ಕುಶಾಲನಗರ ತಾಲೂಕು ತೊರೆನೂರು ಗ್ರಾಮದಲ್ಲಿ ಕಣಿವೆ ಕಟ್ಟೆ ಕೊಡಗು ವತಿಯಿಂದ ಏರ್ಪಡಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಸಂದೇಶದ ಕುರಿತ ಉಪನ್ಯಾಸದಲ್ಲಿ ಸಾಹಿತಿ ಡಾ ಜೆ. ಸೋಮಣ್ಣ ಮಾತನಾಡಿದರು. ಭಾರದ್ವಾಜ್ ಕೆ. ಆನಂದತೀರ್ಥ, ಆರ್.ಕೆ. ಬಾಲಚಂದ್ರ, ಬಿ.ಎಸ್.ಲೋಕೇಶ್ ಸಾಗರ್, ಎಚ್.ವಿ. ಶಿವಪ್ಪ, ಸೂದನ ರತ್ನಾವತಿ, ಕೆ.ವಿ.ಉಮೇಶ್ ಮತ್ತಿತರರು ಇದ್ದರು.
ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸುವುದರೊಂದಿಗೆ ಸಮಾಜದಲ್ಲಿ ಸರ್ವರಿಗೂ ಸಮ ಬಾಳು, ಸರ್ವರಿಗೂ ಸಮಪಾಲು ಸಿಗಬೇಕು ಎಂದು ಹಂಬಲಿಸಿದವರು ಕನ್ನಡದ ಮೇರು ಕವಿ ಕುವೆಂಪು ಎಂದು ಸಾಹಿತಿ ಡಾ ಜೆ. ಸೋಮಣ್ಣ ಹೇಳಿದರು. ಕುಶಾಲನಗರ ತಾಲೂಕು ತೊರೆನೂರು ಗ್ರಾಮದ ರೇವೇಗೌಡನಕೊಪ್ಪಲು ಶನೇಶ್ವರ ದೇವಸ್ಥಾನ ಆವರಣದಲ್ಲಿ ಕಣಿವೆ ಕಟ್ಟೆ ಕೊಡಗು ಬಳಗದ ವತಿಯಿಂದ ಈಚೆಗೆ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಅವರ ವಿಶ್ವ ಮಾನವ ಸಂದೇಶದ ಮಹತ್ವ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುವೆಂಪು ವೈಚಾರಿಕತೆ ನೆಲಗಟ್ಟೆಯಲ್ಲಿ ತಮ್ಮ ಸಾಹಿತ್ಯ ರಚಿಸುವ ಮೂಲಕ ಜನರಲ್ಲಿ ವೈಚಾರಿಕತೆ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಹುಟ್ಟುವ ಪ್ರತಿ ಮಗುವೂ ವಿಶ್ವಮಾನವನೇ. ಆ ನಂತರ ಆ ಮಗುವನ್ನು ಜಾತಿ, ಮತದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು. ನೈತಿಕ ವ್ಯಕ್ತಿತ್ವದಿಂದ ಮುಖ್ಯನಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಹಾಗಾಗಿ ಕುವೆಂಪು ಅವರ ಜಾತ್ಯತೀತ ಮನೋಭಾವದಿಂದ ಮೂಡಿ ಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ. ಬುದ್ಧ, ಬಸವರ ಹಾಗೆ ಸಮಾಜದಲ್ಲಿ ವ್ಯಕ್ತಿ ಸ್ವತಂತ್ರವಾಗಿ, ವೈಚಾರಿಕ ದೃಷ್ಟಿಕೋನವನ್ನು ಬೆಳೆಸಿಕೊಂಡುವ ವಿಶ್ವ ಮಾನವನಾಗಿ ರೂಪುಗೊಳ್ಳ ಬೇಕು ಎಂಬುದು ಕುವೆಂಪು ಅವರ ಸಂದೇಶವಾಗಿದೆ.
