿ. ಸರ್ಕಾರ ರೈತರ ಬಗ್ಗೆ ಕಾಳಜಿ ತೋರಿಸಿ ಪರಿಹಾರ ಮೊತ್ತವನ್ನು ಏರಿಸಲಿ.
ಬಾಚಮಾಡ ರಾಜಪ್ಪ ಪ್ರಕಾಶ್, ರೈತ ಬೆಸುಗೂರು
ಹಸುಗಳನ್ನು ಬೇಟೆಯಾಡಿದ ಹುಲಿಯನ್ನು ಹಿಡಿದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗಿದೆ. ದಾದಾ ಸೋಮಯ್ಯ ಅವರ ಎರಡು ಹಸುಗಳಲ್ಲಿ ಒಂದಕ್ಕೆ ಈಗಾಗಲೇ ಪರಿಹಾರ ನೀಡಲಾಗಿದೆ. ಇನ್ನೊಂದಕ್ಕೆ ಶೀಘ್ರದಲ್ಲೇ ಪರಿಹಾರ ಕೊಡಲಾಗುವುದು. ಮುಂದಿನ ದಿನಗಳಲ್ಲಿ ಪೊನ್ನಂಪೇಟೆ ಭಾಗದಲ್ಲಿ ಹುಲಿ ಮತ್ತೆ ಕಂಡರೆ ಸಅದನ್ನು ಸೆರೆಹಿಡಿಯಲು ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು.
ಎಸಿಎಫ್ ಗೋಪಾಲ್, ಪೊನ್ನಂಪೇಟೆ ವಲಯ.
ಒಂದು ಹುಲಿಯನ್ನು ಹಿಡಿದ ಮಾತ್ರಕ್ಕೆ ಎಲ್ಲ ಮುಗಿಯಿತು ಎನ್ನುವ ಹಾಗಿಲ್ಲ. ವರ್ಷಗಳಿಂದ ಈ ಭಾಗದ ರೈತರು ಅನುಭವಿಸುತ್ತಿರುವ ಗೋಳು. ಭಯದಿಂದಲೇ ತೋಟಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಮ್ಮೆ ಹುಲಿ ಬಂದರೆ ಅದರ ಬೇಟೆ ಮನುಷ್ಯರೇ ಆಗುವ ಸಾಧ್ಯತೆಗಳಿದೆ. ಕೀರೆ ಹೊಳೆಯ ದಡದಲ್ಲಿ ನಮ್ಮ ಗ್ರಾಮ ಇರುವುದರಿಂದ ಹುಲಿಗಳ ಉಪಟಳ ನಿಲ್ಲಲ್ಲ.
ಬಲ್ಲಿಮಾಡ ಸಂಪತ್, ರೈತ, ಬೆಸುಗೂರು.