ನಮ್ಮ ಮನಸ್ಸುಗಳು ಜಾತಿ-ಧರ್ಮದ ಹೆಸರಿನಲ್ಲಿ ಮತ ಮೌಢ್ಯಗಳಿಗೆ ಕಟ್ಟುಬಿದ್ದು ಕುಬ್ಜಗೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ ಕುವೆಂಪು ನೀಡಿದ ವಿಶ್ವಮಾನವ ಸಂದೇಶ ಬಹಳ ಪ್ರಸ್ತುತ ಎನ್ನಿಸಿದೆ. ಓ ನನ್ನ ಚೇತನ ಆಗು ನೀ ಅನಿಕೇತನ ಎಂಬ ಅವರ ಕವಿತೆ ವಿಶ್ವಮಾನವ ಸಂದೇಶದ ಬಹು ಆಶಯವನ್ನು ಬಿತ್ತುತ್ತದೆ ಎಂದರು.
ಕುವೆಂಪು ಸಾಹಿತ್ಯ ರಚನೆ ಕುರಿತು ಮಾತನಾಡಿದ ಜಿಲ್ಲಾ ಲೀಡ್ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಆರ್.ಕೆ. ಬಾಲಚಂದ್ರ, ಕುವೆಂಪು ವಿಶ್ವ ಕಂಡ ಅಪ್ರತಿಮ ಸಾಹಿತಿ, ಚಿಂತಕ. ಯಾವುದೇ ಸಾಹಿತಿಗಳಿಗೂ ಕಡಿಮೆ ಇಲ್ಲದಂತೆ ನೂರಾರು ಸಾಹಿತ್ಯಗಳನ್ನು ರಚಿಸುವ ಮೂಲಕ ಸಮಾಜದಲ್ಲಿ ವೈಚಾರಿಕ ಕ್ರಾಂತಿ ಬೆಳೆಸಲು ಪ್ರಮುಖ ಕಾರಣರಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ ಅಪಾರ. ಅವರ ವೈಚಾರಿಕ ನಿಲುವು ಮತ್ತು ಆದರ್ಶಗಳು ಇಂದಿಗೂ ನಮಗೆ ದಾರಿ ದೀಪ ಎಂದು ಹೇಳಿದರು.
ಸಾಹಿತಿ ಕಣಿವೆ ಭಾರದ್ವಾಜ ಕೆ. ಆನಂದತೀರ್ಥ ಮಾತನಾಡಿ, ಕುವೆಂಪು ಅವರ ಬದುಕಿನ ಒಳನೋಟ ಹಾಗೂ ಅವರ ವೈಚಾರಿಕ ಚಿಂತನೆ ಬಗ್ಗೆ ತಿಳಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿಕಟ ಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಕಾರ್ಯಕ್ರಮ ಉದ್ಘಾಟಿಸಿದರು. ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ.ಎಸ್.ಕೃಷ್ಣೇಗೌಡ ಕಾರ್ಯಕ್ರಮದ ಆತಿಥ್ಯ ವಹಿಸಿದ್ದರು.
ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಎಚ್.ವಿ. ಶಿವಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಎಸ್.ಬಿ.ಎಂ. ನಿವೃತ್ತ ಹಿರಿಯ ಅಧಿಕಾರಿ ಸೂದನ ರತ್ನಾವತಿ, ಕಣಿವೆ ಕಟ್ಟೆಯ ಪ್ರಧಾನ ಸಂಚಾಲಕ ಕೆ.ವಿ. ಉಮೇಶ್, ಸಂಚಾಲಕ ಟಿ.ಜಿ. ಪ್ರೇಮಕುಮಾರ್, ಎಂ.ಎನ್. ವೆಂಕಟನಾಯಕ್, ಲೇಖಕರಾದ ಸುನೀತಾ ಲೋಕೇಶ್, ಲೀಲಾಕುಮಾರಿ ತೊಡಿಕಾನ, ಮಾಲಾದೇವಿ ಮೂರ್ತಿ, ಕವಿಗಳಾದ ಟಿ.ಎಚ್. ಸುಕುಮಾರ್, ಕವಿತ ಪುಟ್ಟೇಗೌಡ, ಗ್ರಾ.ಪಂ.ಮಾಜಿ ಸದಸ್ಯೆ ನಿಂಗಾಜಮ್ಮ ಮತ್ತಿತರರು ಇದ್ದರು.